Advertisement

ಗುಜರಾತ್‌ನ ಭಿಲಾಡ್‌ ಬಳಿ 21 ದಿನಗಳಿಂದ ಪುತ್ತೂರಿನ ಯುವಕರು ಕಾರಲ್ಲೇ ‘ಲಾಕ್‌ಡೌನ್‌’

01:11 PM Apr 15, 2020 | Hari Prasad |

ಪುತ್ತೂರು / ಮಂಗಳೂರು: ವೃತ್ತಿಯಲ್ಲಿ ಅಡಕೆ ಸುಪಾರಿ ವ್ಯಾಪಾರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದ ಪುತ್ತೂರಿನ ಯುವಕರಿಬ್ಬರು 21 ದಿನಗಳಿಂದ ಗುಜರಾತ್‌ ರಾಜ್ಯದ ಚೆಕ್‌ ಪೋಸ್ಟ್‌ ಬಳಿ ಕಾರೊಂದರಲ್ಲಿ ಅನಾಥ ಬದುಕು ಸಾಗಿಸುತ್ತಾ ಆತಂಕದಲ್ಲಿದ್ದಾರೆ.

Advertisement

ಲಾಕ್‌ಡೌನ್‌ ಜಾರಿಗೊಳ್ಳುವ ಎರಡು ದಿನಗಳ ಮೊದಲು ಗುಜರಾತ್‌ ರಾಜ್ಯದ ರಾಜ್‌ಕೋಟಾದಿಂದ ಕಾರಿನಲ್ಲಿ ಪುತ್ತೂರಿಗೆ ಹೊರಟಿದ್ದ ಈ ಯುವಕರು ಸುಮಾರು 500 ಕಿ.ಮೀ. ದೂರ ಪ್ರಯಾಣ ಮಾಡಿದ್ದರು. ವಲ್ಸಾಡ್‌ ಜಿಲ್ಲೆಯ ಅಂಬರ್‌ಗಾಂವ್‌ ಭಿಲಾಡ್‌ ತಾಲೂಕಿನ ಚೆಕ್‌ ಪೋಸ್ಟ್‌ ಬಳಿ ಅವರನ್ನು ನಿಲ್ಲಿಸಿಕೊಳ್ಳಲಾಗಿದೆ.

ವಾಪಸ್‌ ಹೋಗಲಾಗದೆ, ಊರಿಗೂ ಬರಲಾಗದೆ ಒದ್ದಾಡುವಂತಾಗಿದೆ. ಪುತ್ತೂರಿನ ಸಾಮೆತ್ತಡ್ಕ ನಿವಾಸಿ ಆಶಿಕ್‌ ಹುಸೈನ್‌ ಹಾಗೂ ಕೆಮ್ಮಿಂಜೆ ಗ್ರಾಮದ ನಿವಾಸಿ ಮೊಹಮ್ಮದ್‌ ತಾಕೀನ್‌ ಮರೀಲ್‌ ಅಪರಿಚಿತ ಊರಿನಲ್ಲಿ ಈಗ ದಿನದ ಬಹುತೇಕ ಅವಧಿಯನ್ನು ಕಾರಿನಲ್ಲೇ ಕಳೆಯುವಂತಾಗಿದೆ.

ಆ ಊರಿನ ಸಹೃದಯರಾದ ಸಯ್ಯದ್‌ ಕಶ್ಯಪ್‌ ಎಂಬುವರು ಈ ಯುವಕರಿಗೆ ಅನ್ನ, ನೀರು ಕೊಡುತ್ತಿದ್ದಾರೆ. ಆದರೆ, ಯುವಕರ ಬಳಿ ಬಟ್ಟೆ, ಇತರ ಆವಶ್ಯಕ ವಸ್ತುಗಳೂ ಇಲ್ಲ. ಪುತ್ತೂರಿಗೆ ಬರಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.
‘ಉದಯವಾಣಿ’ ಜತೆ ಮಾತನಾಡಿದ ಆಶಿಕ್‌, ‘ನಮ್ಮನ್ನು ಗುಜರಾತ್‌ನ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಪದೇ ಪದೆ ಬಯ್ಯುತ್ತಾರೆ ಹೊರತು ಯಾವುದೇ ರೀತಿಯ ಸಹಾಯ ಮಾಡುತ್ತಿಲ್ಲ.

ಸ್ಥಳೀಯರು ಅಲ್ಪ-ಸ್ವಲ್ಪ ಆಹಾರ ಕೊಡುತ್ತಿದ್ದಾರೆ. ಹಣ ಪಾವತಿಸಿದರೆ ಪಕ್ಕದ ಹೊಟೇಲ್‌ನವರು ಸ್ನಾನ ಮಾಡಲು, ಶೌಚಾಲಯ ಬಳಸಲು ಅವಕಾಶ ನೀಡುತ್ತಿದ್ದಾರೆ. ಆದರೆ, ತಿನ್ನುವುದಕ್ಕೆ ಏನೂ ಸಿಗುತ್ತಿಲ್ಲ. ಸದ್ಯಕ್ಕೆ ಆರೋಗ್ಯವಾಗಿದ್ದೇವೆ. ನಮಗೆ ದಿಕ್ಕು ತೋಚದಂತಾಗಿದೆ. ಊರಿಗೆ ಹೋಗಲು ಅವಕಾಶ ನೀಡಿದರೆ ಎಷ್ಟು ದಿನ ಬೇಕಾದರೂ ಕ್ವಾರಂಟೈನ್‌ನಲ್ಲಿ ಇರುತ್ತೇವೆ’ ಎಂದಿದ್ದಾರೆ.

Advertisement

ದ.ಕ. ಜಿಲ್ಲಾಧಿಕಾರಿ ಪತ್ರ
ಪುತ್ತೂರಿನ ಇಬ್ಬರು ಗುಜರಾತ್‌-ಮಹಾರಾಷ್ಟ್ರ ಗಡಿ ಸಮೀಪ ಕಾರಿನಲ್ಲೇ ದಿನ ಕಳೆಯುತ್ತಿರುವ ಬಗ್ಗೆ ಪುತ್ತೂರಿನ ರಶೀದ್‌ ವಿಟ್ಲ ಅವರು ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರಿಗೆ ಮಾಹಿತಿ ನೀಡಿದ್ದು ಅದರಂತೆ ಜಿಲ್ಲಾಧಿಕಾರಿಯವರು ಎ. 14ರಂದೇ ವಲ್ಸಾಡ್‌ ಜಿಲ್ಲಾಧಿಕಾರಿಗೆ ಇ-ಮೇಲ್‌ ಮೂಲಕ ಪತ್ರ ರವಾನಿಸಿದ್ದಾರೆ.
ಮತ್ತಿಬ್ಬರು ಸಂಕಷ್ಟದಲ್ಲಿ ಇದೇ ಪ್ರದೇಶದಲ್ಲಿ ಮಹಾರಾಷ್ಟ್ರದ ಇನ್ನಿಬ್ಬರು ಕಾರಿನಲ್ಲೇ ದಿನ ಕಳೆಯುತ್ತಿದ್ದು ಸಂಕಷ್ಟದಲ್ಲಿದ್ದಾರೆ ಎಂದು ಆಶಿಕ್‌ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next