Advertisement
ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಅನುದಾನಿತ ಹಿ. ಪ್ರಾ. ಶಾಲೆ ಈ ಶೈಕ್ಷಣಿಕ ವರ್ಷದಿಂದ ಪೂರ್ಣ ಪ್ರಮಾಣದ ಸರಕಾರಿಶಾಲೆಯಾಗಿ ಬದಲಾಗಲಿದೆ. ಅನುದಾನಿತ ಶಾಲೆಯ ಮಾನ್ಯತೆ ರದ್ದುಪಡಿಸಿ ಶೂನ್ಯ ದಾಖಲಾತಿಯಿಂದ ಮುಚ್ಚಿರುವ ಮಂಗಳೂರು ಉತ್ತರ ವಲಯದ ಮುಕ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಂಜೂರಾತಿ ಹುದ್ದೆ, ಡೈಸ್ ಕೋಡ್ ಸಹಿತ
ಬೆಳಿಯೂರುಕಟ್ಟೆ ಶಾಲೆಗೆ ಸ್ಥಳಾಂತರಿಸಿ 2024-25ನೇ ಸಾಲಿನಿಂದ ಸರಕಾರಿ ಶಾಲೆ ಎಂದು ಪರಿವರ್ತಿಸಲಾಗಿದೆ.
1948ರಲ್ಲಿ ವಿದ್ಯಾಭಿಮಾನಿಗಳ ಸಹಕಾರದಲ್ಲಿ ಬೆಳಿಯೂರುಕಟ್ಟೆಯಲ್ಲಿ 1ರಿಂದ 7 ನೇ ತರಗತಿ ತನಕದ ಶಾಲೆಯೊಂದನ್ನು
ತೆರೆಯಲಾಯಿತು. 11 ಮಂದಿ ಸದಸ್ಯರ ನ್ನೊಳಗೊಂಡ ಶಾಲಾ ಸ್ಥಾಪಕರ ಸಮಿತಿ ಶಾಲೆಯ ಉಸ್ತುವಾರಿ ಹೊಂದಿತ್ತು. ಸುಮಾರು 5.80 ಎಕ್ರೆ ಜಮೀನು ಹೊಂದಿರುವ ಶಾಲೆ ಆ ಕಾಲದಲ್ಲಿ ಬಲ್ನಾಡು ಮತ್ತು ಪುಣಚ ಗ್ರಾಮದ ವಿದ್ಯಾರ್ಥಿಗಳಿಗಿದ್ದ ಏಕೈಕ ಶಾಲೆಯಾಗಿತ್ತು. ಮೈದಾನ, ಕೊಠಡಿ ಸಹಿತ ಅಗತ್ಯ ಸೌಕರ್ಯಗಳಿದ್ದವು. ಅನುದಾನಿತ ಶಾಲೆಯಾಗಿದ್ದ ಇಲ್ಲಿ ಸುಮಾರು 400ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು. ಕಾಲ ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿ, ಪ್ರಸ್ತುತ 45 ಮಂದಿ ಇಲ್ಲಿ ಓದುತ್ತಿದ್ದಾರೆ.
Related Articles
ಈ ಶಾಲೆಯಲ್ಲಿ ಈಗ ಪೂರ್ಣಕಾಲಿಕ ಶಿಕ್ಷಕರಿಲ್ಲ. ಹಿಂದೆ 8 ಮಂದಿ ಇದ್ದು, ಅವರ ನಿವೃತ್ತಿ ಬಳಿಕ ಹೊಸ ಶಿಕ್ಷಕರನ್ನು ನೇಮಿಸಿಲ್ಲ.
6 ವರ್ಷಗಳಿಂದ ಮುಖ್ಯ ಶಿಕ್ಷಕರಾಗಿದ್ದ ಜಯರಾಮ ಶೆಟ್ಟಿ 2023ರಲ್ಲಿ ನಿವೃತ್ತಿ ಹೊಂದಿದ್ದು, ಬಳಿಕ ಅತಿಥಿ ಶಿಕ್ಷಕರಿಂದಲೇ
ಶಾಲೆ ನಡೆಸಬೇಕಾಗಿತ್ತು.
Advertisement
ವೇತನ ರಹಿತ ಸೇವೆಮುಖ್ಯ ಶಿಕ್ಷಕ ಜಯರಾಮ ಶೆಟ್ಟಿ ನಿವೃತ್ತಿ ಬಳಿಕವೂ ಒಂದು ವರ್ಷ ವೇತನ ಪಡೆಯದೆ ಸೇವೆ ಮುಂದುವರಿಸಿದ್ದು, ಮೂವರು ಅತಿಥಿ ಶಿಕ್ಷಕರನ್ನು ನಿಯೋಜಿಸಿ ಆಡಳಿತ ಮಂಡಳಿ ಮೂಲಕ ವೇತನ ನೀಡಲಾಯಿತು. ಒಂದು ವರ್ಷದ ಕಾಲ ತರಗತಿಗಳು ನಡೆಯಿತು. ಈ ಶೈಕ್ಷಣಿಕ ಸಾಲಿನಲ್ಲಿ ಇದೇ ಸ್ಥಿತಿಯಲ್ಲಿ ಮುಂದುವರಿಸಲು ಕಷ್ಟ ಎನ್ನುವ ಸ್ಥಿತಿಗೆ ತಲುಪಿತು. ಸರಕಾರಿ ಶಾಲೆಯನ್ನಾಗಿಸಲು ಪ್ರಸ್ತಾವ: ಇಲಾಖೆ ಒಪ್ಪಿಗೆ
ಈ ಶಾಲೆಯ 3-4 ಕಿ.ಮೀ. ಅಂತರದಲ್ಲಿ ಬೇರೆ ಯಾವುದೇ ಶಾಲೆಗಳಿಲ್ಲ. ಶಾಲೆಯು ಅಗತ್ಯ ಮೂಲಸೌಕರ್ಯಗಳನ್ನು ಒಳಗೊಂಡಿರುವುದರಿಂದ 2023-24ನೇ ಸಾಲಿನಿಂದ ಸರಕಾರಿ ಶಾಲೆಯನ್ನು ಆರಂಭಿಸಲು ಆಡಳಿತ ಮಂಡಳಿ ವತಿಯಿಂದ
ಅನುಮತಿ ಕೋರಲಾಗಿತ್ತು. ಈ ಕೋರಿಕೆಯಂತೆ ಶಿಕ್ಷಕರ ಕೊರತೆಯಿಂದ ಈ ಅನುದಾನಿತ ಶಾಲೆಯನ್ನು ನಿಯಮಾನುಸಾರ ಮುಚ್ಚಿ ಸದರಿ ಶಾಲೆಯ ಎಲ್ಲ ಚರ ಮತ್ತು ಸ್ಥಿರಾಸ್ತಿಗಳನ್ನು ಸರಕಾರದ ವಶಕ್ಕೆ ಪಡೆದು, 2018-19ನೇ ಸಾಲಿನಲ್ಲಿ ಶೂನ್ಯ ದಾಖಲಾತಿಯಿಂದ ತಾತ್ಕಾಲಿಕವಾಗಿ ಮುಚ್ಚಿರುವ ಮಂಗಳೂರು ಉತ್ತರ ವಲಯದ ಮುಕ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ಡೈಸ್ ಸಂಖ್ಯೆ 29240308802)ಯನ್ನು ಬೆಳಿಯೂರುಕಟ್ಟೆ ಅನುದಾನಿತ ಶಾಲೆಯ ಕಟ್ಟಡಕ್ಕೆ ಸ್ಥಳಾಂತರಿಸಿ 2024-25ನೇ ಸಾಲಿನಿಂದ ಶಾಲೆ ನಡೆಸಲು ಅನುಮತಿ ನೀಡುವಂತೆ ದ.ಕ.ಜಿಲ್ಲಾ ಉಪನಿರ್ದೇಶಕರು ದಾಖಲೆ ಸಹಿತ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಶಿಕ್ಷಣ ಇಲಾಖೆ ಈ ಬಗ್ಗೆ ನಿಯಮಾನುಸಾರ ಅಗತ್ಯ ಕ್ರಮಗಳನ್ನು ಕೂಡಲೇ ವಹಿಸುವಂತೆ
ದ.ಕ.ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ಪರಿವರ್ತನೆ
ಬೆಳಿಯೂರುಕಟ್ಟೆ ಅನುದಾನಿತ ಹಿ.ಪ್ರಾ.ಶಾಲೆಯನ್ನು ಶಿಕ್ಷಕರ ಕೊರತೆಯಿಂದ ನಡೆಸಲು ಸಾಧ್ಯವಾಗದ ಕಾರಣ ಸರಕಾರಿ ಶಾಲೆಯನ್ನಾಗಿ ಪರಿವರ್ತಿಸಿ ಮುಂದುವರಿಸುವಂತೆ ಆಡಳಿತ ಮಂಡಳಿ ಮನವಿ ಸಲ್ಲಿಸಿತ್ತು. ಅದರಂತೆ ಅನುದಾನಿತ ಶಾಲೆಯ ಮಾನ್ಯತೆ, ಅನುದಾನವನ್ನು ಹಿಂಪಡೆದು, ಎಲ್ಲ ಸೊತ್ತುಗಳನ್ನು ದಾನ ರೂಪದಲ್ಲಿ ಪಡೆದು, ಇಲಾಖೆ ಸೂಚನೆಯಂತೆ ಸರಕಾರಿ ಶಾಲೆಯಾಗಿ ಪರಿವರ್ತಿಸಲಾಗಿದೆ.
*ಲೋಕೇಶ್ ಎಸ್.ಆರ್., ಕ್ಷೇತ್ರ
ಶಿಕ್ಷಣಾಧಿಕಾರಿ, ಪುತ್ತೂರು *ಕಿರಣ್ ಪ್ರಸಾದ್ ಕುಂಡಡ್ಕ