Advertisement

ಪುತ್ತೂರು ಜಿಲ್ಲೆಯಾದರೆ ಬೆಳ್ತಂಗಡಿಗೂ ಅನುಕೂಲ: ಪ್ರದೇಶವಾರು ಮೂಲ ಸೌಕರ್ಯ ಅಭಿವೃದ್ಧಿ ಸಾಧ್ಯ

10:33 PM Feb 27, 2021 | Team Udayavani |

ಪುತ್ತೂರು ಜಿಲ್ಲೆಯಾಗಬೇಕೆಂಬ ಬೇಡಿಕೆ ಈಡೇರಿದರೆ ತಾಲೂಕುಗಳಿಗೂ ಸಾಕಷ್ಟು ಲಾಭವಾಗಲಿದೆ. ಬೆಳ್ತಂಗಡಿ ಬಹಳ ಪ್ರಮುಖವಾದ ತಾಲೂಕು. ಆದರೆ ಅಭಿವೃದ್ಧಿಯ ಲೆಕ್ಕಾಚಾರದಲ್ಲಿ ಇನ್ನಷ್ಟು ವೇಗದಲ್ಲಿ ಸಾಗಬೇಕಿದೆ. ಪುತ್ತೂರು ಜಿಲ್ಲೆಯಾದರೆ ಬೆಳ್ತಂಗಡಿಗೆ ಒಂದಿಷ್ಟು ಅವಕಾಶ ಹೆಚ್ಚುವ ಸಾಧ್ಯತೆ ಇದೆ.

Advertisement

ಬೆಳ್ತಂಗಡಿ: ದ.ಕ. ಜಿಲ್ಲೆಯ ಅತೀ ದೊಡ್ಡ ವಿಧಾನ ಸಭಾ ಕ್ಷೇತ್ರವನ್ನು ಹೊಂದಿರುವ ಬೆಳ್ತಂಗಡಿ ತಾಲೂಕು ಪ್ರಾದೇಶಿಕವಾಗಿ ಅತ್ತ ಚಿಕ್ಕಮಗಳೂರು-ಇತ್ತ ಮಂಗಳೂರು ಸಂಪರ್ಕ ಕೇಂದ್ರದ ಮಧ್ಯ ಹರಡಿ ಕೊಂಡಿದೆ. ಜಿಲ್ಲಾವಾರು ಸಿಗುವ ಅನುದಾನದಲ್ಲಿ ಅಭಿವೃದ್ಧಿಗಾಗಿ ಹಂಬಲಿಸುತ್ತಿರುವ ತಾಲೂಕಿಗೆ ಸಿಗುತ್ತಿರುವ ಪ್ರಮಾಣ ಸಾಲದಾಗುತ್ತಿದೆ.

ಈ ಮಧ್ಯೆ ಪುತ್ತೂರು ಜಿಲ್ಲೆಯಾಗ ಬೇಕೆಂಬ ದಶಕಗಳ ಕೂಗಿಗೆ ಗ್ರಾಮೀಣ ಭಾಗವಾದ ಬೆಳ್ತಂಗಡಿ ತಾಲೂಕಿನ ಜನತೆಯೂ ಕಿವಿಯಾಗಿದ್ದಾರೆ. ಮಂಗಳೂರು- ವಿಲ್ಲುಪುರಂ, ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋದರೂ ಕೈಗಾರಿಕೆ, ಉದ್ಯಮ ವಿಷಯದಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಪುತ್ತೂರು ಜಿಲ್ಲೆಯಾದರೆ ಗ್ರಾಮೀಣ ಭಾಗಕ್ಕೆ ಆದ್ಯತೆ ಹೆಚ್ಚು ಸಿಗಬಹುದು. ಅದು ಸಾಧ್ಯವಾದರೆ ಬೆಳ್ತಂಗಡಿಗೂ ಅನುಕೂಲವಾಗಲಿದೆ ಎಂಬುದು ಸದ್ಯದ ಲೆಕ್ಕಾಚಾರ.

ಪ್ರವಾಸೋದ್ಯಮ ಅಭಿವೃದ್ಧಿ
ಪುತ್ತೂರು ಜಿಲ್ಲೆಯಾದರೆ ಜಿಲ್ಲಾಧಿಕಾರಿಗಳು ಕಚೇರಿ ಪುತ್ತೂರು ಬಂದಲ್ಲಿ, ಸಹಾಯಕ ಆಯುಕ್ತರ ಕಚೇರಿ ಬೆಳ್ತಂಗಡಿ ಬರುವ ಸಾಧ್ಯತೆ ಇದೆ. ಹಾಗಾದಲ್ಲಿ ಅಧಿಕಾರಿಗಳ ಮೇಲಿನ ಒತ್ತಡ ತಗ್ಗಲಿದ್ದು, ಗ್ರಾಮೀಣರ ಸಂಕಷ್ಟಗಳನ್ನು ಹತ್ತಿರದಿಂದ ಆಲಿಸಲು, ಸಮಸ್ಯೆಗೆ ಶೀಘ್ರ ಸ್ಪಂದಿಸಲು ಸಾಧ್ಯ. ಬೆಳ್ತಂಗಡಿ ತಾಲೂಕಿಗೆ ಧಾರ್ಮಿಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಮುಕುಟಪ್ರಾಯ. ಪ್ರವಾಸೋದ್ಯಮವಾಗಿ ಶಿಶಿಲ ಶಿಶಿಲೇಶ್ವರ ಮತ್ಸಕ್ಷೇತ್ರ, ಸುರ್ಯ ಸದಾಶಿವರುದ್ರ ದೇವಸ್ಥಾನ, ಕೊಕ್ಕಡ ಶ್ರೀ ಸೌತಡ್ಕ ಮಹಾಗಣಪತಿ ಕ್ಷೇತ್ರ ಸೇರಿದಂತೆ ಚಾರಣಿಗ ಸ್ವರ್ಗ ಐತಿಹಾಸಿಕ ಗಡಾಯಿಕಲ್ಲು, ಚಾರ್ಮಾಡಿ ಘಾಟ್‌, ಜಲಪಾತ ರಮಣೀಯ ತಾಣಗಳ ಅಭಿವೃದ್ಧಿಗೆ ಪೂರಕ ಅನುದಾನ ಲಭ್ಯವಾಗಬಹುದು. ಇದರಿಂದ ಸ್ಥಳೀಯ ಆರ್ಥಿಕತೆಯೂ ಬೆಳೆಯಬಹುದು.

ಕೈಗಾರಿಕೆ ಹಬ್‌ ಸ್ಥಾಪನೆ
ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ಮಂದಿ ವಿದ್ಯಾವಂತರಿದ್ದರೂ ಉದ್ಯೋಗ ಅರಸಿ ಬೆಂಗಳೂರು, ಮಂಗಳೂರಿನತ್ತ ಮುಖ ಮಾಡುವರೇ ಹೆಚ್ಚು. ಈಗಾಗಲೆ ಕೈಗಾರಿಕೆ ಸ್ಥಾಪನೆಗೆ ಜಿಲ್ಲಾಡಳಿತದಿಂದ ಸ್ಥಳಾವಕಾಶ ಕಲ್ಪಿಸಲಾಗಿದೆ. ಆದರೆ ಕೈಗಾರಿಕೆ ಸ್ಥಾಪನೆಯಾಗಿಲ್ಲ. ಇದರ ಸ್ಥಾಪನೆಗೂ ಹೆಚ್ಚು ಗಮನ ನೀಡಬಹುದು.

Advertisement

ನಿಗಮಗಳ ಮೂಲಕ ಅಭಿವೃದ್ಧಿ
ಅಂಬೇಡ್ಕರ್‌ ನಿಗಮ, ದೇವರಾಜು ಅರಸು ನಿಗಮ ಸೇರಿದಂತೆ ಅನೇಕ ನಿಗಮಗಳಿಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿರುತ್ತಾರೆ.ಸದ್ಯ ಸಿಗುವ ಅನುದಾನ ಎಲ್ಲ ತಾಲೂಕುಗಳಿಗೆ ಹರಿದು ಹಂಚಿಹೋಗುತ್ತಿದೆ. ಪುತ್ತೂರು ಜಿಲ್ಲೆಯಾದರೆ ಬೆಳ್ತಂಗಡಿ ತಾಲೂಕಿನಲ್ಲಿ ಅತಿ ಹೆಚ್ಚು ಮಲೆಕುಡಿಯ, ಪ.ಜಾತಿ/ಪಂ. ಕುಟುಂಗಳಿದ್ದು, ಅವುಗಳ ಅಭಿವೃದ್ಧಿ ಪೂರಕ ಅನುದಾನ ಜತೆಗೆ ಅವರ ಮಕ್ಕಳ ಶಿಕ್ಷಣ ಪೂರಕವಾಗಲಿದೆ.

ಕಂದಾಯ ಇಲಾಖೆ ಸೇರಿದಂತೆ ಅನೇಕ ಸರಕಾರಿ ಇಲಾಖೆಗಳು ಜಿಲ್ಲಾಕೇಂದ್ರಕ್ಕೆ ಬಂದರೆ ಅದರ ಲಾಭ ತಾಲೂಕಿಗೂ ಆಗುತ್ತದೆ. ಇದರೊಂದಿಗೆ ಇನ್ನಷ್ಟು ಕಾಲೇಜುಗಳು, ವಿದ್ಯಾಸಂಸ್ಥೆಗಳು ಬಂದರೆ ಗ್ರಾಮೀಣ ಭಾಗ ವಿದ್ಯಾರ್ಥಿಗಳಿಗೆ ಕಲಿಕೆಗೆ ಮತ್ತಷ್ಟು ಅವಕಾಶಗಳೂ ತೆರೆಯಬಹುದು.

ಕೃಷಿ ಪಾರ್ಕ್‌ ನಿರ್ಮಾಣ
ಬೆಳ್ತಂಗಡಿ, ಸುಳ್ಯ ಈ ಭಾಗದಲ್ಲಿ ಕೃಷಿ ಆಶ್ರಿತ ಭೂಮಿಗಳು ಅತೀ ಹೆಚ್ಚಿವೆ. ಆದರೆ ಸೂಕ್ತ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಕೃಷಿಗೆ ನೇರ ಮಾರುಕಟ್ಟೆ ವ್ಯವಸ್ಥೆ ಒದಗಿಸಲು ಕೃಷಿ ಪಾರ್ಕ್‌ ನಿರ್ಮಾಣಕ್ಕೂ ಉತ್ತೇಜನ ಸಿಗಬಹುದು. ಇದಲ್ಲದೆ ಎಸ್‌ಇಝೆಡ್‌ ಅನುದಾನಗಳು ಬರಬಹುದು.

- ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next