ಮಂಗಳೂರು: ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆ ಆವರಣದಲ್ಲಿ 13 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಎಮಿನಿಟಿ ಕಟ್ಟಡ (ಸೌಲಭ್ಯ ಸೌಧ) ಜ.21ರ ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಸುರೇಶ್ ಪ್ರಭು ಉದ್ಘಾಟಿಸುವರು. ಆಧುನಿಕ ತಂತ್ರಜ್ಞಾನ, ಹೊಸ ಅಂತಾರಾಷ್ಟ್ರೀಯ (ಐಎಸ್‌ಓ) ಮತ್ತು ದೇಶೀಯ ಆಹಾರ ಭದ್ರತೆ ಹಾಗೂ ಸುರಕ್ಷತಾ ಮಾನದಂಡ (ಎಫ್‌ಎಸ್‌ಎಸ್‌ಎಐ)ಗಳಿಗೆ ಅನುಸಾರವಾಗಿ ಚಾಕಲೇಟ್ ಫ್ಯಾಕ್ಟರಿಗೆ ಹೊಂದಿಕೊಂಡೇ ಅತ್ಯಾಧುನಿಕ ವ್ಯವಸ್ಥೆಗಳುಳ್ಳ ನಾಲ್ಕು ಅಂತಸ್ತಿನ ಸೌಲಭ್ಯ ಸೌಧ ನಿರ್ಮಾಣವಾಗಿದೆ.
42 ಸಾವಿರ
ಚದರ ಅಡಿ ವಿಸ್ತೀರ್ಣ ಹೊಂದಿದ್ದು ಪ್ರತಿ ಅಂತಸ್ತು 10,500 ಅಡಿಗಳ ಸ್ಥಳ ಹೊಂದಿದೆ. ತಳ ಅಂತಸ್ತಿನಲ್ಲಿ ವಾಹನ ನಿಲುಗಡೆಗೆ ಅವಕಾಶ, ನೆಲ ಅಂತಸ್ತಿನಲ್ಲಿ ಸುಸಜ್ಜಿತ ಹವಾನಿಯಂತ್ರಿತ ಆಡಳಿತಾತ್ಮಕ ಕಚೇರಿಗಳು, ಅಧ್ಯಕ್ಷರ ಮತ್ತು ವ್ಯವಸ್ಥಾಪಕ ನಿರ್ದೇಶಕರ ಕಚೇರಿ, ಪ್ರಥಮ ಅಂತಸ್ತಿನಲ್ಲಿ ಅತ್ಯಾಧುನಿಕ ಸುಸಜ್ಜಿತ ಪಾಕಶಾಲೆ, 50 ಆಸನಗಳಿರುವ ಹವಾನಿಯಂತ್ರಿತ ಮತ್ತು 150 ಆಸನಗಳಿರುವ ಕೈಗಾರಿಕಾ ಭೋಜನ ಮತ್ತು ಉಪಾಹಾರ ಮಂದಿರ, ಪುರುಷ ಮತ್ತು ಮಹಿಳಾ ಕಾರ್ಮಿಕರಿಗೆ 1050 ಲಾಕರ್ ವ್ಯವಸ್ಥೆ, ಸಂದರ್ಶಕರಿಗಾಗಿ 50 ಆಸನಗಳ ಹವಾನಿಯಂತ್ರಿತ ಥಿಯೇಟರ್ ಇದೆ.
ಎರಡನೇ ಅಂತಸ್ತಿನಲ್ಲಿ ಪ್ಯಾಕಿಂಗ್ ಸೌಲಭ್ಯ, ಸಹ ಪ್ಯಾಕರ್‌ಗಳಿಗಾಗಿ ಕ್ಯಾಬಿನ್ ಕಲ್ಪಿಸಲಾಗಿದೆ. ಮೂರನೇ ಅಂತಸ್ತಿ ನಲ್ಲಿ ಹವಾನಿಯಂತ್ರಿತ ಬೋರ್ಡ್ ಮೀಟಿಂಗ್ ಹಾಲ್, ಅಂತಿಮ ಪ್ಯಾಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ನಾಲ್ಕನೇ ಅಂತಸ್ತಿನಲ್ಲಿ ಪ್ಯಾಕಿಂಗ್ ಪರಿಕರಗಳನ್ನು ಇಡಲು ಯೋಜಿಸಲಾಗಿದೆ. ಸೌಧದಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಲಾಗಿದೆ.
ಪೂರ್ಣ ಅಗ್ನಿ ನಿರೋಧಕ ವ್ಯವಸ್ಥೆಯನ್ನು ಹೊಂದಿದ್ದು, ಆಹಾರ ಭದ್ರತಾ ನಿಯಮಗಳ ಅನುಸಾರ ‘ಏರ್ ಶವರ್’ ವ್ಯವಸ್ಥೆ, ಆಹಾರ ಭದ್ರತೆಗೆ ಪೂರಕವಾದ ತರಬೇತಿ ಹಮ್ಮಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಇಡೀ ಸೌಧ ಆಹಾರ ಸುರಕ್ಷೆ ಮತ್ತು ಭದ್ರತೆಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾನದಂಡ ಪೂರೈಸಿದೆ.
ಕ್ಯಾಂಪ್ಕೋ ಚಾಕಲೇಟ್ ಈ ನೆಲದ ಸತ್ವ ಹೊಂದಿರುವ ಶುದ್ಧ ಸ್ವದೇಶೀ ಚಾಕಲೇಟ್. ಅಡಿಕೆ ಬೆಳೆಗಾರರು ಬೆಳೆದ ಕೊಕ್ಕೊ ಬೀಜಗಳು, ಕಬ್ಬು ಬೆಳೆಗಾರರು ಬೆಳೆದ ಕಬ್ಬಿನಿಂದ ತಯಾರಿಸಿದ ಸಕ್ಕರೆ, ಹೈನುಗಾರರು ಉತ್ಪಾದಿಸಿದ ಹಾಲಿನಿಂದ ಮಾಡಿದ ಹಾಲಿನಪುಡಿ ಗಳನ್ನು ಅತ್ಯಾಧುನಿಕ ಪ್ರಯೋಗಾಲಯದಲ್ಲಿ ಪರೀಕ್ಷಿಸಿ, ರಸಸ್ವಾದಕ್ಕೆ ಒಪ್ಪುವಂತೆ ಮಿಶ್ರಮಾಡಿ ಬಹುರಾಷ್ಟ್ರೀಯ ಕಂಪೆನಿಯ ವರಿಗಿಂತ ಉತ್ತಮ ಗುಣಮಟ್ಟದ ಚಾಕಲೇಟ್‌ಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ತಿಳಿಸಿದೆ.