Advertisement

ನಗರೋತ್ಥಾನದಡಿ ಸುಂದರಗೊಳ್ಳುತ್ತಿವೆ ಪುತ್ತೂರು ನಗರದ ರಸ್ತೆಗಳು

05:42 AM Jan 17, 2019 | |

ನಗರ : ಪುತ್ತೂರು ನಗರಸಭೆಗೆ ನಗರೋತ್ಥಾನ ಯೋಜನೆಯಲ್ಲಿ ಮಂಜೂರಾದ ಅನುದಾನದಿಂದ ನಗರ ವ್ಯಾಪ್ತಿಯಲ್ಲಿ ವಿವಿಧ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯ ಕೆಲ ದಿನಗಳಿಂದ ಭರದಿಂದ ನಡೆಯುತ್ತಿದೆ.

Advertisement

ಹೊಂಡ-ಗುಂಡಿಗಳಿಂದ ಸಂಚಾರ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುತ್ತಿದ್ದ ರಸ್ತೆಗಳೆಲ್ಲ ಈಗ ಸುಂದರಗೊಳ್ಳುತ್ತಿವೆ. ಇಕ್ಕಟ್ಟಾದ ರಸ್ತೆಗಳು ಒಂದಷ್ಟು ಅಗಲಗೊಳ್ಳುತ್ತಿವೆ. ನಗರದ ನಾಲ್ಕೂ ಮೂಲೆಗಳಲ್ಲಿ ರಸ್ತೆ ಸುಂದರಗೊಳಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ.

ಕಳೆದ ಸರಕಾರದ ಅವಧಿಯಲ್ಲಿ ಪುತ್ತೂರು ನಗರಸಭೆಗೆ ಮಂಜೂರಾಗಿದ್ದ 25 ಕೋಟಿ ರೂ. ನಗರೋತ್ಥಾನ ಯೋಜನೆಯಲ್ಲಿ ಸುಮಾರು 20ಕ್ಕೂ ಅಧಿಕ ಕಾಮಗಾರಿಗಳನ್ನು ಆಗಿನ ಶಾಸಕರು ಹಾಗೂ ಆಗಿನ ನಗರಸಭೆ ಆಡಳಿತ ಹಂಚಿಕೆ ಮಾಡಿತ್ತು.

ಬಸ್‌ ನಿಲ್ದಾಣದ ಬಳಿಯಿಂದ ಏಳ್ಮುಡಿ, ಕಲ್ಲಾರೆ ಮೂಲಕ ದರ್ಬೆಯ ವರೆಗೆ ಡಾಮರು ಕಾಮಗಾರಿ ನಡೆದಿದೆ. ದರ್ಬೆಯಿಂದ ಬೆದ್ರಾಳದ ವರೆಗೆ ರಸ್ತೆ ವಿಸ್ತರಣೆ ಮಾಡುವ ಮತ್ತು ಡಾಮರು ಹಾಕುವ ಕೆಲಸ ಆರಂಭಗೊಂಡಿದೆ. ಬೆದ್ರಾಳ ಪ್ರದೇಶದಲ್ಲಿ ಡಾಮರು ಕೆಲಸ ನಡೆಸಲಾಗಿದ್ದು, ಮರೀಲ್‌ ಪ್ರದೇಶದ ಕಾಮಗಾರಿ ನಡೆಯುತ್ತಿವೆ. ಮರಗಳನ್ನು ತೆರವು ಮಾಡುವ ಕಾರ್ಯ ನಡೆಯುತ್ತಿದೆ.

ಪರ್ಲಡ್ಕದಲ್ಲಿ ಸುಂದರ ರಸ್ತೆ
ಪ್ರಮುಖ ಒಳ ರಸ್ತೆಗಳಲ್ಲಿ ಒಂದಾದ ದರ್ಬೆ-ಪರ್ಲಡ್ಕ ರಸ್ತೆ ಅಗಲ ಮಾಡುವ ಮತ್ತು ಡಾಮರು ಕಾಮಗಾರಿ 30 ಲಕ್ಷ ರೂ. ವೆಚ್ಚದಲ್ಲಿ ವೇಗವಾಗಿ ನಡೆಯುತ್ತಿದೆ.

Advertisement

ದರ್ಬೆ ಫಿಲೋಮಿನಾ ಕಾಲೇಜಿನ ದ್ವಾರದ ಅಭಿಮುಖದಿಂದ ಕವಲೊಡೆದ ರಸ್ತೆಯಲ್ಲಿ ಕೃಷಿ ಇಲಾಖೆ, ಎ.ಸಿ. ಕ್ವಾರ್ಟರ್ಸ್‌, ಪರ್ಲಡ್ಕ ಶಾಲೆ ಮೂಲಕ ಪರ್ಲಡ್ಕ ಕ್ರಾಸ್‌ವರೆಗೆ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯನ್ನು ನಗರೋತ್ಥಾನದಲ್ಲಿ ಸೇರಿಸಿ ಆದ್ಯತೆ ನೀಡಲಾಗಿತ್ತು.

ಸೇತುವೆಯೂ ದುರಸ್ತಿ
ದರ್ಬೆ-ಪರ್ಲಡ್ಕ ರಸ್ತೆಯಲ್ಲಿ ವಾಹನ ಸಂಚಾರವನ್ನು ಪಥ ಬದಲಾಯಿಸಿ ಕೊಡಲಾಗಿದೆ. ದರ್ಬೆ ಕಡೆಯಿಂದ ಹೋಗುವ ವಾಹನಗಳು ಪತ್ರಾವೊ ಆಸ್ಪತ್ರೆ ರಸ್ತೆಯಲ್ಲಿ ತೆರಳಿ ಪರ್ಲಡ್ಕ ಶಾಲೆಯ ಬಳಿ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ವ್ಯವಸ್ಥೆ ಮಾಡಲಾಗಿದೆ. ಈ ರಸ್ತೆಯಲ್ಲಿ ಅಗಲ ಕಿರಿದಾದ ಸೇತುವೆಯನ್ನು ಸರಿಪಡಿಸುವ ಕಾಮಗಾರಿಯೂ ನಡೆಯುತ್ತಿದೆ.

2.30 ಕೋಟಿ ರೂ.
ನಗರದ ಮುಖ್ಯ ರಸ್ತೆಯಲ್ಲಿ ಡಾಮರು ಕಾಮಗಾರಿಗೆ ನಗರೋತ್ಥಾನ ಯೋಜನೆಯಲ್ಲಿ 1 ಕೋಟಿ ರೂ. ನಿಗದಿ ಮಾಡಲಾಗಿದೆ. ಪುತ್ತೂರು ನಗರಕ್ಕೆ ವರ್ತುಲ ರಸ್ತೆಯಂತಿರುವ ಸಾಲ್ಮರ-ಜಿಡೆಕಲ್ಲು ರಸ್ತೆಯ ಅಭಿವೃದ್ಧಿಗೆ 1 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ನೆಹರೂನಗರದಿಂದ ಬನ್ನೂರು, ಸಾಲ್ಮರ, ರೋಟರಿಪುರ, ಜಿಡೆಕಲ್ಲು ಮೂಲಕ ಬೆದ್ರಾಳವನ್ನು ಸಂಪರ್ಕಿಸುವ ರಸ್ತೆ ಇದಾಗಿದೆ. ಪ್ರಸ್ತುತ ಸಾಲ್ಮರದಿಂದ ಜಿಡೆಕಲ್ಲುವರೆಗೆ ಅಭಿವೃದ್ಧಿಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next