Advertisement

ಪುತ್ತೂರು: ಪಾರ್ಕಿಂಗ್‌ನದ್ದೇ ಅತೀ ದೊಡ್ಡ ಸಮಸ್ಯೆ

12:27 AM Aug 07, 2019 | Team Udayavani |

ಪುತ್ತೂರು: ನಗರ ವ್ಯಾಪ್ತಿಯಲ್ಲಿ ವಾಹನ ಪಾರ್ಕಿಂಗ್‌ ಮಾಡಲು ಸಮಸ್ಯೆ ಉಂಟಾಗುತ್ತಿದೆ. ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿದರೆ ಪೊಲೀಸರು ಕೇಸು ಹಾಕುತ್ತಾರೆ. ಅವರು ಕೇಸು ಹಾಕಬಾರದು ಎನ್ನುವುದಿಲ್ಲ. ಪಾರ್ಕಿಂಗ್‌ ಜಾಗ ತೋರಿಸಿ ಬಳಿಕ ಕೇಸು ಹಾಕಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಹೇಳಿದರು.

Advertisement

ಅವರು ಮಂಗಳವಾರ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಟ್ಟಡ ನಿರ್ಮಾಣದ ವೇಳೆ ಪಾರ್ಕಿಂಗ್‌ಗೆ ಸ್ಥಳ ಗುರುತಿಸಿ, ಕಟ್ಟಡ ಪರವಾನಿಗೆ ನವೀಕರಣ ವೇಳೆ ಪಾರ್ಕಿಂಗ್‌ ಸ್ಥಳದಲ್ಲಿ ಅಂಗಡಿ ನಿರ್ಮಾಣ ಮಾಡಿ ಪರವಾನಿಗೆ ಪಡೆಯುತ್ತಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ನಗರಸಭೆ ವ್ಯವಸ್ಥೆ ಮಾಡಬೇಕು
ಸಂಚಾರ ಪೊಲೀಸ್‌ ಠಾಣೆಯ ಪ್ರಭಾರ ಎಸ್‌ಐ ಚೆಲುವಯ್ಯ ಮಾತನಾಡಿ, ಪುತ್ತೂರಿನಲ್ಲಿ ಪಾರ್ಕಿಂಗ್‌ ಸಮಸ್ಯೆ ನಿವಾರಿಸಲು ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆದಿದೆ. ವಾರದಲ್ಲಿ ಇಂತಿಷ್ಟು ದಿನ ರಸ್ತೆಯ ಒಂದು ಭಾಗದಲ್ಲಿ ಮಾತ್ರ ವಾಹನ ನಿಲ್ಲಿಸುವ ಚಿಂತನೆ ನಡೆದಿದೆ. ದ್ವಿಚಕ್ರ ವಾಹನಕ್ಕೆ ಸಂಬಂಧಿಸಿ ಪಾರ್ಕಿಂಗ್‌ ಸಮಸ್ಯೆ ಇಲ್ಲ. ಕಾರುಗಳಿಗೆ ಪಾರ್ಕಿಂಗ್‌ ಸಮಸ್ಯೆ ಆಗಿದೆ. ನಗರಸಭೆ ಪಾರ್ಕಿಂಗ್‌ ವ್ಯವಸ್ಥೆ ಮಾಡಿಕೊಡಬೇಕು ಎಂದರು.

ಪಿ.ಜಿ.ಗಳಲ್ಲಿ ಅವ್ಯವಹಾರ
ನಗರಸಭಾ ವ್ಯಾಪ್ತಿಯ ಖಾಸಗಿ ಕಾಲೇಜು ಪರಿಸರದಲ್ಲಿರುವ ಪಿ.ಜಿ.ಗಳಲ್ಲಿ ಮೂಲ ಸೌಕರ್ಯ ಇಲ್ಲದೆ ಇರುವುದು ಬೆಳಕಿಗೆ ಬಂದಿದೆ. ಅನಧಿಕೃತ ಪಿ.ಜಿ.ಗಳ ಸಮೀಕ್ಷೆ ನಡೆಸಬೇಕು ಎಂದು ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಇರುವಂತೆ ಪಿ.ಜಿ.ಗಳೂ ಸೌಲಭ್ಯ ಒದಗಿಸಬೇಕು. ಕೆಲವೊಂದು ಪಿ.ಜಿ.ಗಳಲ್ಲಿ ಲೈಂಗಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಯಾವುದೋ ಒಂದು ಪಿ.ಜಿ.ಯಿಂದಾಗಿ ಶಿಕ್ಷಣ ಸಂಸ್ಥೆಗಳ ಹೆಸರು ಹಾಳಾಗುತ್ತಿವೆ. ಈ ನಿಟ್ಟಿನಲ್ಲಿ ನಿಯಮಗಳನ್ನು ಪಾಲಿಸುವ ಪಿ.ಜಿ.ಗಳಿಗೆ ಮಾತ್ರ ಅವಕಾಶ ಕೊಡುವಂತೆ ಸೂಚಿಸಿದರು.

ನಗರಸಭೆ ಎಂಜಿನಿಯರ್‌ ಶ್ರೀಧರ್‌, ಅನಧಿಕೃತ ಪಿ.ಜಿ.ಗಳಿಗೆ ತೆರಳಿ ಮೂಲ ಸೌಕರ್ಯ ಅಥವಾ ಪರವಾನಿಗೆ ಇಲ್ಲದೆ ನಡೆಸುತ್ತಿರುವ ಸಂಸ್ಥೆಗಳಿಗೆ ನೋಟಿಸ್‌ ನೀಡಿದ್ದೇವೆ. ಆ ಸಂಸ್ಥೆಗಳಲ್ಲಿ ಸಮಯ ಪಾಲನೆ, ಹಾಜರಿ ಪುಸ್ತಕ, ಸಿಸಿ ಕೆಮರಾ ಅಳವಡಿಸಲು ಸೂಚನೆ ನೀಡಲಾಗಿದೆ ಎಂದರು.

ಕಿರು ಸೇತುವೆಗೆ ಅರ್ಜಿ
ಮಳೆಹಾನಿ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಶಾಲಾ ಸಮೀಪದಲ್ಲಿ ಕಿರು ಸೇತುವೆ ನಿರ್ಮಿಸಲು 16 ಶಾಲೆಗಳು ಅರ್ಜಿ ಸಲ್ಲಿಸಿವೆ ಎಂದು ಪ್ರಭಾರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್‌ ಮಾಹಿತಿ ನೀಡಿದರು. ಅಧ್ಯಕ್ಷರು ಮಾತನಾಡಿ, ಇನ್ನೂ ಹಲವು ಶಾಲೆಗಳನ್ನು ಸಂಪರ್ಕ ಮಾಡಿ. ಕಿರು ಸೇತುವೆ ಬೇಡಿಕೆ ಇದ್ದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು. ಲೋಕೋಪಯೋಗಿ ಇಲಾಖೆಯ ಸ.ಕಾ.ನಿ. ಎಂಜಿನಿಯರ್‌ ರಾಜಾರಾಮ್‌ ಮಾತನಾಡಿ, 5.84 ಕೋಟಿ ರೂ. ಅನುದಾನ ಕಿರು ಸೇತುವೆ ನಿರ್ಮಾಣಕ್ಕೆ ಬಂದಿದೆ ಎಂದರು.

ಮುಳುಗು ಸೇತುವೆಗೆ ಮುಕ್ತಿ!
ಚೆಲ್ಯಡ್ಕ ಮುಳುಗು ಸೇತುವೆಗೆ ಪರ್ಯಾಯವಾಗಿ ಸರ್ವಋತು ಸೇತುವೆ ನಿರ್ಮಾಣಗೊಳಿಸಲು ಪ್ರಸ್ತುತ ನಬಾರ್ಡ್‌ 25ರ ಯೋಜನೆಯಡಿ ಅಂದಾಜುಪಟ್ಟಿ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಜಾರಾಮ್‌ ತಿಳಿಸಿದರು.

ಅಕ್ಕಿ ಏಕಿಲ್ಲ?
ಅಕ್ಷರ ದಾಸೋಹದ ಅಡಿಯಲ್ಲಿ ಶಾಲೆಗಳಿಗೆ ಜುಲೈ ತಿಂಗಳ ಅಕ್ಕಿ ವಿತರಣೆ ಆಗಿಲ್ಲ. ಇದರಿಂದ ಮಕ್ಕಳಿಗೆ ಸಮಸ್ಯೆ ಆಗಲಿದೆ. ಹಿರೇಬಂಡಾಡಿ ಶಾಲೆಯಲ್ಲ ಅಕ್ಕಿ ಇಲ್ಲವಂತೆ. ಸೋಮವಾರ ಮತ್ತು ಮಂಗಳವಾರ ಮಳೆಯ ಹಿನ್ನೆಲೆಯಿಂದ ಅಕ್ಕಿ ಸಮಸ್ಯೆ ನಿವಾರಣೆ ಆಗಿದೆ. ನಾಳೆಯ ಗತಿ ಏನು ಎಂದು ಅಧ್ಯಕ್ಷರು ಅಕ್ಷರ ದಾಸೋಹದ ಅಧಿಕಾರಿಗಳನ್ನು ಪ್ರಶ್ನಿಸಿದರು.

ಉತ್ತರಿಸಿದ ಅಧಿಕಾರಿ, ಈ ಹಿಂದಿನ ಟೆಂಡರ್‌ದಾರರು ಜುಲೈ ತಿಂಗಳ ಅಕ್ಕಿ ಪೂರೈಕೆ ಮಾಡದ ಹಿನ್ನೆಲೆಯಿಂದಾಗಿ ಸಮಸ್ಯೆ ಉದ್ಭವಿಸಿತ್ತು. ಒಬ್ಬರೇ ಟೆಂಡರ್‌ ಹಾಕಿದ್ದರಿಂದ ಇನ್ನೊಮ್ಮೆ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ. ಈ ಹಿಂದಿನ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಹಾಕಲಾಗಿದೆ. ಅಕ್ಕಿಯ ಸಮಸ್ಯೆ ಇದ್ದರೆ ಪಕ್ಕದ ಶಾಲೆಯಿಂದ ಪಡೆಯಲು ಆಯಾ ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಉರ್ಲಾಂಡಿಯಲ್ಲಿರುವ ಮೆಟ್ರಿಕ್‌ ಅನಂತರದ ಬಾಲಕರ ವಸತಿ ನಿಲಯದಲ್ಲಿ ಗಾಳಿ, ಮಳೆಗೆ ಶೀಟು ಹಾರಿ ಶ್ರೀ ಮಹಾಲಿಂಗೇಶ್ವರ ದೇವರ ದಯೆಯಿಂದ ದೊಡ್ಡ ಅನಾಹುತ ಆಗಿಲ್ಲ. ಸಾಲ್ಮರದಲ್ಲಿ ಇರುವ ವಸತಿ ನಿಲಯಕ್ಕೂ ಶೀಟು ಅಳವಡಿಸಲಾಗಿದೆ ಎನ್ನುವ ಮಾಹಿತಿ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿನ ಮಕ್ಕಳನ್ನೂ ಸ್ಥಳಾಂತರಿಸಿ ಎಂದು ಅಧ್ಯಕ್ಷರು ಹೇಳಿದರು.

ಮಂಗಗಳ ಹಾವಳಿ
ಮಂಗಗಳು ಕೃಷಿಯನ್ನು ಹಾಳು ಮಾಡುತ್ತಿವೆ ಎನ್ನುವ ಕುರಿತು ಕಳೆದ ಮಾಸಿಕ ಕೆಡಿಪಿ ಸಭೆಯಲ್ಲಿ ಪ್ರಸ್ತಾವ ಆಗಿತ್ತು. ಪಾಲನ ವರದಿಯಲ್ಲಿ ಅರಣ್ಯ ಅಧಿಕಾರಿಗಳು ನೆಡುತೋಪುಗಳನ್ನು ನಿರ್ಮಾಣ ಮಾಡುವ ಸಂದರ್ಭ ಹಣ್ಣಿನ ಗಿಡಗಳನ್ನು ಬೆಳೆಸುವ ಕಾರ್ಯ ಮಾಡಲಾಗುವುದು ಎಂದು ಉತ್ತರಿಸಿದರು. ಇದಕ್ಕೆ ಅಕ್ಷೇಪಿಸಿದ ಅಧ್ಯಕ್ಷರು, ಮಂಗಗಳ ಹಾವಳಿಯನ್ನು ತಪ್ಪಿಸಲು ತತ್‌ಕ್ಷಣದ ಪರಿಹಾರ ಏನಿದೆ ಎಂದು ಪ್ರಶ್ನಿಸಿದರು. ವೈಜ್ಞಾನಿಕ ಕ್ರಮ ವಹಿಸಬೇಕಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು.

ತಾ.ಪಂ. ಉಪಾಧ್ಯಕ್ಷೆ ಲಲಿತಾ ಈಶ್ವರ್‌, ಇಒ ನವೀನ್‌ ಕುಮಾರ್‌ ಭಂಡಾರಿ ಉಪಸ್ಥಿತರಿದ್ದರು. ಅಧಿಕಾರಿಗಳು ಪಾಲ್ಗೊಂಡಿದ್ದರು.

ಕುಂಬ್ರ ಮೆಸ್ಕಾಂ ಕಚೇರಿಗೆ ವಿದ್ಯುತ್‌ ಸಮಸ್ಯೆಯ ಕುರಿತು ಕಾಲ್ ಮಾಡಿದರೆ ಉಡಾಫೆ ಉತ್ತರ ನೀಡಿದ್ದಾರೆ. ಇಂತಹ ಹಲವು ದೂರುಗಳಿವೆ ಎಂದು ಅಧ್ಯಕ್ಷರು ಹೇಳಿದರು. ಈ ಕುರಿತು ಪರಿಶೀಲನೆ ಮಾಡುವುದಾಗಿ ಮೆಸ್ಕಾಂ ಎಂಜಿನಿಯರ್‌ ರಾಮಚಂದ್ರ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next