ಬೆಂಗಳೂರು: ಕೋವಿಡ್-19 ಸೋಂಕಿತರ ಮನೆಗಳ ಎದುರು ಸ್ಥಳೀಯ ಆಡಳಿತ ಹಾಕುತ್ತಿರುವ ಎಚ್ಚರಿಕೆ ಫಲಕ ನವಯುಗದ ಸಾಮಾಜಿಕ ತಾರಮ್ಯ, ಅಸ್ಪೃಶ್ಯತೆಗೆ ಕಾರಣವಾಗುತ್ತಿದೆ. ಹೀಗಾಗಿ ಅವುಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಚ್ ಡಿಕೆ, ಈ ರೀತಿ ಫಲಕ ಹಾಕುವ ಕಾರಣ ಕುಟುಂಬಗಳನ್ನು ಸಮಾಜ ತಿರಸ್ಕಾರದಿಂದ ನೋಡುವಂತೆ ಮಾಡುತ್ತಿದೆ. ಸೋಂಕಿನ ನಂತರವೂ ವ್ಯಕ್ತಿ, ಕುಟುಂಬ ಗೌರವಯುತವಾಗಿ ಬದುಕಬೇಕು. ಹಾಗಾಗಿ ಫಲಕ ಹಾಕುವ ಪರಿಪಾಠವನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು ಎಂದಿದ್ದಾರೆ.
ಮನೆಗಳ ಎದುರು ಫಲಕ ಹಾಕಿ ಅಸ್ಪೃಶ್ಯತೆ ಸೃಷ್ಟಿಸುವ ಬದಲು ಆರೋಗ್ಯ ಕಾರ್ಯಕರ್ತರನ್ನು ಅವರ ಮನೆಗೆ ಕಳುಹಿಸಿ ಧೈರ್ಯ, ಜಾಗೃತಿ, ಅರಿವು ಮೂಡಿಸಬೇಕು. ಮನೆಯಿಂದ ಹೊರಬಾರದಂತೆ ಅವರ ಜವಾಬ್ದಾರಿ ತಿಳಿಸಿಕೊಡಬೇಕು. ಅದು ಬಿಟ್ಟು ಇಂಥ ಅಪಮಾನಿಸುವ ಪರಿಪಾಠ ಬೇಡ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಗಮನ ಹರಿಸಲಿ ಎಂದು ಆಗ್ರಹಿಸಿದರು.
ಲೈಸನ್ಸ್ ರದ್ದು ಬೆದರಿಕೆ ಸರಿಯಲ್ಲ
ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ಲೈಸನ್ಸ್ ರದ್ದು ಮಾಡುವ ಸರ್ಕಾರದ ನಿರ್ಧಾರವನ್ನು ಖಂಡಿಸಿದ ಎಚ್ ಡಿಕೆ, ಚಿಕಿತ್ಸೆ ನಿರಾಕರಿಸುವುದು ಯಾವುದೇ ಆಸ್ಪತ್ರೆಯ ತಪ್ಪು. ಆದರೆ ಅದೇ ಕಾರಣಕ್ಕೆ ಸರ್ಕಾರ ಮೆಡಿಕಲ್ ಕಾಲೇಜುಗಳ ಲೈಸನ್ಸ್ ರದ್ದು ಮಾಡುವ ಬೆದರಿಕೆ ಹಾಕುವುದು ಸರಿಯಲ್ಲ. ಆರೋಗ್ಯದ ಈ ತುರ್ತುಪರಿಸ್ಥಿತಿಯಲ್ಲಿ ಅದರಿಂದ ಲಾಭವೂ ಇಲ್ಲ. ಅಷ್ಟಕ್ಕೂ ಮೆಡಿಕಲ್ ಕಾಲೇಜುಗಳ ಲೈಸನ್ಸ್ ರದ್ದು ಮಾಡುವ ಅಧಿಕಾರ ಇರುವುದು ಎಂಸಿಐಗೆ. ಸರ್ಕಾರಕ್ಕೆ ಅಲ್ಲ ನೆನಪಿರಲಿ ಎಂದು ಎಚ್ಚರಿಸಿದ್ದಾರೆ.
ಇಂತಹ ಪರಿಸ್ಥಿಯಲ್ಲಿ ಮೆಡಿಕಲ್ ಕಾಲೇಜುಗಳ ಮೇಲೆ ರೋಷಾವೇಶ ತೋರುವುದನ್ನು ಬಿಟ್ಟು ಅವರನ್ನು ವಿಶ್ವಾಸಕ್ಕೆ ಪಡೆದುಕೊಂಡು ಅವರ ಸೇವೆ ಪಡೆಯುವತ್ತ ಸರ್ಕಾರ ಗಮನಹರಿಸಲಿ. ಅವರ ಅಗತ್ಯಗಳನ್ನು ಪೂರೈಸುವತ್ತ ಗಮನ ಹರಿಸಲಿ. ಈ ಮೂಲಕ ಕೋವಿಡ್ ವೈರಸ್ ವಿರುದ್ಧ ಸಾಂಘಿಕ ಹೋರಾಟ ನಡೆಸಲಿ ಎಂದು ಎಚ್ ಡಿಕೆ ಒತ್ತಾಯಿಸಿದರು.