Advertisement

ಪುತ್ತೂರು ಸೀಮಾಧಿಪತಿಯ ಸ್ವರ್ಣ ಕವಚದ ಧ್ವಜಸ್ತಂಭ ಪ್ರತಿಷ್ಠೆ 

09:54 PM Mar 23, 2019 | |

ಪುತ್ತೂರು : ಪುತ್ತೂರು ಸೀಮಾಧಿಪತಿ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸ್ವರ್ಣ ಕವಚದ ನೂತನ ಧ್ವಜಸ್ತಂಭ ಪ್ರತಿಷ್ಠೆಯು ಸಾವಿರಾರು ಭಕ್ತರ ಸಮ್ಮುಖ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ನಡೆಯಿತು. ಇದೇ ಸಂದರ್ಭ ದೇವಾಲಯಕ್ಕೆ ನೂತನ ಹೂ ತೇರು ಸಮರ್ಪಣೆ ಮಾಡಲಾಯಿತು.

Advertisement

ನೂತನ ಧ್ವಜಸ್ತಂಭದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಕಳೆದ ಆರು ದಿನಗಳಿಂದ ವಿವಿಧ ವೈದಿಕ ಕಾರ್ಯಕ್ರಮಗಳು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯ ನೇತೃತ್ವದಲ್ಲಿ ನಡೆದು ಶುಕ್ರವಾರ 9.42ರ ವೃಷಭ ಲಗ್ನ ಸುಮೂರ್ತದಲ್ಲಿ ಧ್ವಜಸ್ತಂಭದ ಪ್ರತಿಷ್ಠೆ, 1008 ಬ್ರಹ್ಮಕಲಶಾಭಿಷೇಕ ವಿಧಿ ವಿಧಾನಗಳು ನಡೆದವು. ಮುಂಜಾನೆ 5.30ರಿಂದ 108 ತೆಂಗಿನಕಾಯಿಗಳ ಗಣಪತಿ ಹೋಮ, ಪ್ರತಿಷ್ಠಾ ಪಾಣಿ, ಧ್ವಜಸ್ತಂಭ ಪ್ರತಿಷ್ಠೆ, 1008 ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾ ಬಲಿ, ಮಹಾಪೂಜೆ, ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಿತು. ಅಪರಾಹ್ನ ನೂತನ ಹೂತೇರು ಸಮರ್ಪಣೆ ನಡೆದು ಶ್ರೀ ದೇವರ ಉತ್ಸವ ಬಲಿ ನಡೆಯಿತು.

ಬ್ರಹ್ಮಕಲಶಾಭಿಷೇಕ
ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಮೂರು ಮಂದಿ ತಂತ್ರಿಗಳು, ವೈದಿಕರು ವಿಧಿ ವಿಧಾನಗಳನ್ನು ನೆರವೇರಿಸಿದರು.

ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕವನ್ನು ನೆರವೇರಿಸಿ ಅನಂತರ ಧ್ವಜಸ್ತಂಭದ ಶಿಖರಕ್ಕೆ ನಂದಿಯನ್ನು ಪ್ರತಿಷ್ಠಾಪಿಸಿ ಅಭಿಷೇಕ ನೆರವೇರಿಸಲಾಯಿತು. ಸಾವಿರಾರು ಮಂದಿ ಭಕ್ತರು ಭಕ್ತಿಯಿಂದ ಈ ವಿಶೇಷ ಸಂದರ್ಭವನ್ನು ವೀಕ್ಷಿಸಿದರು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಜಗದೀಶ್‌ ಎಸ್‌., ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಧಾನ ಅರ್ಚಕ ವಸಂತ ಕುಮಾರ್‌ ಕೆದಿಲಾಯ, ಎನ್‌. ಕರುಣಾಕರ ರೈ, ಯು.ಪಿ. ರಾಮಕೃಷ್ಣ, ಸಂಜೀವ ಕಲ್ಲೇಗ, ಜಾನು ನಾಯ್ಕ, ನಯನಾ ರೈ, ರೋಹಿಣಿ ಆಚಾರ್ಯ, ದೇವಾಲಯದ ಅರ್ಚಕರು, ಸಿಬಂದಿ ವರ್ಗ, ಭಕ್ತರು ಪಾಲ್ಗೊಂಡರು.

Advertisement

ಧ್ವಜಸ್ತಂಭ ವಿಶೇಷ
ಸುಮಾರು 62 ಅಡಿ ಎತ್ತರದ ಧ್ವಜಸ್ತಂಭಕ್ಕೆ ಸಂಪೂರ್ಣ ಸ್ವರ್ಣ ಕವಚದ ಹೊದಿಕೆಯನ್ನು ಅಳವಡಿಸಲಾಗಿದೆ. ಕೆಳ ಭಾಗದಲ್ಲಿ ಕಲ್ಲಿನ ಆಧಾರ ಶಿಲೆ, ಅನಂತರದಲ್ಲಿ ಕ್ರಮವಾಗಿ ಶಿಲೆ ಕಲ್ಲಿನ ಅಧಿಷ್ಠಾನ, ವೇದಿಕೆ, ಪದ್ಮ, ದಿಕ್ಪಾಲಕರು, ಕುಂಭ, ಲಕುನ ಮೂಲಸ್ಥಾನ, ಯಷ್ಠಿ, ಪದ್ಮ, ಮಂಡಿ ಹಲಗೆ, ವೀರಕಾಂಡ, ವಾಹನ (ನಂದಿ), ಮೇಲೆ ಕೊಡೆಯನ್ನು ಧ್ವಜಸ್ತಂಭ ಹೊಂದಿದೆ. 22 ಪರೆ, 23 ವಲಯಗಳ ಅಳವಡಿಕೆಯಿದೆ.

ಗರುಡ ಪ್ರದಕ್ಷಿಣೆ
ನೂತನ ಧ್ವಜಸ್ತಂಭದ ಶಿಖರಕ್ಕೆ ನಂದಿಯನ್ನು ಪ್ರತಿಷ್ಠೆ ಮಾಡುತ್ತಿದ್ದಂತೆ ಧ್ವಜಸ್ತಂಭದ ಮೇಲ್ಬಾಗ ಆಕಾಶದಲ್ಲಿ ಮೂರು ಗರುಡಗಳು ಹಾರಾಟ ನಡೆಸಿದ್ದು ವಿಶೇಷವಾಗಿತ್ತು. ಪ್ರತಿಷ್ಠೆ ಬಳಿಕ ಶ್ರೀ ದೇವಾಲಯದ ಮುಗುಳಿಯ ನೇರಕ್ಕೆ ಗರುಡಗಳು ಹಾರಾಟ ನಡೆಸಿದವು.

Advertisement

Udayavani is now on Telegram. Click here to join our channel and stay updated with the latest news.

Next