Advertisement

ಪುತ್ತೂರು: ನಗರಸಭೆ ಆಯ-ವ್ಯಯ ಮಂಡನೆ : 85.68 ಲ.ರೂ.ಮಿಗತೆ ಬಜೆಟ್‌

11:12 PM Feb 24, 2021 | Team Udayavani |

ಪುತ್ತೂರು: ನಗರಸಭೆ ಈ ಬಾರಿ 85.68 ಲಕ್ಷ ರೂ. ಮಿಗತೆ ಬಜೆಟ್‌ ಅನ್ನು ಮಂಡಿಸಿದೆ. ಒಟ್ಟು 50.10 ಕೋ.ರೂ. ಗಾತ್ರದ ಬಜೆಟ್‌ ಇದಾಗಿದೆ.

Advertisement

ನಗರಸಭೆ ಸಭಾಂಗಣದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಜೀವಂಧರ್‌ ಜೈನ್‌ 2021-22ನೇ ಸಾಲಿನ ಬಜೆಟ್‌ ಮಂಡಿಸಿದರು.

2021-22ನೇ ಸಾಲಿನಲ್ಲಿ ವಿವಿಧ ಮೂಲಗಳಿಂದ ಒಟ್ಟು 39.75 ಕೋ.ರೂ. ಆದಾಯ ನಿರೀಕ್ಷಿಸಲಾಗಿದೆ. ವಿವಿಧ ಯೋಜನೆಗಳಿಗೆ ಹಾಗೂ ಅಗತ್ಯಗಳಿಗೆ 49.24 ಕೋ.ರೂ. ಮೀಸಲಿಡಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರದಿಂದ 11.85 ಕೋ.ರೂ., ವೇತನ ಅನುದಾನ ಮತ್ತು ವಿದ್ಯುತ್‌ ಅನುದಾನ, ರಾಜ್ಯ ಹಣಕಾಸು ಮುಕ್ತ ನಿಧಿ ಮತ್ತು ಇತರ ಅನುದಾನ ಸೇರಿ 10.36 ಕೋ.ರೂ. ನಿರೀಕ್ಷಿಸಲಾಗಿದೆ.

2021-22ನೇ ಸಾಲಿನಲ್ಲಿ ಸ್ವಂತ ಆದಾಯದಲ್ಲಿ 5.35 ಕೋ.ರೂ., ಆಸ್ತಿ ತೆರಿಗೆ, ಕುಡಿಯುವ ನೀರು-3 ಕೋ.ರೂ., ನೀರಿನ ನಳ್ಳಿ ಸಂಪರ್ಕದಲ್ಲಿ 15 ಲಕ್ಷ ರೂ., ಕಟ್ಟಡ ಪರವಾನಿಗೆಯಿಂದ 40 ಲಕ್ಷ ರೂ., ಅಭಿವೃದ್ಧಿ ಶುಲ್ಕದಿಂದ-1 ಕೋ.ರೂ., ಉದ್ಯಮ ಪರವಾನಿಗೆಯಿಂದ 45 ಲ.ರೂ., ಘನತ್ಯಾಜ್ಯ ವಸ್ತು ನಿರ್ವಹಣೆ ಶುಲ್ಕದಿಂದ 1 ಕೋ.ರೂ., ಖಾತೆ ಬದಲಾವಣೆ, ಆಸ್ತಿ ತೆರಿಗೆ ಹಾಗೂ ಇತರ ದಂಡನೆಯಿಂದ 55.70 ಲಕ್ಷ ರೂ., ಪುರಭವನ ಬಾಡಿಗೆಯಿಂದ‌ 10 ಲಕ್ಷ ರೂ., ಮಾರುಕಟ್ಟೆ ಮತ್ತು ನೆಲ ಬಾಡಿಗೆಗಳಿಂದ 28 ಲಕ್ಷ ರೂ., ವಾಣಿಜ್ಯ ಸಂಕೀರ್ಣದ ಬಾಡಿಗೆಯಿಂದ 25 ಲಕ್ಷ ರೂ. ಆದಾಯ ಸಂಗ್ರಹದ ನಿರೀಕ್ಷೆ ಹೊಂದಲಾಗಿದೆ.

Advertisement

49.24 ಕೋ.ರೂ. ಹಂಚಿಕೆ
ನಗರಸಭೆಯ ವಾರ್ಡ್‌ಗಳ ರಸ್ತೆ ನಿರ್ಮಾಣಕ್ಕೆ 7.70 ಕೋ.ರೂ., ನಗರಸಭೆಯ ಹೊಸ ಕಟ್ಟಡ ನಿರ್ಮಾಣಕ್ಕೆ 7 ಕೋ.ರೂ., ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ 1.30 ಕೋ.ರೂ., ಹೊಸ ವಾಹನ ಮತ್ತು ಯಂತ್ರೋಪಕರಣ ಖರೀದಿಗಾಗಿ 1.16 ಕೋ.ರೂ., ಚರಂಡಿ ನಿರ್ಮಾಣ ಮತ್ತು ನಿರ್ವಹಣೆಗಾಗಿ 2.50 ಕೋ.ರೂ., ಪ್ರತೀ ವಾರ್ಡ್‌ಗಳಲ್ಲಿ ನೀರು ಸರಬರಾಜು ವ್ಯವಸ್ಥೆಗಾಗಿ 6.08 ಕೋ.ರೂ., ಭೂ ಸ್ವಾಧೀನಕ್ಕಾಗಿ 75 ಲ.ರೂ., ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್‌ ಕುಟುಂಬಗಳಿಗೆ ಶೇ. 7.25ರ ನಿಧಿಯಡಿ ಸಹಾಯಧನ ಒದಗಿಸಲು 30.05 ಲಕ್ಷ ರೂ., ಭಿನ್ನ ಸಾಮರ್ಥಯ ಹೊಂದಿದವರಿಗೆ ಶೇ. 5 ನಿಧಿಯಲ್ಲಿ 20.72 ಲಕ್ಷ ರೂ., ಕಚೇರಿ ಆಡಳಿತ ವ್ಯವಸ್ಥೆ ಸಾರ್ವಜನಿಕರಿಗೆ ತ್ವರಿತಗೊಳಿಸುವ ನಿಟ್ಟಿನಲ್ಲಿ ಗಣಕ ಯಂತ್ರ ಮತ್ತು ಇತರ ಯಂತ್ರ ಖರೀದಿಗಾಗಿ 20 ಲಕ್ಷ ರೂ., ಕಟ್ಟಡ ನಿರ್ಮಾಣಕ್ಕಾಗಿ 40 ಲಕ್ಷ ರೂ., ಮಳೆ ನೀರು ಚರಂಡಿ ನಿರ್ಮಾಣಕ್ಕಾಗಿ 25 ಲ.ರೂ., ನಲ್ಮ್ ಯೋಜನೆಯಡಿ ಸಾಲ ಹಾಗೂ ಸಹಾಯಧನಕ್ಕೆ 10 ಲ.ರೂ. ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಅನುದಾನ ವಿಂಗಡಿಸಲಾಗಿದೆ.

ದೂರು ಸಲ್ಲಿಸಲು ಜನಹಿತ ತಂತ್ರಾಂಶ
ನಗರದ ಜನರು ದೂರುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಜನಹಿತ ತಂತ್ರಾಂಶ ರೂಪಿಸಲಾಗಿದ್ದು, ಇದರಲ್ಲಿ ಫೇಸ್‌ಬುಕ್‌, ಟ್ವಿಟರ್‌, ವಾಟ್ಸಪ್‌, ವೆಬ್‌ಸೈಟ್‌, ದೂರವಾಣಿ ಮತ್ತು ಜನಹಿತ ಮೊಬೈಲ್‌ ಆ್ಯಪ್‌ ಮೂಲಕ ದೂರು ಸಲ್ಲಿಸಿ ದೂರಿನ ಸ್ಥಿತಿಗತಿಗಳ ಬಗ್ಗೆಯು ಪರಿಶೀಲಿಸಲು ಅವಕಾಶ ನೀಡಲಾಗಿರುವ ಬಗ್ಗೆ ಬಜೆಟಿನಲ್ಲಿ ಪ್ರಸ್ತಾವಿಸಲಾಗಿದೆ.

ವೇದಿಕೆಯಲ್ಲಿ ಉಪಾಧ್ಯಕ್ಷೆ ವಿದ್ಯಾ ಗೌರಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ಪೌರಾಯುಕ್ತೆ ರೂಪಾ ಶೆಟ್ಟಿ ಉಪಸ್ಥಿತರಿದ್ದರು. ನಗರಸಭಾ ಸದಸ್ಯರು ಬಜೆಟ್‌ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

ಸಸ್ಯಶಾಮಲ ಜಾರಿ
ನಗರವನ್ನು ಹಸುರೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಯೋಜನೆಯನ್ನು ಪ್ರಕಟಿಸಲಾಗಿದ್ದು ಅದಕ್ಕಾಗಿ ಸಸ್ಯಶಾಮಲ ಯೋಜನೆ ಜಾರಿ ಮಾಡುವುದಾಗಿ ಘೋಷಿಸಲಾಗಿದೆ. ಈ ಯೋಜನೆಯಡಿ ನಗರದ ಎಲ್ಲ ವಾರ್ಡ್‌ಗಳಲ್ಲಿ ಕನಿಷ್ಠ 50 ಗಿಡಗಳಂತೆ ಅರಣ್ಯ ಇಲಾಖೆ ಸಹಯೋಗದಲ್ಲಿ 1,550 ಗಿಡಗಳನ್ನು ವಿತರಿಸುವುದು, ನಗರದ ಪ್ರಮುಖ ರಸ್ತೆಯ ಇಕ್ಕೆಲ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪರಿಸರ ಸ್ನೇಹಿ ಗಿಡಗಳನ್ನು ನೆಟ್ಟು ಅದರ ಪೋಷಣೆ ಮಾಡುವ ಜವಾಬ್ದಾರಿಯನ್ನು ಸಂಘ ಸಂಸ್ಥೆ ಹಾಗೂ ಸಾರ್ವಜನಿಕರಿಗೆ ನೀಡುವುದು, ಬನ್ನೂರು ಡಂಪಿಂಗ್‌ ಯಾರ್ಡ್‌ನಲ್ಲಿ 350 ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ.

ವಿದ್ಯಾರ್ಥಿಗಳಿಗೆ ಪಾರಿತೋಷಕ
ನಗರವನ್ನು ಪ್ಲಾಸ್ಟಿಕ್‌ ಮುಕ್ತ ಮಾಡುವ ದೃಷ್ಟಿಯಿಂದ ಪ್ಲಾಸ್ಟಿಕ್‌ ಸಂಗ್ರಹಣ ಕೇಂದ್ರವನ್ನು ಸ್ಥಾಪಿಸಿ ಪ್ರತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸಂಗ್ರಹಿಸುವ ಪ್ಲಾಸ್ಟಿಕ್‌ ಅನ್ನು ಪಡೆದು ಹೆಚ್ಚು ಸಂಗ್ರಹಿಸಿದ ವಿದ್ಯಾರ್ಥಿಗಳಿಗೆ ಪಾರಿತೋಷಕ ನೀಡುವುದು, ಸಂಘ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಪ್ಲಾಸ್ಟಿಕ್‌ ಚೀಲಗಳಿಗೆ ಪರ್ಯಾಯವಾಗಿ ಬಟ್ಟೆ ಚೀಲ ವಿತರಿಸುವ ಬಗ್ಗೆ ಪ್ರಸ್ತಾವಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next