Advertisement

ಗ್ರಾ.ಪಂ.ಗೆ ಏಕವಿನ್ಯಾಸ ಅನುಮೋದನೆ ಅಧಿಕಾರ ನೀಡಿ

09:16 AM May 01, 2022 | Team Udayavani |

ಪುತ್ತೂರು: ಗ್ರಾ.ಪಂ.ಗಿದ್ದ ಏಕ ವಿನ್ಯಾಸ ಅನುಮೋದನ ಅಧಿಕಾರವನ್ನು ಮೊಟಕುಗೊಳಿಸಿ ಯೋಜನ ಪ್ರಾಧಿಕಾರದ ವ್ಯಾಪ್ತಿಗೆ ನೀಡಿರುವ ಕಾರಣ ಗ್ರಾಮಾಂತರ ಪ್ರದೇಶದವರು ಮಂಗ ಳೂರಿನ ಮುಡಾದಿಂದ ಅನುಮತಿ ಪಡೆದುಕೊಳ್ಳಬೇಕಾಗಿದೆ.

Advertisement

ಇದರಿಂದ ಕೃಷಿಕರು ಸೇರಿ ಎಲ್ಲರಿಗೂ ತೊಂದರೆ ಉಂಟಾಗಿದೆ. ಹಾಗಾಗಿ ಹೊಸ ಆದೇಶ ಹಿಂಪಡೆದು ಹಿಂದಿನ ನಿಯಮವನ್ನೇ ಮುಂದುವರಿಸುವಂತೆ ಆಗ್ರಹಿಸಿ ಸರಕಾರಕ್ಕೆ ಪತ್ರ ಬರೆಯಲು ಪುತ್ತೂರು ಎಪಿಎಂಸಿ ಸಾಮಾನ್ಯ ಸಭೆ ನಿರ್ಣಯ ಕೈಗೊಂಡಿದೆ. ಪುತ್ತೂರು ಎಪಿಎಂಸಿ ಸಾಮಾನ್ಯ ಸಭೆಯು ಅಧ್ಯಕ್ಷ ದಿನೇಶ್‌ ಮೆದು ಅಧ್ಯಕ್ಷತೆಯಲ್ಲಿ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು. ಪ್ರಾಧಿಕಾರವು ನಗರಕ್ಕೆ ಸೀಮಿತವಾಗಿರುವುದರಿಂದ ಗ್ರಾಮೀಣ ಭಾಗದ ಜನರು ನಗರಕ್ಕೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಈ ಹಿಂದೆ 9/11 ಪ್ಲಾನ್‌ಗೆ ಅನುಮತಿ ನೀಡುವ ಅಧಿಕಾರ ಪಿಡಿಒಗಳಿಗಿತ್ತು. ಇದರಿಂದ ಒಂದು ತಿಂಗಳಲ್ಲಿ ಅನುಮತಿ ದೊರೆಯುತ್ತಿತ್ತು. ಯೋಜನ ಪ್ರಾಧಿಕಾರದ ವ್ಯಾಪ್ತಿಗೆ ನೀಡಿದ ಕಾರಣ ಆರು ತಿಂಗಳು ಕಾದರೂ ಸಿಗದ ಸ್ಥಿತಿ ಇದೆ. ಜನರು ದೂರದ ಮಂಗಳೂರಿಗೆ ಓಡಾಟ ಮಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಎಪಿಎಂಸಿ ಸದಸ್ಯರು ವಿವರಿಸಿದರು.

ಸ್ಥಳೀಯ ಯೋಜನ ಪ್ರದೇಶ ಹೊರತು ಪಡಿಸಿದ ಯಾವುದೇ ಭೂಮಿಯ ಮೇಲೆ ಅಭಿವೃದ್ಧಿ ಕೈಗೊಳ್ಳಲು ಉದ್ದೇಶಿಸಿರುವ ಯಾರೇ ಆಗಲಿ ಅನುಮತಿಗಾಗಿ ಸ್ಥಳೀಯ ಪ್ರಾಧಿಕಾರಕ್ಕೆ ಲಿಖೀತ ಅರ್ಜಿ ಸಲ್ಲಿಸಬೇಕು. ಸ್ಥಳೀಯ ಪ್ರಾಧಿಕಾರವು ಅನುಮತಿ ನೀಡುವ ಮೊದಲು ಪಟ್ಟಣ ಮತ್ತು ಗ್ರಾಮಾಂತರ ಯೋಜನ ನಿರ್ದೇಶಕರ ಅಥವಾ ಅವರಿಂದ ಅಧಿಕೃತಗೊಂಡು ನಗರ ಯೋಜನೆ ಸಹಾಯಕ ನಿರ್ದೇಶಕರ ದರ್ಜೆಗೆ ಕಡಿಮೆಯಿಲ್ಲದ ಅಧೀನ ಅಧಿಕಾರಿಯ ಪೂರ್ವಾನುಮೋದನೆ ಪಡೆಯುವುದು ಅಗತ್ಯ ಎಂದು ಆದೇಶದಲ್ಲಿ ಉಲ್ಲೇಖಿಸಿರುವುದರಿಂದ ಗ್ರಾ.ಪಂ. ವ್ಯಾಪ್ತಿಯ ಜನರಿಗೆ ತೊಂದರೆ ಉಂಟಾಗಿದೆ. ಹೀಗಾಗಿ ಹೊಸ ಆದೇಶ ಕೈ ಬಿಟ್ಟು ಹಳೆ ನಿಯಮವನ್ನು ಮುಂದುವರಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

 60 ಲಕ್ಷ ರೂ.: ಕ್ರಿಯಾ ಯೋಜನೆ

ದಿನೇಶ್‌ ಮೆದು ಮಾತನಾಡಿ, ಎಪಿಎಂಸಿ ಐದು ವರ್ಷದ ಆಡಳಿತದ ಅವಧಿಯು ಕೊನೆ ಹಂತದಲ್ಲಿದ್ದು, ಇನ್ನೂ ಒಂದು ಸಭೆ ನಡೆಸಲು ಮಾತ್ರ ಅವಕಾಶ ಇದೆ. ಹೀಗಾಗಿ ಸ್ವಂತ ನಿಧಿಯಲ್ಲಿರುವ 60 ಲಕ್ಷ ರೂ.ಅನುದಾನವನ್ನು ಆಯಾ ಸದಸ್ಯರ ವ್ಯಾಪ್ತಿಯಲ್ಲಿನ ರಸ್ತೆ ಅಭಿವೃದ್ಧಿಗೆ ಬಳಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ತಯಾರಿಸಿ ಕೃಷಿ ಮಾರುಕಟ್ಟೆ ಮಂಡಳಿಗೆ ಕಳುಹಿಸಿ ಒಪ್ಪಿಗೆ ಪಡೆಯೋಣ. ಸದಸ್ಯರು ಯಾವುದರೂ ಒಂದು ಕಾಮಗಾರಿಗೆ ಸಂಬಂಧಿಸಿ ಮಾತ್ರ ಪಟ್ಟಿ ನೀಡಬೇಕು ಎಂದು ಹೇಳಿದರು.

Advertisement

ಎಪಿಎಂಸಿ ಉಪಾಧ್ಯಕ್ಷ ಎನ್.ಎಸ್. ಮಂಜುನಾಥ, ಸದಸ್ಯರಾದ ಪುಲಸ್ತ್ಯಾ ರೈ, ಬಾಲಕೃಷ್ಣ ಬಾಣಜಾಲು, ತ್ರಿವೇಣಿ ಕರುಣಾಕರ, ಶಕೂರ್‌ ಹಾಜಿ, ತೀರ್ಥಾನಂದ ದುಗ್ಗಳ, ಬಾಲಕೃಷ್ಣ ಜೋಯಿಷ, ಕಾರ್ತಿಕ್‌ ರೈ ಬೆಳ್ಳಿಪ್ಪಾಡಿ, ಮೇದಪ್ಪ ಗೌಡ, ಕೃಷ್ಣ ಕುಮಾರ್‌ ರೈ, ಕುಶಾಲಪ್ಪ ಗೌಡ, ಕೊರಗಪ್ಪ, ಮೋಹನಾಂಗಿ ಉಪಸ್ಥಿತರಿದ್ದರು.

ಖಾಲಿ ಅಂಗಡಿ, ಗೋದಾಮು ಬಾಡಿಗೆ ನೀಡಲು ನಿರ್ಧಾರ

ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಖಾಲಿ ಇರುವ ಅಂಗಡಿ ಮತ್ತು ಗೋದಾಮುಗಳನ್ನು ಲೀವ್‌ ಆ್ಯಂಡ್‌ ಲೈಸನ್ಸ್‌ ಆಧಾರದಲ್ಲಿ ಹಂಚಿಕೆ ಮಾಡಲು ನಿರ್ಧರಿಸಲಾಯಿತು. 40 ಎಂ.ಟಿ. ಸಾಮರ್ಥ್ಯದ 4 ಗೋದಾಮು, 30 ಎಂ.ಟಿ. ಸಾಮರ್ಥ್ಯದ 2 ಗೋದಾಮು, ಸಣ್ಣ ಅಂಗಡಿ-1, ಸಂಡ್ರಿ ಶಾಪ್‌-6, ಸಂತೆಕಟ್ಟೆ ಸಮೀಪದ ಅಂಗಡಿ-6, ಸಂತೆಕಟ್ಟೆ ಸಮೀಪದ ಗೋದಾಮು-2 ಖಾಲಿ ಇದ್ದು ಇವುಗಳಿಗೆ ಮೊತ್ತ ನಿಗದಿಪಡಿಸಿ ಕೃಷಿ ಮಾರುಕಟ್ಟೆ ಮಂಡಳಿಯ ಒಪ್ಪಿಗೆ ಪಡೆದು ಹಂಚಿಕೆ ಮಾಡೋಣ. ಈಗಾಗಲೇ ತರಕಾರಿ ಮಾರಾಟದಾರರು ಸಹಿತ ಅನೇಕರು ಬಾಡಿಗೆಗೆ ಕಟ್ಟಡ ನೀಡುವಂತೆ ಬೇಡಿಕೆ ಇಡುತ್ತಿದ್ದು, ಎಪಿಎಂಸಿ ಲೈಸನ್ಸ್‌ ಹೊಂದಿದವರಿಗೆ ನೀಡಲು ಅವಕಾಶ ಇದೆ ಎಂದು ಅಧ್ಯಕ್ಷ ದಿನೇಶ್‌ ಮೆದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next