Advertisement

ಪುತ್ತೂರಿಗೆ ಒಳಚರಂಡಿ ಯೋಜನೆ: 154 ಕೋ.ರೂ.ಗಾತ್ರ, ಮರು ಪ್ರಸ್ತಾವನೆಗೆ ನಿರ್ಧಾರ

10:06 PM Dec 14, 2022 | Team Udayavani |

ಪುತ್ತೂರು : ಜಿಲ್ಲಾ ಕೇಂದ್ರವಾಗುವ ಅರ್ಹತೆ ಹೊಂದಿದರುವ ಪುತ್ತೂರು ನಗರಕ್ಕೆ ಸಮಗ್ರ ಒಳಚರಂಡಿ ಯೋಜನೆ ನಿರ್ಮಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಹಿಂದೆ ಯುಜಿಡಿಗೆ ಡಿಪಿಆರ್‌ ರಚಿಸಿದ್ದರೂ ತಾಂತ್ರಿಕ ಕಾರಣದಿಂದ ಸರಕಾರ ಅದನ್ನು ತಿರಸ್ಕರಿಸಿ ಫೀಕಲ್‌ ಸ್ಲಡ್ಜ್ ಸೆಪ್ಟೆàಜ್‌ ಮ್ಯಾನೇಜ್‌ಮೆಂಟ್‌ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿತ್ತು. ಆದರೆ ಇದೀಗ ಮತ್ತೆ ಯುಜಿಡಿ ಅನುಷ್ಠಾನಿಸುವ ಬಗ್ಗೆ ಚಿಂತನೆ ನಡೆದಿದೆ.

Advertisement

ಯುಜಿಡಿ ಯೋಜನೆ
ಪುತ್ತೂರಿನಲ್ಲಿ ಸಮಗ್ರ ಒಳಚರಂಡಿ ಯೋಜನೆ ನಿರ್ಮಿಸಲು 154 ಕೋ.ರೂ.ಯೋಜನೆಯ ಡಿಪಿಆರ್‌ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಪುತ್ತೂರು ನಗರದ ಭೌಗೋಳಿಕತೆ ಒಳಚರಂಡಿ ನಿರ್ಮಿಸಲು ಪೂರಕವಾಗಿಲ್ಲ ಎಂಬ ತಾಂತ್ರಿಕ ಸಂಶೋಧನಾ ವರದಿ ಹಿನ್ನೆಲೆಯಲ್ಲಿ ಯೋಜನೆ ಜಾರಿಗೆ ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ ಅದನ್ನು ಕೈಬಿಟ್ಟು ಫೀಕಲ್‌ ಸ್ಲಡ್ಜ್ ಸೆಪ್ಟೆàಜ್‌ ಮ್ಯಾನೇಜ್‌ಮೆಂಟ್‌ ಯೋಜನೆ (ಎಫ್‌ಎಸ್‌ಎಸ್‌ಎಂ) ಜಾರಿಗೊಳಿಸಲು ನಿರ್ಧರಿಸಲಾಗಿತ್ತು.

ಮರು ಪ್ರಸ್ತಾವನೆಗೆ ಸೂಚನೆ
ಒಳಚರಂಡಿ ಯೋಜನೆ ಅನುಷ್ಠಾನದ ಬಗ್ಗೆ ಶಾಸಕರು ಆಸಕ್ತಿ ಹೊಂದಿದ್ದು ಮರು ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದ್ದಾರೆ. ಈ ಬಗ್ಗೆ ಮರು ಸರ್ವೇಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಪುತ್ತೂರಿನಲ್ಲಿ ಶೌಚ ಕೊಳಚೆ ಸಂಸ್ಕರಣಾ ಯೋಜನೆ ಜಾರಿಗೊಳಿಸಲು ಐದು ಎಕ್ರೆ ಜಾಗ ಗುರುತಿಸಿದ್ದು 3.32 ಕೋಟಿ ರೂ. ಅನುದಾನ ಇದ್ದು ಅದಲ್ಲದೆ ಯುಜಿಡಿ ಕೂಡ ಅನುಷ್ಠಾನದ ಯೋಚನೆ ಮಾಡಲಾಗಿದೆ.

ತೆರೆದ ಚರಂಡಿಯಲ್ಲಿ ಮಲಿನ ನೀರು
ಒಳಚರಂಡಿ ವ್ಯವಸ್ಥೆ ಇಲ್ಲದೆ ನಗರದಲ್ಲಿ ದಿನಂಪ್ರತಿ ಉತ್ಪತ್ತಿಯಾಗುವ ತ್ಯಾಜ್ಯ ಮಳೆ ಗಾಲದಲ್ಲಿ ರಾಜ ಕಾಲುವೆ, ವಾರ್ಡ್‌ ಗಳಲ್ಲಿನ ಚರಂಡಿಯಲ್ಲಿ ಹಾದು ಕುಮಾರಾಧಾರಾ ನದಿಗೆ ಸೇರಿದರೆ, ಬೇಸಗೆ ಕಾಲದಲ್ಲಿ ಚರಂಡಿಯಲ್ಲೇ ಬೀಡು ಬಿಡುವ ಸ್ಥಿತಿ ಇದೆ. ಉರ್ಲಾಂಡಿಯಿಂದ ಎಪಿಎಂಸಿ ಮೂಲಕ ಏಳು¾ಡಿ, ತೆಂಕಿಲದಿಂದ ಏಳು¾ಡಿ ಸಂಪರ್ಕ ಕಲ್ಪಿಸುವ ಎರಡು ರಾಜ ಕಾಲುವೆಗಳಿವೆ. ಇವೆರಡು ಐದು ಕಿ.ಮೀ. ಉದ್ದವಿದೆ.

ತ್ಯಾಜ್ಯ, ಮಲಿನ ನೀರು ಹರಿದು ಹೋಗಲು ಪ್ರತ್ಯೇಕ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಹರಿಯುವ ತೆರೆದ ಚರಂಡಿಯಲ್ಲೇ ತ್ಯಾಜ್ಯ ನೀರು ಸಾಗುತ್ತಿದೆ. ಈಗಿನ ಲೆಕ್ಕಚಾರದ ಪ್ರಕಾರ ಜನಸಂಖ್ಯೆ 60 ಸಾವಿರ ದಾಟಿದೆ. ನಗರದಲ್ಲಿ ನೂರಾರು ವಾಣಿಜ್ಯ ಕಟ್ಟಡ, ಆಸ್ಪತ್ರೆ, ಕೈಗಾರಿಕೆ, ಹೊಟೇಲ್‌, ಶಿಕ್ಷಣ ಸಂಸ್ಥೆಗಳಿವೆ. ಇವುಗಳಿಂದ ಉತ್ಪತ್ತಿಯಾಗುವ ಮಲಿನ ನೀರು ಹರಿಯಲು ರಾಜಕಾಲುವೆಯೇ ಏಕೈಕ ದಾರಿ. ಮನೆ, ಕಟ್ಟಡಗಳಲ್ಲಿ ಇಂಗುಗುಂಡಿ ನಿರ್ಮಾಣಕ್ಕೆ ನಗರ ಆಡಳಿತ ಸೂಚನೆ ನೀಡಿದ್ದರೂ ಅದಿನ್ನು ಪಾಲನೆ ಯಾಗದೆ ತೆರದ ಚರಂಡಿಗೆ ತ್ಯಾಜ್ಯ ನೀರು ಹರಿಯುತ್ತಿದೆ. ಪ್ರತೀ ವರ್ಷ ಚರಂಡಿ ನಿರ್ವಹಣೆಗೆ ಲಕ್ಷಾಂತರ ರೂ. ಖರ್ಚು ಮಾಡಲಾಗುತಿದ್ದು ಈ ಬಾರಿ 40 ಲಕ್ಷ ರೂ.ಮೀಸಲಿರಿಸಲಾಗಿದೆ. ಸವೊìàಚ್ಚ ನ್ಯಾಯಾಲಯದ ನಿರ್ದೇಶನದಂತೆ ಕಲುಷಿತ ನೀರಿಗೆ ಪ್ರಾಥಮಿಕ ಸಂಸ್ಕರಣಾ ಘಟಕಗಳನ್ನು ಅಳವಡಿಸಿ ಇರಿಸಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಮ್ಮತಿ ಪತ್ರವನ್ನು ಪಡೆಯಬೇಕು. ಅದರ ಪಾಲನೆ ಕೂಡ ಆಗುತ್ತಿಲ್ಲ.

Advertisement

ಯಾವುದು ಸೂಕ್ತ?
ಶೌಚಗುಂಡಿಯ ಕೊಳಚೆಯೂ ಸೇರಿದಂತೆ ಮನೆಮನೆಯ ಕೊಳಚೆಯನ್ನು ಸಕ್‌ ಮಾಡಿ ಸಂಗ್ರಹಿಸಿ ಟ್ಯಾಂಕ್‌ಗಳ ಮೂಲಕ ಕೊಂಡೊಯ್ದು ಸಂಸ್ಕರಣಾ ಘಟಕಕ್ಕೆ ತುಂಬಿ ಅಲ್ಲಿ ವೈಜ್ಞಾನಿಕವಾಗಿ ಸಂಸ್ಕರಣೆಗೆ ಒಳಪಡಿಸಿ ಅದರಿಂದ ಗ್ಯಾಸ್‌ ಮತ್ತು ಗೊಬ್ಬರ ತಯಾರಿಸುವುದೇ ಎಫ್‌ಎಸ್‌ಎಸ್‌ಎಂ ಯೋಜನೆಯ ಸಾರಾಂಶ. ಒಳಚರಂಡಿ ಯೋಜನೆ ಅಂದರೆ, ವಲಯ ರೂಪಿಸಿಕೊಂಡು ವೆಟ್‌ವೆಲ್‌ಗೆ ತ್ಯಾಜ್ಯ ನೀರು ಪೂರೈಕೆ ಮಾಡಿ ಅಲ್ಲಿಂದ ತ್ಯಾಜ್ಯ ಶುದ್ಧೀಕರಣ ಘಟಕಕ್ಕೆ ಪೂರೈಕೆಯಾಗಿ ಅಲ್ಲಿ ಮೂರು ಹಂತದಲ್ಲಿ ನೀರು ಶುದ್ಧಿಕರಣಗೊಂಡು, ಮರು ಬಳಕೆ ಮಾಡುವ ಉದ್ದೇಶ ಹೊಂದಿದೆ. ಒಟ್ಟಿನಲ್ಲಿ ದಿನೇ ದಿನೇ ಜನಸಂಖ್ಯೆ, ವಾಣಿಜ್ಯ ಕಟ್ಟಡ ಹೆಚ್ಚುತ್ತಿರುವ ನಗರದಲ್ಲಿ ಯುಜಿಡಿಯಂತಹ ಯೋಜನೆಗಳಿಗೆ ಪರ್ಯಾಯವಾಗಿ ಎಫ್‌ಎಸ್‌ಎಸ್‌ಎಂ ಕಾರ್ಯನಿರ್ವಹಿಸಬಹುದೇ ಅನ್ನುವ ಬಗ್ಗೆ ಯೋಚನೆ ಮಾಡಲಾಗುತ್ತಿದೆ.

ಸರ್ವೇಯ ಮೂಲಕ ಪರಿಶೀಲನೆ
ಬೆಳೆಯುತ್ತಿರುವ ಪುತ್ತೂರು ನಗರಕ್ಕೆ ಯುಜಿಡಿ ಆವಶ್ಯಕತೆಯ ಬಗ್ಗೆ ಸರ್ವೇ ನಡೆಸಿ ಮರು ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಈ ಹಿಂದೆ 154 ಕೋ.ರೂ.ವೆಚ್ಚದ ಡಿಪಿಆರ್‌ ತಯಾರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಅದರ ಅನುಷ್ಠಾನ ಸಾಧ್ಯತೆಯ ಬಗ್ಗೆ ಸರ್ವೇಯ ಮೂಲಕ ಪರಿಶೀಲಿಸಲಾಗುತ್ತದೆ.
– ಸಂಜೀವ ಮಠಂದೂರು, ಶಾಸಕ, ಪುತ್ತೂರು

- ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next