Advertisement

ಸ್ವಚ್ಛ ನಗರದ ಕನಸು ಸಾಕಾರಗೊಳ್ಳಲು ಸಾರ್ವಜನಿಕರ ಸಹಭಾಗಿತ್ವ ಅಗತ್ಯ

07:09 PM Sep 05, 2021 | Team Udayavani |

ಪುತ್ತೂರು ಮತ್ತು ಸುಳ್ಯ ನಗರಗಳಲ್ಲಿ ಸ್ವಚ್ಛ ನಗರ ನಿರ್ಮಾಣದ ಕನಸು ಬಿತ್ತಿ ದಶಕವೇ ಕಳೆದಿದೆ. ಜನರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಲು ವರ್ಷಂಪ್ರತಿ ಹತ್ತಾರು ಕಾರ್ಯಕ್ರಮಗಳು ನಡೆಯುತ್ತಿವೆ. ಅದರೆ ಇವೆಲ್ಲವೂ  ಆ ದಿನಕ್ಕಷ್ಟೇ ಸೀಮಿತವಾಗಿವೆಯೇ ಹೊರತು ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಒದಗಿಸುವಲ್ಲಿ ವಿಫ‌ಲವಾಗಿವೆ.

Advertisement

ದ.ಕ.ಜಿಲ್ಲೆಯಲ್ಲಿ ಪುತ್ತೂರು, ಸುಳ್ಯ ನಗರ ದಿನೇದಿನೆ ಬೆಳವಣಿಗೆ ಹೊಂದುತ್ತಿರುವ ಪ್ರದೇಶಗಳಾಗಿವೆ. ಶಿಕ್ಷಣ, ಆರೋಗ್ಯ ಸಹಿತ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಕಾಣುತ್ತಿದ್ದು ಆ ಮೂಲಕ ಸುತ್ತಮುತ್ತಲಿನ ಜನರನ್ನು ಸೆಳೆಯುತ್ತಿವೆ. ಈ ಎರಡೂ ನಗರಗಳು ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಹಾಕಿರುವಂತೆಯೇ ಸ್ವತ್ಛತೆಯನ್ನು ಕಾಯ್ದುಕೊಳ್ಳುವುದು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಬಲು ದೊಡ್ಡ ಸವಾಲಾಗಿ ಮಾರ್ಪಟ್ಟಿದೆ. ಇನ್ನು ಜನರು ಕೂಡ ಸ್ವತ್ಛತೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಸ್ಥಳೀಯಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಈ ಎರಡೂ ನಗರಗಳನ್ನು ಸಂಪರ್ಕಿಸುವ ರಸ್ತೆಗಳ ಇಕ್ಕೆಲಗಳಲ್ಲಿ  ಹೊಳೆ, ಹಳ್ಳ, ತೋಡುಗಳಿಗೇನೂ ಕೊರತೆ ಇಲ್ಲ. ನೀರಿನ ಮೂಲಸೆಲೆಗಳಾದ ಇವು ಜನರ ಪಾಲಿಗೆ ತ್ಯಾಜ್ಯ ಎಸೆಯಲು ಇರುವ ಡಂಪಿಂಗ್‌ ಯಾರ್ಡ್‌ಗಳು. ಅಷ್ಟೇಕೆ ನಗರ ಪ್ರದೇಶದಲ್ಲಿಯೇ ಇರುವ ಕಾಲುವೆ, ತೋಡುಗಳ ಮೋರಿಗಳನ್ನು ಕಂಡರೆ ಜನರು ಅಲ್ಲೇ ತ್ಯಾಜ್ಯ ಎಸೆದು ಮುಂದೆ ಸಾಗುವುದನ್ನು ಪ್ರತಿನಿತ್ಯ ಕಾಣಬಹುದು. ಕೇವಲ ರಾತ್ರಿ ಮಾತ್ರವಲ್ಲದೆ ಹಗಲಿನ ವೇಳೆಯೂ ಇಂತಹ ಕೃತ್ಯಗಳಲ್ಲಿ ತೊಡಗುವ ಕಿಡಿಗೇಡಿಗಳ ತಂಡವೇ ತುಂಬಿದೆ. ಮನಬಂದಲ್ಲಿ ತ್ಯಾಜ್ಯ ಎಸೆಯುವ ಜನರ ಪ್ರವೃತ್ತಿಗೆ ಕಡಿವಾಣ ಹಾಕಲು ಸ್ಥಳೀಯಾಡಳಿತ ಸಂಸ್ಥೆಗಳು ದಂಡ, ಸಿಸಿ ಕೆಮರಾ ಅಳವಡಿಕೆ ಇವೇ ಮೊದಲಾದ ಕ್ರಮಗಳನ್ನು ಕೈಗೊಂಡರೂ ಅವು ನಿರೀಕ್ಷಿತ ಫ‌ಲಿತಾಂಶ ನೀಡಿಲ್ಲ.

ಪುತ್ತೂರಿನ ನಗರ ಮತ್ತು ಆಸುಪಾಸಿನ ಗ್ರಾಮಗಳಲ್ಲಿ ಸಂಗ್ರಹವಾಗುವ ಕಸವನ್ನು ಬಯೋಗ್ಯಾಸ್‌ ಆಗಿ ಪರಿವರ್ತಿಸುವ ಪ್ರಯತ್ನ ಬನ್ನೂರಿನ ನೆಕ್ಕಿಲ ಡಂಪಿಂಗ್‌ ಯಾರ್ಡ್‌ನಲ್ಲಿ ಪ್ರಾರಂಭಗೊಂಡಿದೆ. ಸುಮಾರು ಹತ್ತಾರು ವರ್ಷಗಳ ಹೋರಾಟದ ಪರಿಣಾಮ ಮಹತ್ವದ ಯೋಜನೆಯೊಂದು ಕಾರ್ಯಗತಗೊಂಡಿದ್ದು ಇದರಿಂದ ತ್ಯಾಜ್ಯ ಮಣ್ಣಿನಲ್ಲಿ ಬೆರೆಯದೆ ಮರು ಬಳಕೆ ಸಾಧ್ಯವಾಗಲಿದೆ. ಇನ್ನು ಸುಳ್ಯ ನಗರದ ತ್ಯಾಜ್ಯ ಸಮಸ್ಯೆಯ ಕಥೆಯೇ ಭಿನ್ನ. ಇಲ್ಲಿ ಡಂಪಿಂಗ್‌ ಯಾರ್ಡ್‌ನ ಅವ್ಯವಸ್ಥೆಯ ಕಾರಣದಿಂದಾಗಿ ನಗರದ ಕಸವನ್ನು ತಂದು ಹಾಕಲು ಊರವರು ಪ್ರತಿಭಟಿಸಿದ ಕಾರಣ ಕಳೆದ ಎರಡು ವರ್ಷಗಳಿಂದ ನಗರದ ಕಸವನ್ನು ನಗರ ಪಂಚಾಯತ್‌ ಆವರಣದ ಶೆಡ್‌ನ‌ಲ್ಲಿ ರಾಶಿ ಹಾಕಲಾಗಿತ್ತು. ಪ್ರಸ್ತುತ ಕಸ ಬರ್ನಿಂಗ್‌ ಯಂತ್ರವನ್ನು ಡಂಪಿಂಗ್‌ ಯಾರ್ಡ್‌ನಲ್ಲಿ ಅಳವಡಿಸಲಾಗುತ್ತಿದ್ದು ಇದರಿಂದ ಡಂಪಿಂಗ್‌ ಯಾರ್ಡ್‌ನ ಕಸದ ರಾಶಿ ಕರಗುವ ನಿರೀಕ್ಷೆ ಹೊಂದಲಾಗಿದೆ. ಆ ಬಳಿಕ ದೈನಂದಿನ ಕಸವನ್ನು ಬರ್ನಿಂಗ್‌ ಮಾಡಲು ಯೋಜನೆ ರೂಪಿಸಲಾಗಿದೆ.

ಉಭಯ ನಗರಗಳ ತ್ಯಾಜ್ಯವನ್ನು ವೈಜ್ಞಾನಿಕ ಮಾದರಿಯಲ್ಲಿ ವಿಲೇ ಮಾಡುವ ಪ್ರಯತ್ನವೀಗ ಮುನ್ನೆಲೆಗೆ ಬಂದಿದೆ. ಈ ಪ್ರಯೋಗ ಯಶಸ್ಸು ಕಂಡದ್ದೇ ಆದಲ್ಲಿ  ಪುತ್ತೂರು ಮತ್ತು ಸುಳ್ಯ ನಗರಗಳ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಲಭಿಸೀತು ಎಂಬ ಆಶಾವಾದ ಸ್ಥಳೀಯಾಡಳಿತ ಸಂಸ್ಥೆಗಳದ್ದಾಗಿದೆ. ಸಾರ್ವಜನಿಕರು ಸ್ವಚ್ಛತೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸದೇ ಹೋದಲ್ಲಿ ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಸ್ಥಳಿಯಾಡಳಿತ ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡಲೇಬೇಕಿದೆ.

Advertisement

 

ಸಂ

Advertisement

Udayavani is now on Telegram. Click here to join our channel and stay updated with the latest news.

Next