Advertisement
ಪುತ್ತೂರು ನಗರದಲ್ಲಿ ದಿನ ನಿತ್ಯ ಉತ್ಪತ್ತಿ ಯಾಗುವ ಸುಮಾರು 20 ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲೆಂದೇ ನಗರದಿಂದ ಐದು ಕಿ.ಮೀ. ದೂರದ ಬನ್ನೂರಿನ ನೆಕ್ಕಿಲು ಎಂಬಲ್ಲಿ ಲ್ಯಾಂಡ್ ಫಿಲ್ ಸೈಟ್ ಇದೆ. ನಾಲ್ಕು ದಶಕಗಳ ಹಿಂದೆ ಕಸ, ತಾಜ್ಯ ಹಾಕಲು ಆರಂಭಿಸಿದ ಈ ಜಾಗ ಪುತ್ತೂರು ಪುರಸಭೆಯಾಗಿ, ನಗರಸಭೆಯಾಗಿ ಮೇಲ್ದರ್ಜೆಗೇರಿದ ಮೇಲೂ ತ್ಯಾಜ್ಯ ಸಂಗ್ರಹಾಗಾರವಾಗಿ ಉಳಿದುಕೊಂಡಿದೆ. ಲ್ಯಾಂಡ್ ಫಿಲ್ ಸೈಟ್ (ಭೂ ಭರ್ತಿ ಸ್ಥಳ) ಆಗಿ ಅಭಿವೃದ್ಧಿಯಾಗುವ ಬದಲು ಈ ಜಾಗ ಕೇವಲ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಗೊಂಡಿದೆ.
ತ್ಯಾಜ್ಯದಿಂದ ಎರೆಗೊಬ್ಬರ ತಯಾರಿಸಲು ಸುಸಜ್ಜಿತ ಘಟಕವನ್ನು 4 ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಲಾಗಿದೆ. ಡಂಪಿಂಗ್ ಯಾರ್ಡ್ ಒಂದು ಮೂಲೆಯಲ್ಲಿ ಸುವ್ಯವಸ್ಥಿತ ಕಟ್ಟಡ ನಿರ್ಮಿಸಿ ಅದರೊಳಗೆ 13 ಗೊಬ್ಬರ ಟ್ಯಾಂಕ್ ನಿರ್ಮಿಸಲಾಗಿದೆ. ವಿಂಗಡಿತ ಕಸವನ್ನು ಇದರಲ್ಲಿ ಹಾಕಿ ಗೊಬ್ಬರ ಉತ್ಪಾದಿಸುವುದು ನಿಯಮ. ತ್ಯಾಜ್ಯವನ್ನು ಇದರಲ್ಲಿ ಸುರಿದು ಹದವಾಗಿ ಮಣ್ಣಿನ ಮಿಶ್ರಣ ಹಾಕಿದರೆ ಅದರಲ್ಲಿ ಎರೆಹುಳುಗಳು ಹುಟ್ಟಿಕೊಂಡು ಮಣ್ಣು ಮಿಶ್ರಿತ ತ್ಯಾಜ್ಯವನ್ನು ತಿನ್ನುತ್ತಾ ಸಂಪೂರ್ಣ ಗೊಬ್ಬರವಾಗಿ ಪರಿವರ್ತಿಸುತ್ತವೆ. ಎರೆಗೊಬ್ಬರ ನಿರ್ಮಾಣವಾಗಬೇಕಾದರೆ ಟ್ಯಾಂಕ್‌ನ ತಳಭಾಗ ಮಣ್ಣಿನೊಂದಿಗೆ ಸಂಪರ್ಕಿಸಬೇಕು. ಆಗ ಮಾತ್ರ ಮಣ್ಣಿನಡಿ ಯಿಂದ ಎರೆಹುಳಗಳು ಬಂದು ತ್ಯಾಜ್ಯವನ್ನು ತಿಂದು ಸಂತಾನ ಸೃಷ್ಟಿ ಮಾಡುತ್ತವೆ. ದುರಂತವೆಂದರೆ ಇಲ್ಲಿನ ಎಲ್ಲ ಟ್ಯಾಂಕ್ ಗಳ ತಳಭಾಗದಲ್ಲಿ ಕಾಂಕ್ರೀಟ್ ಇದೆ. ಇಲ್ಲಿ ಎರೆಹುಳಗಳ ಸೃಷ್ಟಿಯೇ ಅಸಾಧ್ಯ.
Related Articles
ಏಳು ಎಕ್ರೆ ವಿಸ್ತೀರ್ಣದಲ್ಲಿರುವ ಡಂಪಿಂಗ್ ಯಾರ್ಡ್ ಎಂದು ಗುರುತಿಸಿದರೂ ಇದು ಲ್ಯಾಂಡ್ ಫಿಲ್ ಸೈಟ್. ತಗ್ಗಾದ ಪ್ರದೇಶದಲ್ಲಿ ತ್ಯಾಜ್ಯವನ್ನು ಹಾಕಿ ಅದರ ಮೇಲೆ ಮಣ್ಣು ಹರಡಿ, ಅದು ಗೊಬ್ಬರವಾಗಿ ಪರಿವರ್ತನೆ ಆಗುತ್ತಲೇ ಅದನ್ನು ಅಲ್ಲಿಂದ ಗೊಬ್ಬರ ರೂಪದಲ್ಲಿ ಬಳಸುವುದು. ಇದಕ್ಕೆಂದೇ ಇಲ್ಲಿನ ಲ್ಯಾಂಡ್ ಫಿಲ್ ಸೈಟ್‌ನ ನೆಲದಲ್ಲಿ ವಿಶಾಲವಾಗಿ ಟಾರ್ಪಾಲ್ ಹರಡಿ ಅದರ ಮೇಲೆ ತ್ಯಾಜ್ಯ ಸುರಿಯುವ ವ್ಯವಸ್ಥೆ ಇದೆ. ಅಲ್ಲಿ ಇಂಗಿದ ನೀರು ಹರಿದು ಹೋಗಲು ವ್ಯವಸ್ಥೆಯನ್ನೂ ಮಾಡಲಾಗಿದೆ. ಸುತ್ತಲೂ ಕಾಂಪೌಂಡ್, ರಸ್ತೆ ಸಂಪರ್ಕ ಇತ್ಯಾದಿಯೂ ಇದೆ. ಎಲ್ಲವೂ ಇದ್ದರೂ ಎಲ್ಲಿ ತ್ಯಾಜ್ಯ ಸುರಿಯಬೇಕೋ ಅಲ್ಲಿ ಸುರಿಯದೇ ಬೇರೆಯೇ ಕಡೆ ಸುರಿಯಲಾಗುತ್ತಿದೆ.
Advertisement
ತಾಜ್ಯ ವಿಂಗಡಣೆ ಇಲ್ಲಎರೆಗೊಬ್ಬರ ಘಟಕ ಕೆಲಸ ಮಾಡದೇ ಇರಲು ಇನ್ನೊಂದು ಕಾರಣ ಇಲ್ಲಿ ಕಸ ಬೇರ್ಪಡುವಿಕೆ ಆಗದೇ ಇರುವುದು. ಹಸಿ ಕಸ ಹಾಗೂ ಒಣ ಕಸವನ್ನು ಆರಂಭದಲ್ಲೇ ಬೇರ್ಪಡಿಸಿ ತಂದರೆ ಈ ಸಮಸ್ಯೆ ಇರುವುದಿಲ್ಲ. ಹಸಿ ಕಸವನ್ನು ಮಾತ್ರ ಎರೆಹುಳ ಗೊಬ್ಬರಕ್ಕೆ ಬಳಸಬೇಕಾಗುತ್ತದೆ. ಡಂಪ್ ಮಾಡುವ ಸಂದರ್ಭಕಸ ಬೇರ್ಪಡಿಸುವಿಕೆ ಆಗದ ಕಾರಣ ಎರೆಹುಳ ಗೊಬ್ಬರ ತಯಾರಿಕಾ ಯೋಜನೆ ನೆನೆಗುದಿಗೆ ಬಿದ್ದಿದೆ. ರಾಜೇಶ್ ಪಟ್ಟೆ