ನಗರ : ಸಾಲ ವಿಚಾರದಲ್ಲಿ ಮನೆ- ಮಠ ಜಪ್ತಿ ಮಾಡುವ ಅವಕಾಶ ಕಾನೂನಿನಲ್ಲಿ ಇಲ್ಲ. ಆದ್ದರಿಂದ ಸಂಪೂರ್ಣ ಮನ್ನಾ ಆಗುವವರೆಗೆ ಸಾಲ ಮರುಪಾವತಿಸುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜು ಹೇಳಿದರು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪುತ್ತೂರಿನ ಮಿನಿ ವಿಧಾನಸೌಧದ ಎದುರು ಮಂಗಳವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಗೊಂದಲದ ಗೂಡು
ರಾಜ್ಯದಲ್ಲಿ ಶೇ. 65ರಷ್ಟು ಸಂಖ್ಯೆಯಲ್ಲಿ ರೈತರಿದ್ದಾರೆ. ಜಮೀನು ಹರಾಜು ಪ್ರಕ್ರಿ ಯೆಗೆ ಮುಂದಾದರೆ ಸರ್ಕಾರ ಮೂರು ಗಂಟೆಯೂ ಉಳಿಯುವುದಿಲ್ಲ. ಸಾಲ ಮನ್ನಾ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಚಿವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಈ ವರ್ಷ ಬಡ್ಡಿ ಮನ್ನಾ ಮಾಡುವುದಾಗಿ ಹೇಳುತ್ತಿದ್ದು, ಸಾಲ ಮನ್ನಾ ವಿಚಾರವೇ ಗೊಂದಲದ ಗೂಡಾಗಿದೆ. ಬ್ಯಾಂಕ್‌ಗಳಲ್ಲಿಯೂ ಈ ಬಗ್ಗೆ ಸ್ಪಷ್ಟತೆ ಇಲ್ಲ. ಸಾಲದ ವಿಚಾರದಲ್ಲಿ ಜಪ್ತಿಗೆ ಬಂದರೆ ಪ್ರತಿಭಟಿಸಿ ಎಂದು ಕರೆ ನೀಡಿದರು.
ಡಾ| ಸ್ವಾಮಿನಾಥನ್ ವರದಿಯ ಜಾರಿಗೆ ಯಾವುದೇ ಸರಕಾರ ಕ್ರಮ ಕೈಗೊಂಡಿಲ್ಲ. ಈ ವರದಿಯನ್ನು ಜಾರಿಗೊಳಿಸುವುದಾಗಿ ವಾಗ್ಧಾನ ನೀಡಿದ ಬಿಜೆಪಿ ಸರಕಾರ, ಅದಕ್ಕೆ ಮೊದಲಿದ್ದ ಕಾಂಗ್ರೆಸ್ ಸರಕಾರ ಭರವಸೆಯನ್ನು ಈಡೇರಿಸಿಲ್ಲ. ಇದರಿಂದಾಗಿ ರೈತ ವರ್ಗಕ್ಕೆ ಬೇಡುವ ಸ್ಥಿತಿ ಬಂದಿದೆ ಎಂದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಸಮಿತಿ ಸಂಚಾಲಕ ರಾಜು ಹಿಟ್ಟೂರು ಮಾತನಾಡಿ, ಕನಿಷ್ಠ ಶಿಕ್ಷಣ ಪಡೆದವರಿಗೆ ರೈತರು ಉದ್ಯೋಗ ನೀಡುವ ಪರಿಸ್ಥಿತಿ ಇಂದು ಬಂದಿದೆ ಎಂದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್ ರೈ ಬೈಲುಗುತ್ತು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ, ರಾಜ್ಯ ರೈತ ಸಂಘ- ಹಸಿರುಸೇನೆಯ ಶಿವಮೊಗ್ಗ ಜಿಲ್ಲಾ ಸಮಿತಿಯ ಅಧ್ಯಕ್ಷ ಶೇಖರಪ್ಪ, ದ.ಕ. ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಧರ್ಣಪ್ಪ ಗೌಡ ಇಡ್ಯಾಡಿ, ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ ಭಟ್ ಬಡಿಲ ಮತ್ತು ಹೊನ್ನಪ್ಪ ಗೌಡ ಪರಣೆ, ಗೌರವ ಸಲಹೆಗಾರ ಮುರುವ ಮಹಾಬಲ ಭಟ್, ಕಾರ್ಯದರ್ಶಿ ಈಶ್ವರ ಗೌಡ ಕುಂತೂರು, ಕಡಬ ತಾಲೂಕು ಅಧ್ಯಕ್ಷ ವಿಕ್ಟರ್ ಡಿ’ಸೋಜಾ, ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುದೇಶ್ ಭಂಡಾರಿ, ಸುಳ್ಯ ತಾಲೂಕು ಕಾರ್ಯದರ್ಶಿ ಸಿರಿಲ್ ಕ್ರಾಸ್ತಾ, ಸಂಘಟನೆಯ ಪ್ರಮುಖರಾದ ಸುದೇಶ್ ಮಯ್ಯ, ಶೇಖರ್ ರೈ ಕುಂಬ್ರ, ಸುದರ್ಶನ್ ನಾೖಕ್ ಕಂಪ, ಜಯಪ್ರಕಾಶ್ ರೈ ನೂಜಿಬೈಲು ಉಪಸ್ಥಿತರಿದ್ದರು.
ಸರಕಾರ ರೈತ ಪರವಾಗಿಲ್ಲ
ಅಧಿಕಾರಕ್ಕೆ ಬಂದ ಒಂದೇ ಗಂಟೆಯೊಳಗೆ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಮೋದಿ ಅವರು ಭರವಸೆ ಈಡೇರಿಸಿಲ್ಲ. ಫಸಲ್ ಬಿಮಾ ಯೋಜನೆ ರೈತ ಪರವಾಗಿಲ್ಲ. ಮಧ್ಯಪ್ರದೇಶದಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಲಾಯಿತು. ರೈತರನ್ನು ದಿಲ್ಲಿಗೆ ಹೋಗದಂತೆ ತಡೆಯಲಾಯಿತು. ಇದರ ಪರಿಣಾಮ ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ರೈತರು ಅವರ ನ್ನು ರಾಜ್ಯಕ್ಕೆ ಬಾರದಂತೆ ತಡೆಯುವ ಕೆಲಸ ಮಾಡಿದ್ದಾರೆ ಎಂದರು.