Advertisement
ತಹಶೀಲ್ದಾರ್ ಡಾ| ಪ್ರದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಯೋಜನೆಯಡಿ ಹಾಕಲಾದ ಬೋರ್‌ವೆಲ್‌ನ ಪಂಪ್‌ಗಳು ಸುಟ್ಟು ಹೋಗುವುದು, ಪದೇ ಪದೇ ಹಾಳಾಗುವ ನಿದರ್ಶನವಿದೆ. ಇದನ್ನು ಗಮನಿಸುವಾಗ ಕಳಪೆ ಪಂಪ್ ಹಾಕಿರುವಂತೆ ಕಾಣುತ್ತಿದೆ. ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸೇಸಪ್ಪ ನೆಕ್ಕಿಲು ಮಾತನಾಡಿ, ಎಸ್ಸಿ ಗುತ್ತಿಗೆದಾರರು ಕಡಿಮೆ ಇರಬಹುದು. ಹಾಗೆಂದು ಯೋಜನೆಗಳ ಜಾರಿ ಸಂದರ್ಭ ಗುತ್ತಿಗೆಯನ್ನು ಎಸ್ಸಿಗಳ ಹೆಸರಿನಲ್ಲಿ ಇನ್ನೊಂದು ವರ್ಗದವರು ದುರುಪಯೋಗ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಆಕ್ಷೇಪಾರ್ಹ. ಎಸ್ಸಿಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ಹಣ ಮಾಡುವುದು ಸರಿಯಲ್ಲ ಎಂದರು. ತಾ.ಪಂ. ಇಒ ಜಗದೀಶ್ ಮಾತನಾಡಿ, ಎಸ್ಟಿಮೇಟ್ ಮಾಡುವಾಗಲೇ ಎಸ್ಸಿ ಗುತ್ತಿಗೆದಾರರ ವಿಷಯವನ್ನು ಅಧಿಕಾರಿಗಳು ಖಾತ್ರಿ ಪಡಿಸಿಕೊಳ್ಳಬೇಕು. ಎಂಜಿನಿಯರ್‌ಗಳು ಇದನ್ನು ಗಮನಿಸಬೇಕು. ಈ ಬಗ್ಗೆ ಸೂಚನೆ ಇದೆ ಎಂದರು.
Related Articles
ತಹಶೀಲ್ದಾರ್ ಮಾತನಾಡಿ, ಮರಳಿನ ಬಗ್ಗೆ ಜಿಲ್ಲಾಡಳಿತ ಸಭೆ ನಡೆಸಿದೆ. ಗ್ರಾ.ಪಂ. ವ್ಯಾಪ್ತಿಯನ್ನು ಸಿ ಕೆಟಗರಿಯಲ್ಲಿ ಸೇರಿಸಿದ್ದು, ಸದ್ಯದಲ್ಲೇ ನಿರ್ಣಯ ಜಾರಿಗೆ ಬರಲಿದೆ ಎಂದರು. ಆನಂದ್ ಮಿತ್ತಬೈಲ್ ಮಾತನಾಡಿ, ಆದೇಶ ಜಾರಿಯಾಗುವವರೆಗೆ ಮನೆ ಕಟ್ಟುವ ಕಾರ್ಯ ನಿಲ್ಲಿಸಬೇಕೇ ಎಂದು ಪ್ರಶ್ನಿಸಿದರು.
Advertisement
ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ಮಾತ ನಾಡಿ, ಇದರ ಪರವಾನಿಗೆ ನೀಡುವ ಜವಾಬ್ದಾರಿಯನ್ನು ಪಿಡಿಒಗಳಿಗೆ ನೀಡಲಾಗುತ್ತದೆ. ವಾರದೊಳಗೆ ಆದೇಶ ಜಾರಿ ಆಗಲಿದೆ ಎಂದರು.
ಪಾಪೆಮಜಲಿನಲ್ಲಿ ನೀರಿನ ಟ್ಯಾಂಕ್ ಒಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬಗ್ಗೆ ಪ್ರಸ್ತಾವಿಸಿದ ಸೇಸಪ್ಪ ನೆಕ್ಕಿಲು ಎಂಜಿನಿಯರ್, ಗುತ್ತಿಗೆದಾರರ ವಿರುದ್ಧ ಎಫ್ ಐಆರ್ ದಾಖಲಾಗಿದೆಯೇ ಎಂದು ಪ್ರಶ್ನಿಸಿದರು. ಇಒ ಜಗದೀಶ್ ಮಾತನಾಡಿ, ಈ ಬಗ್ಗೆ ವಿಚಾರಿಸಿ ಮಾಹಿತಿ ನೀಡಲಾ ಗುವುದು ಎಂದರು. ಆನಂದ್ ಮಿತ್ತಬೈಲ್ ಮಾತನಾಡಿ, ಕುಟುಂಬದ ಏಕೈಕ ಆಸರೆ ಕಮರಿದೆ. ಮನೆಯವರಿಗೆ ಆಧಾರ ಆಗುವ ನಿಟ್ಟಿನಲ್ಲಿ ಇಲಾಖೆಯಿಂದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ ಸಿ.ಎಚ್. ಮಾತನಾಡಿ, ಇಲಾಖೆಗೆ ಶಿಫಾರಸು ಮಾಡಲಾಗುವುದು ಎಂದರು.
ಮೂರು ತಿಂಗಳ ಹಿಂದೆ ಸಂಪ್ಯ ಠಾಣೆಯಲ್ಲಿ ದೂರು ನೀಡಿದ್ದೇವೆ. ದೂರು ದಾಖಲಿಸುವ ಬದಲು, ನಮ್ಮ ವಿರುದ್ಧವೇ ಎಫ್‌ಐಆರ್ ದಾಖಲಿಸುವ ಬೆದರಿಕೆ ಹಾಕುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿತು. ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ ಮಾತನಾಡಿ, ಠಾಣೆಯಲ್ಲಿ ದೂರು ತೆಗೆದುಕೊಳ್ಳದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದರು. ತಹಶೀಲ್ದಾರ್ ಮಾತನಾಡಿ, ದೂರಿನ ಜೆರಾಕ್ಸ್ ಪ್ರತಿಯನ್ನು ಪೊಲೀಸ್ ನಿರೀಕ್ಷಕರಿಗೆ ನೀಡಿ. ಅವರು ಕ್ರಮ ಕೈಗೊಳ್ಳುತ್ತಾರೆ ಎಂದರು. ಬಾಬು ಅವರು ಮಾತನಾಡಿ, ಕೆಯ್ಯೂರಿನ ತೆಗ್ಗಿನಲ್ಲಿ ಸಂಪರ್ಕ ರಸ್ತೆ ವಿಚಾರದಲ್ಲಿ ಜೀವ ಬೆದರಿಕೆ ಹಾಕಿ, ಹಲ್ಲೆಗೆ ಮುಂದಾಗಿದ್ದಾರೆ. ಇದರ ಬಗ್ಗೆ ಸಂಪ್ಯ ಠಾಣೆಗೆ ದೂರು ನೀಡಿದರೂ ಸ್ವೀಕರಿಸುತ್ತಿಲ್ಲ ಎಂದರು. ಈ ಪ್ರಕರಣದ ತನಿಖೆ ನಡೆಸಲು ಪೊಲೀಸ್ ನಿರೀಕ್ಷಕರಿಗೆ ಸೂಚಿಸಲಾಯಿತು.ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ಸ್ಥಾಯೀ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ಸದಸ್ಯೆ ಲಲಿತಾ ಉಪಸ್ಥಿತರಿದ್ದರು. ಮರಳು ತೆಗೆದರೆ ಎಫ್ಐಆರ್
ಆನಂದ ಮಿತ್ತಬೈಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮರಳಿನ ಸಮಸ್ಯೆ ಜೋರಾಗಿದೆ. ಗ್ರಾ.ಪಂ.ನ ಯೋಜನೆಗಳ ಜಾರಿಗೆ ಒತ್ತಡವೂ ಹೆಚ್ಚುತ್ತಿದೆ. ದಿನ ಕಳೆದರೆ ನೋಟಿಸ್ ನೀಡಲಾಗುತ್ತಿದೆ. ಇದನ್ನು ತಪ್ಪಿಸಲು ನದಿ ದಂಡೆಯಿಂದ ಮರಳು ತೆಗೆದರೆ ಅರಣ್ಯ ಇಲಾಖೆಯವರೂ ಎಫ್‌ಐಆರ್ ದಾಖಲಿಸಲು ಮುಂದಾಗುತ್ತಿದ್ದಾರೆ. ಇದು ಗಂಭೀರ ವಿಷಯ. ಅರಣ್ಯ ರಸ್ತೆಯಲ್ಲಿ ಮರಳು ಸಾಗಾಟ ಎನ್ನುವ ನೆಪವೊಡ್ಡಿ ಎಫ್‌ಐಆರ್ ದಾಖಲಿಸಿದ ಉದಾಹರಣೆ ಇದೆ. ಆದ್ದರಿಂದ ಇದರ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮತಾಂತರಕ್ಕೆ ದಾಖಲೆ ಏನು?
ಪರಿಶಿಷ್ಟ ಜಾತಿಯಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಗಳು ಈಗಲೂ ಎಸ್ಸಿ ಕೋಟಾದಡಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆಯನ್ನು ಕೇಳಿಬಂತು. ಪ್ರತಿಕ್ರಿಯಿಸಿದ ತಹಶೀಲ್ದಾರ್, ಮತಾಂತರಗೊಂಡಿದ್ದಾರೆ ಎನ್ನುವುದಕ್ಕೆ ದಾಖಲೆ ಏನಿದೆ ಎಂದು ಪ್ರಶ್ನಿಸಿದರು. ಮತಾಂತರಗೊಂಡಾಗ ಯಾವುದೇ ದಾಖಲೆ ಪತ್ರಗಳನ್ನು ನೀಡುವುದಿಲ್ಲ. ಪುಸ್ತಕ ದಲ್ಲಿ ಸಹಿ ಹಾಕಿಸಿಕೊಳ್ಳುತ್ತಾರಷ್ಟೇ ಎಂದರು. ತಹಶೀಲ್ದಾರ್ ಮಾತನಾಡಿ, ಇದರ ಬಗ್ಗೆ ತನಗೂ ಹೆಚ್ಚಿನ ಮಾಹಿತಿ ಇಲ್ಲ. ಒಂದು ಅರ್ಜಿ ನೀಡಿ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.