Advertisement

Puttur ವಿದ್ಯಾರ್ಥಿನಿಗೆ ಚೂರಿ ಇರಿತ: ಸಂಘಟನೆಗಳಿಂದ ಉಪನ್ಯಾಸಕಿ ವಿರುದ್ಧ ಆಕ್ರೋಶ

12:01 AM Aug 21, 2024 | Team Udayavani |

ಪುತ್ತೂರು: ನಗರದ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಗೆ ಅದೇ ಕಾಲೇಜಿನ ಸಹಪಾಠಿ ವಿದ್ಯಾರ್ಥಿಯೋರ್ವ ಹರಿತವಾದ ಆಯುಧದಿಂದ ಇರಿದಿರುವುದಾಗಿ ಆರೋಪ ಕೇಳಿ ಬಂದಿದ್ದು ಇಬ್ಬರೂ ಭಿನ್ನ ಸಮುದಾಯಕ್ಕೆ ಸೇರಿದವರಾದ ಹಿನ್ನೆಲೆಯಲ್ಲಿ ಎರಡೂ ತಂಡದ ಮುಖಂಡರು ಆಸ್ಪತ್ರೆ ಮುಂಭಾಗ ಜಮಾಯಿಸಿದ ಪರಿಣಾಮ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡ ಘಟನೆ ಆ. 20ರಂದು ಸಂಭವಿಸಿದೆ.

Advertisement

ಗಾಯಾಳು ವಿದ್ಯಾರ್ಥಿನಿ ಬನ್ನೂರಿನವಳಾಗಿದ್ದು, ವಿದ್ಯಾರ್ಥಿ ಕಬಕ ಸಮೀಪದವನು ಎನ್ನಲಾಗಿದೆ. ಇಬ್ಬರೂ ಒಂದೇ ಕಾಲೇಜಿನಲ್ಲಿ ಕಲಿಯುತ್ತಿದ್ದರೂ ಪರಸ್ಪರ ಪರಿಚಿತರಾಗಿರಲಿಲ್ಲ ಎನ್ನಲಾಗಿದ್ದು ಹಾಗಾಗಿ ಘಟನೆಗೆ ಕಾರಣವೇನು ಎಂಬುದು ವಿಚಾರಣೆ ಬಳಿಕವಷ್ಟೇ ಸ್ಪಷ್ಟವಾಗಲಿದೆ.

ಇವರಿಬ್ಬರು ಕೊಂಬೆಟ್ಟು ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳು. ವಾಣಿಜ್ಯ, ಕಲಾ ವಿಭಾಗದ ವಿದ್ಯಾರ್ಥಿಗಳಾಗಿದ್ದು ಇತಿಹಾಸ ವಿಷಯ ದಲ್ಲಿ ಒಂದೇ ತರಗತಿಯ ಸಹಪಾಠಿ ಗಳಾಗಿದ್ದರು. ವಿದ್ಯಾರ್ಥಿನಿ ಮುಸ್ಲಿಂ ಸಮುದಾಯಕ್ಕೆ ಹಾಗೂ ವಿದ್ಯಾರ್ಥಿ ಹಿಂದೂ ಸಮುದಾಯಕ್ಕೆ ಸೇರಿದ್ದು ಇಬ್ಬರ ಮಧ್ಯೆ ಸಣ್ಣ ವಿಷಯಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ.

ಮಾತಿಗೆ ಮಾತು ಬೆಳೆದು ಹರಿತವಾದ ವಸ್ತುವಿನಿಂದ ಗೀರಿದ ಗಾಯ ಉಂಟಾಗಿದ್ದು ವಿದ್ಯಾರ್ಥಿ ತನಗೆ ಚಾಕುವಿನಿಂದ ಇರಿದಿದ್ದಾನೆ ಎಂದು ವಿದ್ಯಾರ್ಥಿನಿ ದೂರಿದ್ದಾಳೆ.

ಜಗಳ ಆದದ್ದು ಎಲ್ಲಿ?
ಮಾಹಿತಿಯೊಂದರ ಪ್ರಕಾರ ಬೆಳಗ್ಗೆ ಕಾಲೇಜು ಆರಂಭಕ್ಕೆ ಮೊದಲು ಪುತ್ತೂರು ಮುಖ್ಯ ಆಂಚೆ ಕಚೇರಿಯನ್ನು ಸಂಪರ್ಕಿಸುವ ರಸ್ತೆಯಲ್ಲಿ ವಿದ್ಯಾರ್ಥಿಗಳು ಬರುತ್ತಿರುವ ವೇಳೆ ಈ ಘಟನೆ ನಡೆದಿದೆ. ಇಲ್ಲಿ ಇಬ್ಬರ ನಡುವೆ ಜಗಳ ಸಂಭವಿಸಿ ಅದು ತರಗತಿ ತನಕವೂ ಮುಂದುವರಿದಿದೆ ಎನ್ನಲಾಗಿದೆ.

Advertisement

ಇನ್ನೊಂದು ಮಾಹಿತಿ ಪ್ರಕಾರ, ಪ್ರಥಮ ಅವಧಿಯ ತರಗತಿಯಲ್ಲಿ ಇಬ್ಬರ ನಡುವೆ ಜಗಳ ಸಂಭವಿಸಿದ್ದು ಈ ವೇಳೆ ವಿದ್ಯಾರ್ಥಿ ಹರಿತವಾದ ವಸ್ತುವಿನಿಂದ ತಿವಿದಿದ್ದಾನೆ ಎನ್ನಲಾಗಿದೆ. ಆದರೆ ಕೆಲ ವಿದ್ಯಾರ್ಥಿಗಳ ಪ್ರಕಾರ ಆತ ತಿವಿದಿಲ್ಲ. ಗಾಯ ಹೇಗೆ ಸಂಭವಿಸಿದೆ ಅನ್ನುವುದೇ ಆಶ್ಚರ್ಯಕರ ಸಂಗತಿ ಎನ್ನುತ್ತಾರೆ.

ಪೊಲೀಸರ ಆಗಮನ
ಘಟನೆಯ ಮಾಹಿತಿ ಪಡೆದ ವಿದ್ಯಾರ್ಥಿನಿ ತಾಯಿ ನೀಡಿದ ದೂರಿನ ಪ್ರಕಾರ ನಗರ ಠಾಣಾ ಪೊಲೀಸರು ಕಾಲೇಜಿಗೆ ಅಗಮಿಸಿ ಸಿಸಿಟಿವಿ ವೀಡಿಯೋ ಪರಿಶೀಲಿಸಿದ್ದಾರೆ. ಆಕೆಯ ಜತೆಗಿದ್ದ ಬೇರೆ ವಿದ್ಯಾರ್ಥಿಗಳ ಬಳಿಯೂ ಮಾಹಿತಿ ಕಲೆ ಹಾಕಿದ್ದಾರೆ. ಪೊಲೀಸರು ಆರೋಪಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ವಿದ್ಯಾರ್ಥಿಗಳಿಬ್ಬರ ಸಹಪಾಠಿಗಳನ್ನು ಕರೆಯಿಸಿ ವಾಸ್ತವ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಇಬ್ಬರೂ ಭಿನ್ನ ಧರ್ಮದ ವಿದ್ಯಾರ್ಥಿಗಳು ಎಂಬ ಮಾಹಿತಿ ಹರಡುತಿದ್ದಂತೆ ಆಸ್ಪತ್ರೆಗೆ ಒಂದು ಸಮು ದಾಯದ ನೂರಾರು ಮಂದಿ ಆಗಮಿಸಿದ್ದು ಘಟನೆ ಯನ್ನು ತೀವ್ರವಾಗಿ ಖಂಡಿಸಿದರು. ಪೊಲೀಸರು ಆಸ್ಪತ್ರೆ ಮುಂಭಾಗ ಬಿಗಿ ಬಂದೋಬಸ್ತ್ ಮಾಡಿದ್ದು ಮುಖಂಡರನ್ನು ಸಮಧಾನಿಸಿದರು. ಪ್ರಕರಣಕ್ಕೆ ಕೋಮು ಬಣ್ಣದ ಸ್ಪರ್ಶ ನೀಡುವ ಪ್ರಯತ್ನವೂ ಸಾಮಾಜಿಕ ಜಾಲ ತಾಣದ ಮೂಲಕ ನಡೆದ ಕಾರಣ ಆತಂಕದ ಸ್ಥಿತಿ ಉಂಟಾಯಿತು.

ಉಪನ್ಯಾಸಕಿ ವಿರುದ್ಧ ಕ್ರಮಕ್ಕೆ ಆಗ್ರಹ
ಗಾಯವು ಗಾಜು ತಗಲಿ ಆದದ್ದು ಎಂದು ಪೊಲೀಸರಿಗೆ ತಿಳಿಸುವಂತೆ ಕಾಲೇಜಿನ ಉಪನ್ಯಾಸಕಿಯೋರ್ವರು ಹೇಳಿದ್ದಾರೆ ಎಂದು ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಈ ಉಪನ್ಯಾಸಕಿ ವಿರುದ್ಧ ಪ್ರಕರಣ ದಾಖಲಿಸಿ ಕಾಲೇಜಿನಿಂದ ಅಮಾನತು ಮಾಡುವಂತೆ ವಿದ್ಯಾರ್ಥಿನಿ ಪರ ಹಾಜರಿದ್ದ ಹಲವಾರು ಮಂದಿ ಆಗ್ರಹಿಸಿದ ಘಟನೆಯೂ ನಡೆಯಿತು.

ವಿದ್ಯಾರ್ಥಿ ಬಿಡುಗಡೆ ?
ವಿದ್ಯಾರ್ಥಿನಿಗೆ ಹರಿತವಾದ ಆಯುಧದಿಂದ ಇರಿದ ಪ್ರಕರಣ ತಿರುವು ಪಡೆದುಕೊಂಡಿದ್ದು ಪೊಲೀಸರ ವಶದಲ್ಲಿದ್ದ ವಿದ್ಯಾರ್ಥಿಯನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭ ಯಾವುದೇ ತಪ್ಪು ಕಂಡು ಬಾರದ ಹಿನ್ನೆಲೆಯಲ್ಲಿ ಪೊಲೀಸರು ವಿದ್ಯಾರ್ಥಿಯನ್ನು ರಾತ್ರಿ ಬಿಡುಗಡೆಗೊಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿದ್ಯಾರ್ಥಿನಿಯ ಕೈಯ ಮೇಲಿನ ಗಾಯದ ಬಗ್ಗೆ ಅನುಮಾನ ಮೂಡಿದೆ. ಕೈಗೆ ಗೀರಿದವರು ಯಾರು ಎನ್ನುವ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು ವಿದ್ಯಾರ್ಥಿನಿಯನ್ನು ಇನ್ನಷ್ಟು ತನಿಖೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೆಳಗ್ಗೆ 9.20ಕ್ಕೆ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು ಸತ್ಯಾಸತ್ಯತೆ ಆ ಮೇಲೆ ತಿಳಿಯಲಿದೆ. ಇದು ಕಾಲೇಜಿನ ಆವರಣದೊಳಗೆ ನಡೆದ ಘಟನೆ ಅಲ್ಲ ಅನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
– ಗೋಪಾಲ, ಕಾಲೇಜಿನ ಪ್ರಾಂಶುಪಾಲ

Advertisement

Udayavani is now on Telegram. Click here to join our channel and stay updated with the latest news.

Next