Advertisement

ಪುತ್ತೂರು ಪಾರ್ಕಿಂಗ್‌ ಸಮಸ್ಯೆ: ಜಂಟಿ ಸರ್ವೇ ನಡೆಸಲು ತೀರ್ಮಾನ

07:43 PM Sep 27, 2021 | Team Udayavani |

ಪುತ್ತೂರು: ನಗರದ ಪಾರ್ಕಿಂಗ್‌ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಉಪಸ್ಥಿತಿಯಲ್ಲಿ ಜಂಟಿ ಸರ್ವೇ ನಡೆಸಲು ನಗರಸಭೆಯಲ್ಲಿ ನಡೆದೆ ಸಮಾಲೋಚನ ಸಭೆಯಲ್ಲಿ ನಿರ್ಧರಿಸಲಾಗಿದೆ.

Advertisement

ನಗರದ ಸಂಚಾರ ವ್ಯವಸ್ಥೆ ಕುರಿತು ಸಭೆಯು ನಗರಸಭೆಯ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಜೀವಂಧರ್‌ ಜೈನ್‌ ಅಧ್ಯಕ್ಷತೆಯಲ್ಲಿ ನಡೆಯಿತು.

ಪೌರಾಯುಕ್ತ ಮಧು ಎಸ್‌. ಮನೋಹರ್‌ ಪಾರ್ಕಿಂಗ್‌ ವ್ಯವಸ್ಥೆಯ ಬಗ್ಗೆ ನಗರಸಭೆ ವತಿಯಿಂದ ರಚಿಸಲಾದ ಕರಡು ಪಟ್ಟಿಯನ್ನು ಮಂಡಿಸಿದರು.

ದರ್ಬೆಯಿಂದ ಬೊಳುವಾರು ತನಕ ರಸ್ತೆ ಇಕ್ಕೆಲಗಳಲ್ಲಿ ವಾಹನ ಪಾರ್ಕಿಂಗ್‌ಗೆ ಸ್ಥಳ ನಿಗದಿಪಡಿಸುವಿಕೆ ಕಠಿನ. ಹಾಗಾಗಿ ಪೊಲೀಸ್‌, ನಗರಸಭೆ, ಆರ್‌ಟಿಒ ಜಂಟಿಯಾಗಿ ಸರ್ವೇ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಇಲಾಖಾಧಿಕಾರಿಗಳು ಹೇಳಿದರು. ಇದಕ್ಕೆ ಸಭೆ ಒಪ್ಪಿಗೆ ಸೂಚಿಸಿತು.

ನಗರದಲ್ಲಿ ಸಂಚಾರ ನಿಯಮ ಮೀರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು 2 ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿ ಸಲು ಕ್ರಮ ಕೈಗೊಳ್ಳುವುದಾಗಿ ಡಿವೈಎಸ್‌ಪಿ ಗಾನಾ ಪಿ. ಕುಮಾರ್‌ ಅವರು ಹೇಳಿದರು.

Advertisement

ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 504 ಮಂದಿಯಲ್ಲಿ ಪ್ರಕರಣ ಪತ್ತೆ : 893 ಸೋಂಕಿತರು ಗುಣಮುಖ

ಸಂಚಾರ ಠಾಣಾ ಎಸ್‌.ಐ.ರಾಮ ನಾಯ್ಕ ಮಾತನಾಡಿ, ನಗರದ ವಾಹನ ದಟ್ಟಣೆ ಗಮನಿಸಿದರೆ ದಿನ ಬಿಟ್ಟು ದಿನ ರಸ್ತೆ ಇಕ್ಕೆಲಗಳಲ್ಲಿ ಪಾರ್ಕಿಂಗ್‌ ಮಾಡುವ ನಿಯಮ ಜಾರಿ ಮಾಡುವುದು ಕಷ್ಟ. ಎರಡೂ ದಿಕ್ಕಿನಲ್ಲಿ ಸಮಾನ ಪ್ರಮಾಣದ ಸ್ಥಳಾವಕಾಶ ಇದ್ದರೆ ಮಾತ್ರ ಈ ನಿಯಮ ಜಾರಿ ಮಾಡಬಹುದಾಗಿದ್ದು, ನಗರದಲ್ಲಿ ಅಂತಹ ಅವಕಾಶ ಕಡಿಮೆ ಇದೆ. ಫುಟ್‌ಪಾತ್‌ಗಳಲ್ಲಿ ವಾಹನ ನಿಲುಗಡೆ ಮಾಡದ ಹಾಗೆ ಕ್ರಮ ಕೈಗೊಳ್ಳಬೇಕಿದೆ ಎಂದರು.

28 ಆಟೋ ಪಾರ್ಕ್‌
ನಗರದಲ್ಲಿ ನಾಲ್ಕು ಸಾವಿರಕ್ಕೂ ಮಿಕ್ಕಿ ಆಟೋಗಳಿವೆ. 2012ರ ಜಿಲ್ಲಾಧಿಕಾರಿ ಸುತ್ತೋಲೆ ಅನ್ವಯ 22 ಆಟೋ ಪಾರ್ಕ್‌ ಗಳಿವೆ. ಪ್ರಸ್ತುತ ಅದನ್ನು 28 ಕ್ಕೆ ಏರಿಕೆ ಮಾಡಲು ಸ್ಥಳ ಗುರುತಿಸಿರುವ ಬಗ್ಗೆ ಪೌರಾಯುಕ್ತರು ಸಭೆಗೆ ತಿಳಿಸಿದರು. ಉತ್ತರಿಸಿದ ಎಸ್‌ಐ ರಾಮ ನಾಯ್ಕ, ರಿಕ್ಷಾ ಪಾರ್ಕಿಂಗ್‌ಗಳಲ್ಲಿ ಇಂತಿಷ್ಟು ಆಟೋಗಳಿಗೆ ನಿಲುಗಡೆಗೆ ಅವಕಾಶ ನೀಡಬೇಕು. ಕೆಲವೆಡೆ ಸಾಮರ್ಥ್ಯಕ್ಕಿಂತ ಹೆಚ್ಚು ಆಟೋ ನಿಲ್ಲಿಸಲಾಗುತ್ತಿದೆ. ಇದರಿಂದ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ ಎಂದರು.

ಭೂ ಸ್ವಾಧೀನಕ್ಕೆ ನಿರ್ಧಾರ
ಜೀವಂಧರ್‌ ಜೈನ್‌ ಮಾತನಾಡಿ, ನಗರದಲ್ಲಿ ಪಾರ್ಕಿಂಗ್‌ಗೆ ಜಾಗದ ಕೊರತೆ ಇದೆ. ಹಾಗಾಗಿ ಖಾಸಗಿ ಜಾಗ ಭೂ ಸ್ವಾಧೀನಕ್ಕೆ ನಗರಾಡಳಿತ ಸಿದ್ಧವಾಗಿದೆ. ಈ ಹಿಂದೆ ಅರಣ್ಯ ಇಲಾಖೆಗೆ ಸೇರಿದ 1.5 ಎಕ್ರೆ ಜಾಗವನ್ನು ಪಾರ್ಕಿಂಗ್‌ಗೆ ಬಳಸಿ ಪರ್ಯಾಯವಾಗಿ ಇಲಾಖೆಗೆ 3 ಎಕ್ರೆ ಜಾಗ ಒದಗಿಸುವ ಬಗ್ಗೆ ಮಾತುಕತೆ ನಡೆದು ಕಡತ ಸರಕಾರದ ಹಂತದಲ್ಲಿ ಬಾಕಿ ಇರುವುದರಿಂದ ಪರ್ಯಾಯ ದಾರಿಯ ಅಗತ್ಯ ಇದೆ. ಪ್ರಸ್ತುತ 2 ಪೇ ಪಾರ್ಕಿಂಗ್‌ಗಳಿವೆ. ದರ್ಬೆ ಮುಖ್ಯ ರಸ್ತೆಯ ಬದಿಯ ಭಾವನಾ ಸರ್ವಿಸ್‌ ಸ್ಟೇಶನ್‌ ಬಳಿ ಖಾಸಗಿ ಜಾಗವನ್ನು ಪಾರ್ಕಿಂ ಗ್‌ಗೆ ಬಳಸುವ ಬಗ್ಗೆ ಭೂ ಮಾಲಕರ ಜತೆ ಚರ್ಚಿಸಲಾಗುವುದು ಎಂದರು. ಪುಡಾ ಅಧ್ಯಕ್ಷ ಭಾಮಿ ಅಶೋಕ್‌ ಶೆಣೈ, ನಗರಸಭೆ ಸ್ಥಾಯೀ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು ಉಪಸ್ಥಿತರಿದ್ದರು.

ಸ್ಪೀಡ್‌ ಬ್ರೇಕರ್‌ ಝೀಬ್ರಾ ಕ್ರಾಸಿಂಗ್‌
ನಗರದ ವಿವಿಧೆಡೆ ವಾಹನಗಳ ವೇಗ ನಿಯಂತ್ರಣಕ್ಕೆ ಪೂರಕವಾಗಿ 14 ಕಡೆಗಳಲ್ಲಿ ಸ್ಪೀಡ್‌ ಬ್ರೇಕರ್‌ ಹಾಗೂ ನಾಲ್ಕು ಕಡೆಗಳಲ್ಲಿ ಝೀಬ್ರಾ ಕ್ರಾಸಿಂಗ್‌ ಅಳವಡಿಸಲು ಸಭೆಯಲ್ಲಿ ಚರ್ಚೆ ನಡೆಯಿತು. ಪಾರ್ಕಿಂಗ್‌ ಸ್ಥಳಗಳಲ್ಲಿ ನಾಮಫಲಕ, ಶಾಲಾ ವಠಾರಗಳಲ್ಲಿ ಫಲಕ ಅಳವಡಿಕೆ, ನೋ ಪಾರ್ಕಿಂಗ್‌ ಫಲಕ ಇತ್ಯಾದಿಗಳ ಅಳವಡಿಕೆ ವಿಚಾರ ಸಭೆಯಲ್ಲಿ ಪ್ರಸ್ತಾವಗೊಂಡಿತು. ಆರ್‌ಟಿಒ ಆನಂದ ಗೌಡ ವಿವಿಧ ಸಲಹೆ ಸೂಚನೆ ನೀಡಿದರು.

ಸುದಿನ ವರದಿ
ನಗರದಲ್ಲಿನ ಪಾರ್ಕಿಂಗ್‌ ಅವ್ಯವಸ್ಥೆಯ ಕುರಿತಂತೆ ಉದಯವಾಣಿ ಸುದಿನ ಕೆಲವು ದಿನಗಳ ಹಿಂದೆ ವಿಸ್ತೃತ ವರದಿ ಪ್ರಕಟಿಸಿ ನಗರಡಾಳಿತದ ಗಮನ ಸೆಳೆದಿತ್ತು. ಅದಕ್ಕೆ ಪೂರಕವಾಗಿ ಸಮಾಲೋಚನೆ ಸಭೆಯು ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next