Advertisement

ಪುತ್ತೂರು ಮಹಾಲಿಂಗೇಶ್ವರ ದೇವರ ಧ್ವಜಸ್ತಂಭ ಬದಲಾವಣೆ

10:11 AM Oct 10, 2018 | Team Udayavani |

ಪುತ್ತೂರು: ಬಾಲಾರಿಷ್ಟ ರೋಗಕ್ಕೆ ತುತ್ತಾಗಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧ್ವಜಸ್ತಂಭ ವನ್ನು ಬದಲಾಯಿಸುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ. ಹೀಗೆ ಬದಲಾಯಿಸುವಾಗ ಚಿನ್ನದ ಕವಚ ತೊಡಿಸಿದರೆ ಹೇಗೆ ಎಂಬ ಆಲೋಚನೆಯೂ ಸುಳಿದಾಡುತ್ತಿದೆ.

Advertisement

2013ರಲ್ಲಿ ಪುತ್ತೂರು ದೇವಸ್ಥಾನದ ಬ್ರಹ್ಮಕಲಶೋತ್ಸವ ವಿಜೃಂಭ ಣೆಯಿಂದ ನಡೆದಿತ್ತು. ಇದೇ ಸಂದರ್ಭ ಧ್ವಜಸ್ತಂಭದ ಪ್ರತಿಷ್ಠೆಯೂ ನಡೆಯುತ್ತಿದೆ. 2 ತಿಂಗಳು ಎಳ್ಳೆಣ್ಣೆಯಲ್ಲಿ ಮುಳುಗಿಸಿಟ್ಟು, ಬಳಿಕ ಧ್ವಜ ಸ್ತಂಭವನ್ನು ಗರ್ಭಗುಡಿಯ ದೇವರ ಸರಿ ಮುಂಭಾಗದಲ್ಲಿ ನೆಡಲಾಗಿದೆ. ಇದರ ಮೇಲ್ಭಾಗದಲ್ಲಿ ನಂದಿ ಮೂರ್ತಿಯ ಪ್ರತಿಷ್ಠೆಯೂ ನೆರವೇರಿತ್ತು. ಇದಾಗಿ ಒಂದೆರಡು ಮಳೆಗಾಲ ಕಳೆಯುತ್ತಿದ್ದಂತೆ ಧ್ವಜ ಸ್ತಂಭದಿಂದ ಕೆಟ್ಟ ವಾಸನೆ ಬರತೊಡಗಿತು. ಸ್ವಲ್ಪ ಸಮಯದಲ್ಲಿ ಹುಳಗಳು ಕಾಣತೊಡಗಿದವು. ಆದ್ದರಿಂದ 2016ರ ಕೊನೆಗೆ 2017ರ ಜಾತ್ರೆಗೆ ಮೊದಲು ಧ್ವಜಸ್ತಂಭವನ್ನು ಶುಚಿ ಗೊಳಿಸಿ, ಮತ್ತೊಮ್ಮೆ ಎಳ್ಳು ತುಂಬಿ ತಾಮ್ರದ ಕವಚ ಮುಚ್ಚಿ, ಪ್ರತಿ ಷ್ಠೆಯೂ ನಡೆಯಿತು. ಆದರೆ ಮತ್ತದೇ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅನುಜ್ಞಾ ಕಲಶ ಮಾಡಿ, ತಾಮ್ರದ ಕವಚವನ್ನು ತೆಗೆದಿಡಲಾಗಿದೆ. ಧ್ವಜಸ್ತಂಭದ ತುದಿಯಲ್ಲಿದ್ದ ನಂದಿಯನ್ನು ನಂದಿ ಮಂಟಪದಲ್ಲಿ ಇಡಲಾಗಿದೆ.

ದಾನಿಗಳ ಸಹಾಯದಿಂದ ಧ್ವಜ ಸ್ತಂಭದ ಸಾಗುವಾನಿ ಮರವನ್ನು ಉಬರಡ್ಕದಿಂದ ಖರೀದಿಸಲಾಗಿತ್ತು. ಅದೇ ರೀತಿ ಧ್ವಜಸ್ತಂಭದ ಪೀಠ, ಕವಚವನ್ನು ದಾನಿಗಳ ನೆರವಿನಿಂದ ನಿರ್ಮಿಸಲಾಗಿತ್ತು. ಧ್ವಜಸ್ತಂಭ ಪ್ರತಿಷ್ಠೆ ಬಳಿಕ ಮರದಿಂದ ಕೆಟ್ಟ ವಾಸನೆ ಬರುತ್ತಿದ್ದುದು ಮಾತ್ರವಲ್ಲ ಸ್ವಲ್ಪ ಬಾಗಿರುವುದೂ ಗಮನಕ್ಕೆ ಬಂದಿದೆ. ಇದರಿಂದಾಗಿ ತಾಮ್ರದ ಕವಚ ಸರಿಯಾಗಿ ಕುಳಿತುಕೊಳ್ಳದೆ, ಮರದೊಳಗೆ ನೀರು ಹೋಗಿದೆಯೇ ಎಂಬ ಪ್ರಶ್ನೆಯೂ ಭಕ್ತರಲ್ಲಿ ಮೂಡಿದೆ.

ಹೊಸ ಮರಕ್ಕೆ ಹುಡುಕಾಟ
ಸಾಕಷ್ಟು ಗೊಂದಲದ ಹಿನ್ನೆಲೆಯಲ್ಲಿ ವ್ಯವಸ್ಥಾಪನ ಸಮಿತಿ ಪ್ರಮುಖರು ಪ್ರಶ್ನಾಚಿಂತನೆ ನಡೆಸಿದ್ದಾರೆ. ಆಗ, ಮರಕ್ಕೆ ಬಾಲಾರಿಷ್ಟ ರೋಗ ಇರುವುದು ಪತ್ತೆಯಾಗಿದೆ. ಈ ಮರವನ್ನು ಬದಲಾವಣೆ ಮಾಡುವುದೇ ಸೂಕ್ತ.

ಅ. 14ಕ್ಕೆ ಸಭೆ
ಪ್ರಶ್ನೆ ಚಿಂತನೆ ತಿಳಿಸಿಕೊಟ್ಟ ವಿಷಯವನ್ನು ಇತರರಿಗೂ ತಿಳಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ಸಮಿತಿಯ ಪದಾಧಿಕಾರಿಗಳ ಹಾಗೂ ಈಗಿನ ಸಮಿತಿಯ ಪದಾಧಿಕಾರಿಗಳ ಸಭೆ ಅ. 14ರಂದು ಪುತ್ತೂರು ದೇವಸ್ಥಾನದಲ್ಲಿ ನಡೆಯಲಿದೆ. ಇದರಲ್ಲಿ ತಂತ್ರಿಗಳು ಭಾಗವಹಿಸಿ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಧ್ವಜಸ್ತಂಭಕ್ಕೆ ಶಾಶ್ವತ ಪರಿಹಾರ ನೀಡುವ ಬಗ್ಗೆ ಸಭೆ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಿದೆ.

Advertisement

ಚಿನ್ನದ ಕವಚ?
ಹೀಗೊಂದು ಆಲೋಚನೆ ವ್ಯವಸ್ಥಾಪನ ಸಮಿತಿಯಲ್ಲಿದೆ. ಹೇಗೂ ಹೊಸ ಧ್ವಜ ಮರ ಹುಡುಕಲಾಗುತ್ತಿದೆ. ಇದೇ ವೇಳೆ ಧ್ವಜಸ್ತಂಭಕ್ಕೆ ಚಿನ್ನದ ಕವಚ ತೊಡಿಸಿದರೆ ಹೇಗೆ? ಬಹಳಷ್ಟು ಹಿಂದಿನ ಕನಸಾಗಿದ್ದ ರಾಜಗೋಪುರ ಸಮರ್ಪಣೆ ಆಗಿದೆ. ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇದರ ನಡುವೆ ಧ್ವಜಸ್ತಂಭಕ್ಕೆ ಚಿನ್ನದ ಕವಚ ತೊಡಿಸಿದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಅದಿನ್ನೂ ಅಂತಿಮವಾಗಿಲ್ಲ. ಸಮಿತಿ ಸಭೆ ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕಷ್ಟೇ.

ಬಾಲಾರಿಷ್ಟ ಎಂದರೇನು?
ಮರ ಸಣ್ಣದಿರುವಾಗ ಬರುವ ರೋಗ ಬಾಲಾರಿಷ್ಟ. ಇದರಿಂದ ಧ್ವಜಮರದಲ್ಲಿ ಲೋಪ ಕಂಡುಬಂದಿದೆ. ಪ್ರಶ್ನೆಯಲ್ಲಿ ಕಂಡುಬಂದಂತೆ ಧ್ವಜಮರ ಬದಲಾಯಿಸುವುದು ಅಗತ್ಯ. ಹೊಸ ಮರಕ್ಕಾಗಿ ಹುಡುಕಾಟ ನಡೆಸಿದ್ದು, ಅ. 14ಕ್ಕೆ ಸಮಿತಿಯ ಸಭೆ ಕರೆಯಲಾಗಿದೆ. ದೇವರು ಆಶೀರ್ವಾದ ಮಾಡಿದರೆ ಚಿನ್ನದ ಕವಚ ತೊಡಿಸಬೇಕು ಎಂಬ ಮನಸ್ಸಿದೆ. ಆದರೆ ಜಾತ್ರೆಗೆ ಮೊದಲು ಧ್ವಜಸ್ತಂಭ ಪ್ರತಿಷ್ಠೆ ಆಗುವುದು ಮುಖ್ಯ. ಅದಕ್ಕೆ ಮೊದಲು 2 ತಿಂಗಳು ಎಳ್ಳೆಣ್ಣೆಯಲ್ಲಿ ಮುಳುಗಿಸಿಡಬೇಕು.
ಸುಧಾಕರ ಶೆಟ್ಟಿ
ಅಧ್ಯಕ್ಷ, ವ್ಯವಸ್ಥಾಪನ ಸಮಿತಿ,
ಮಹಾಲಿಂಗೇಶ್ವರ ದೇವಸ್ಥಾನ

ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next