ಪುತ್ತೂರು: ಕುರಿಯ ಅಜಲಾಡಿಯಲ್ಲಿ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು 24 ಗಂಟೆಯಲ್ಲಿ ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಕಟ್ಟತ್ತಾರು ನಿವಾಸಿ ಕರೀಂ ಖಾನ್ ( 29 ವರ್ಷ) ಎಂದು ಗುರುತಿಸಲಾಗಿದೆ.
ಆರೋಪಿಯು ಕಳ್ಳತನದ ಉದ್ದೇಶದಿಂದ ಮನೆಯೊಂದಕ್ಕೆ ನುಸುಳಿದ್ದು ಈ ವೇಳೆ ಮನೆಯವರು ಎಚ್ಚರಗೊಂಡಿದ್ದಾರೆ. ಆತ ಮೊದಲೇ ಮನೆಯ ಸದಸ್ಯರಿಗೆ ಪರಿಚಿತನಾಗಿದ್ದು, ತಾನು ಸಿಕ್ಕಿಹಾಕಿಕೊಳ್ಳುತ್ತೇನೆ ಎಂಬ ಭಯದಿಂದ ಕತ್ತಿಯಿಂದ ಶೇಕ್ ಕೊಗ್ಗು ಸಾಹೇಬ್ ( 70 ವರ್ಷ), ಶಾಮಿಯಾ ಭಾನು (16 ವರ್ಷ) ಖತೀಜಾಬಿ (65 ವರ್ಷ) ಎಂಬವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಗಂಭೀರ ಗಾಯಗಳಾಗಿ ಶೇಕ್ ಕೊಗ್ಗು ಸಾಹೇಬ್, ಶಾಮಿಯಾ ಭಾನು ಮೃತಪಟ್ಟರೆ, ಖತೀಜಾಬಿ ಮೇಲೂ ಮಾರಾಣಾಂತಿಕ ಹಲ್ಲೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಆ ಬಳಿಕ ಆರೋಪಿ ಕರೀಂಖಾನ್ ಮನೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನಾಭರಣ ಹಾಗೂ 6,000 ನಗದನ್ನು ಕಳ್ಳತನ ನಡೆಸಿ ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪುತ್ತೂರು ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹಿಂದೆ ಮೃತ ಶೇಕ್ ಕೊಗ್ಗು ಸಾಹೇಬ್ ರವರೊಂದಿಗೆ ಕರೀಂ ಖಾನ್ ಗೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಮನಸ್ತಾಪವಿತ್ತು. ಆ ಹಿನ್ನಲೆಯಲ್ಲಿಯೇ ದ್ವೇಷದಿಂದ ಹತ್ಯೆಗೈದಿದ್ದಾನೆ ಎನ್ನಲಾಗುತ್ತಿದೆ.