ಪುತ್ತೂರು: ಕಾಲೇಜಿನ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜಪಥ್‌ನಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದ ತಂಡದಲ್ಲಿ ಪಾಲ್ಗೊಂಡ ಪ್ರೀತಿ ಡಿ. ಅವರು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್ ವಿಲ್ಸನ್ ಪ್ರಭಾಕರ್ ಹೇಳಿದರು.
ದಿಲ್ಲಿಯ ರಾಜಪಥ್‌ನಲ್ಲಿ ನಡೆದ ಪಥ ಸಂಚಲನಕ್ಕೆ ಕಾಲೇಜಿನ ಎನ್‌ಸಿಸಿಘಟಕದಿಂದ ಆಯ್ಕೆಯಾಗಿ ಪಾಲ್ಗೊಂಡ ಪ್ರೀತಿ ಡಿ. ಅವರ ಅಭಿನಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾರ್ಜೆಂಟ್ ಪ್ರೀತಿ ಡಿ. ಮಾತನಾಡಿ, ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ತುಂಬ ಅನುಭವಗಳು ಸಿಕ್ಕವೆ. ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿರುವುದು ಸಂತೋಷ ತಂದಿದೆ. ಇದೊಂದು ಭಾಗ್ಯ, ತನ್ನ ತಂದೆ- ತಾಯಿ, ಎನ್‌ಸಿಸಿ ಗುರುಗಳು ಹಾಗೂ ಶಿಕ್ಷಕ ವೃಂದ, ಸ್ನೇಹಿತ ಬಂಧುಗಳು ಈ ಸಾಧನೆಗೆ ಕಾರಣ ಎಂದರು.
ಪ್ರೀತಿ ಅವರ ತಂದೆ ರಾಮ ಡಿ. ಮಾತನಾಡಿ, ನಮ್ಮ ಮಕ್ಕಳು ನಮ್ಮ ದೇಶ, ಶಿಕ್ಷಣ ಸಂಸ್ಥೆ ಹಾಗೂ ನಮಗೆ ಒಳ್ಳೆಯ ಹೆಸರನ್ನು ತಂದುಕೊಡಬೇಕು ಎಂಬುದೇ ಹೆತ್ತವರ ಕನಸು. ಹೆಣ್ಣು ಮಕ್ಕಳು ಸಾಧನೆ ಮಾಡಿದ್ದಾರೆ ಎಂದರೆ ಅದು ಗೌರವದ ವಿಷಯ. ಪುತ್ರಿ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಹೆಮ್ಮೆ ತಂದುಕೊಟ್ಟಿದೆ ಎಂದರು.
ಕಾಲೇಜಿನ ಸಂಚಾಲಕ ಜಯರಾಮ ಭಟ್ ಶುಭ ಹಾರೈಸಿದರು. ಪ್ರೀತಿ ಅವರ ತಾಯಿ ಹೇಮಾ ಡಿ., ಎನ್‌ಸಿಸಿ ಸಂಯೋಜಕ ಅತುಲ್ ಶೆಣೈ ಹಾಗೂ ಪ್ರಾಧ್ಯಾಪಕ ಕ್ಯಾ| ಡಿ. ಮಹೇಶ್ ರೈ, ಎನ್‌ಸಿಸಿ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕ ಡಾ| ರೋಹಿಣಾಕ್ಷ ಕಾರ್ಯಕ್ರಮ ನಿರ್ವಹಿಸಿದರು.
ಆರಂಭದಲ್ಲಿ ಪ್ರೀತಿ ಡಿ. ಅವರನ್ನು ವಿದ್ಯಾರ್ಥಿ ಸಂಘ ಹಾಗೂ ಎನ್‌ಸಿಸಿ ಘಟಕದ ವತಿಯಿಂದ ಪುತ್ತೂರು ಬಸ್‌ನಿಲ್ದಾಣದಿಂದ ತೆರೆದ ವಾಹನದಲ್ಲಿ ಕಾಲೇಜಿಗೆ ಕರೆತರಲಾಯಿತು.