ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಎದುರಿನ ದೇವರಮಾರು ಗದ್ದೆಯಲ್ಲಿ ಜ. 18ರಂದು 27ನೇ ವರ್ಷದ ಹೊನಲು ಬೆಳಕಿನ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ನಡೆಯಲಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಅತಿ ಹೆಚ್ಚು ಮಂದಿ ಕಂಬಳಾಭಿಮಾನಿಗಳು ಸೇರುವ ಹಾಗೂ ಕಂಬಳ ಕೋಣಗಳು ಭಾಗವಹಿಸುವ ಕಂಬಳ ಎಂಬ ಹೆಗ್ಗಳಿಕೆ ಪುತ್ತೂರು ಕಂಬಳಕ್ಕೆ ಇದೆ. ಈ ಬಾರಿ 150ಕ್ಕೂ ಹೆಚ್ಚು ಜೋಡಿ ಕೋಣ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.
ವಿವಿಧ ವಿಭಾಗಗಳಲ್ಲಿ
ಕಂಬಳದಲ್ಲಿ 6 ವಿಭಾಗಗಳ ಕೋಣಗಳು ಭಾಗವಹಿಸಲಿವೆ. ಕನೆಹಲಗೆ, ಅಡ್ಡಹಲಗೆ, ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಹಿರಿಯ ವಿಭಾಗದ ಪ್ರಥಮ ವಿಜೇತ ಕೋಣಗಳಿಗೆ 2 ಪವನ್ ಚಿನ್ನ, ದ್ವಿತೀಯ ವಿಜೇತ ಕೋಣಗಳಿಗೆ 1 ಪವನ್ ಚಿನ್ನ ಬಹುಮಾನ ಹಾಗೂ ಕಿರಿಯ ವಿಭಾಗಕ್ಕೆ ಪ್ರಥಮ 1 ಪವನ್ ಹಾಗೂ ದ್ವಿತೀಯ ಅರ್ಧ ಪವನ್ ಚಿನ್ನದ ಬಹುಮಾನ ನೀಡಿ ಗೌರವಿಸಲಾಗುತ್ತದೆ. ನೇಗಿಲು ಕಿರಿಯ ಬೆಳಗ್ಗೆ 10.35, ನೇಗಿಲು ಹಿರಿಯ ಬೆಳಗ್ಗೆ 11.15, ನೇಗಿಲು ಹಿರಿಯ ಬೆಳಗ್ಗೆ 11.45, ಹಗ್ಗ ಹಿರಿಯ ಮಧ್ಯಾಹ್ನ 12.30, ಕನೆಹಲಗೆ ಮತ್ತು ಅಡ್ಡಹಲಗೆ ಸಂಜೆ 4 ಗಂಟೆಗೆ ಆರಂಭವಾಗುತ್ತದೆ.
ಜ. 18ರಂದು ಬೆಳಗ್ಗೆ 10.32ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಉದ್ಘಾಟಿಸುವರು. ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ಕಂಬಳದ ಸಾರಥ್ಯ ವಹಿಸಿರುವ ಎನ್. ಮುತ್ತಪ್ಪ ರೈ ಗೌರವ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆ ಯಲಿದ್ದು, ಜಯಕರ್ನಾಟಕ ರಾಜ್ಯಾಧ್ಯಕ್ಷ ಜಗದೀಶ್ ಬಿ.ಎನ್. ಅಧ್ಯಕ್ಷತೆ ವಹಿಸಲಿ ದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸಂಜೀವ ಮಠಂದೂರು, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್ ಭಾಗವಹಿಸಲಿದ್ದಾರೆ.
ಬಹುಮಾನ ವಿತರಣೆ
ಜ. 19ರಂದು ಬೆಳಗ್ಗೆ ಬಹುಮಾನ ವಿತರಣೆ ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್, ಡಿವೈಎಸ್ಪಿ ದಿನಕರ ಶೆಟ್ಟಿ ಅತಿಥಿಗಳಾಗಿರುವರು ಎಂದು ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ತಿಳಿಸಿದ್ದಾರೆ.