Advertisement

ಬೆಂಗಳೂರಿನ ಕಟ್ಟಡದಲ್ಲಿ ಬೆಂಕಿ: ಪುತ್ತೂರಿನಲ್ಲಿ “ಅಗ್ನಿ’ಕಣ್ಣು

08:08 PM Sep 22, 2021 | Team Udayavani |

ಪುತ್ತೂರು: ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡದ ಬೆನ್ನಲ್ಲೇ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಪುತ್ತೂರು ನಗರದಲ್ಲಿನ ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ನಿಯಂತ್ರಣ ಸೇರಿದಂತೆ ಸುರಕ್ಷತೆ ನಿಯಮ ಪಾಲನೆಯಾಗುತ್ತಿದೆಯೇ ಎನ್ನುವ ಬಗ್ಗೆ ಅಗ್ನಿಶಾಮಕ ದಳ ಕಣ್ಣಿಟ್ಟಿದೆ.

Advertisement

ಕೆಲವು ಬಹುಮಹಡಿ ಕಟ್ಟಡಗಳಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸುವತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಹಲವು ದೂರು ಕೇಳಿ ಬಂದಿದೆ. ಇದೀಗ ಬೆಂಗಳೂರಿನ ಘಟನೆಯಿಂದ ಅಗ್ನಿಶಾಮಕ ಇಲಾಖೆ, ಸ್ಥಳೀಯಾಡಳಿತ ಕಟ್ಟಡಗಳ ಕಡೆ ಗಮನ ಹರಿಸಲು ಮುಂದಾಗಿದೆ.

ಹೈಕೋರ್ಟ್‌ ಸೂಚನೆ ನೀಡಿತ್ತು:

ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿಸುರಕ್ಷತೆ ನಿಯಮಗಳನ್ನು ಅನುಷ್ಠಾನಗೊಳಿಸಿರುವ ಬಗ್ಗೆ ವಿವರವಾದ ಮಾಹಿತಿ ನೀಡುವಂತೆ 2015 ರಲ್ಲಿ ಹೈಕೋರ್ಟ್‌ ಸೂಚನೆ ನೀಡಿತ್ತು. ಜೂನ್‌ 30ರೊಳಗೆ ಈ ಸಂಬಂಧ ಮಾಹಿತಿ ನೀಡಲು ಗಡುವು ನೀಡಿದ ಕಾರಣ ಅಂದು ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿಗಳು ಪುತ್ತೂರಿನಲ್ಲಿ ಕಟ್ಟಡಗಳ ಸಮೀಕ್ಷೆ ನಡೆಸಿದ್ದರು. ಅದಾದ ಬಳಿಕದ ಐದು ವರ್ಷಗಳಲ್ಲಿ ಕಟ್ಟಡಗಳ ಸಂಖ್ಯೆ ದುಪ್ಪಟ್ಟಾಗಿದ್ದು ಸುರಕ್ಷತೆ ಕ್ರಮ ಎಷ್ಟರ ಮಟ್ಟಿಗೆ ಪಾಲನೆ ಆಗಿದೆ ಎನ್ನುವ ಬಗ್ಗೆ ಪರಿಶೀಲಿಸಲು ಆಗ್ರಹ ಕೇಳಿ ಬಂದಿದೆ.

ಬೆಂಗಳೂರಿನ ಅಪಾರ್ಟ್‌ ಮೆಂಟ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ ಬಳಿಕ ಜಿಲ್ಲೆಯಲ್ಲಿನ ಕಟ್ಟಡಗಳ ಸುರಕ್ಷತೆಯ ಬಗ್ಗೆಯು ಪರಿಶೀಲನೆಗೆ ಸರಕಾರದಿಂದ ಸೂಚನೆ ಬರುವ ಸಾಧ್ಯತೆ ಇದೆ. ನಿಯಮ ಉಲ್ಲಂಘಿಸಿದರೆ ಅದರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಇದೆ. ಭರತ್‌ ಕುಮಾರ್‌, ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಮಂಗಳೂರು

Advertisement

ನಗರದ ಬಹುಮಹಡಿ ಕಟ್ಟಡಗಳಲ್ಲಿ ಸುರಕ್ಷತೆ ಕ್ರಮಗಳ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು. ಅಗತ್ಯ ಸಂದರ್ಭ ಪರಿಶೀಲನೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮಧು ಎಸ್‌. ಮನೋಹರ್‌, ಪೌರಾಯುಕ್ತ, ನಗರಸಭೆ ಪುತ್ತೂರು

 

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next