Advertisement
ಸ್ವಾತಂತ್ರ್ಯ ಪೂರ್ವ 1934ರಲ್ಲಿ ಮಹಾತ್ಮ ಗಾಂಧೀಜಿಯವರು ಪುತ್ತೂರಿಗೆ ಆಗಮಿಸಿದ ಮತ್ತು ಅಶ್ವತ್ಥ ಮರದ ಕೆಳಗೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ನೆನಪಿನಲ್ಲಿ ಈ ಗಾಂಧಿ ಕಟ್ಟೆಯನ್ನು ನಿರ್ಮಿಸಿ, ಗಾಂಧಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿತ್ತು. ಇದೇ ಜಾಗದಲ್ಲಿ ಅಶ್ವತ್ಥ ಮರವೂ ಇದೆ. ಪುತ್ತೂರು ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಿದ ಸಂದರ್ಭದಲ್ಲೂ ಗಾಂಧಿಕಟ್ಟೆಯನ್ನು ಹಾಗೆಯೇ ಉಳಿಸಲಾಗಿತ್ತು. ಗಾಂಧಿ ಕಟ್ಟೆ ಹಾಗೂ ಅಶ್ವತ್ಥ ಮರದ ಮಹತ್ವ ಮತ್ತು ಪ್ರಸ್ತುತತೆ ಕುರಿತು ಹಲವು ಬಾರಿ ಚರ್ಚೆ, ಗೊಂದಲಗಳು ನಡೆದಿದ್ದವು. ಕೆಲವರು ಗಾಂಧಿ ಕಟ್ಟೆ ಹಾಗೂ ಅಶ್ವತ್ಥ ಮರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ಪರ ಮಾತನಾಡಿದರೆ, ಇನ್ನು ಕೆಲವರು ಪುತ್ತೂರಿನ ಅಭಿವೃದ್ಧಿಯ ದೃಷ್ಟಿಯಿಂದ ವ್ಯತ್ಯಾಸಗಳನ್ನು ಮಾಡಿಕೊಳ್ಳುವ ಪರ ನಿಂತು ನಿರಂತರ ವಾದ -ಪ್ರತಿವಾದಗಳು ನಡೆಯುತ್ತಿದ್ದವು.
ಈ ಜಾಗದ ಅಭಿವೃದ್ಧಿಯ ದೃಷ್ಟಿಯಿಂದ ನಗರಸಭೆಯಿಂದ 8 ಲಕ್ಷ ರೂ. ವೆಚ್ಚದ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಗಾಂಧಿಕಟ್ಟೆಯನ್ನು ರಸ್ತೆಗೆ ಸಮಾನಾಂತರವಾಗಿ ಕೆಳಭಾಗಕ್ಕೆ ಮರು ನಿರ್ಮಿಸುವುದು ಮತ್ತು ಅಶ್ವತ್ಥ ಮರಕ್ಕೆ ಸುತ್ತಲೂ ಭದ್ರವಾದ ಕಟ್ಟೆ ಕಟ್ಟುವ ಯೋಜನೆಯನ್ನು ನಗರಸಭೆ ಹಾಕಿಕೊಂಡಿದೆ. ಅಶ್ವತ್ಥ ಮರಕ್ಕೆ ಹಾನಿಯಾಗದಂತೆ ಪೂರಕ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತದೆ.
-ರೂಪಾ ಟಿ. ಶೆಟ್ಟಿ
ಪೌರಾಯುಕ್ತರು, ನಗರಸಭೆ ಪುತ್ತೂರು