Advertisement

Putthige ಪರ್ಯಾಯೋತ್ಸವ: ಯಕ್ಷಕಲಾವಿದನಿಂದ ಸಿದ್ಧಗೊಂಡ ಬಿರುದಾವಳಿ ಪರಿಕರ

09:44 AM Jan 06, 2024 | Team Udayavani |

ಉಡುಪಿ: ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ವಿವಿಧ ತಯಾರಿ ಸಂಭ್ರಮದಿಂದ ಸಾಗುತ್ತಿದ್ದು, ತುಳುನಾಡಿನ ಎಲ್ಲ ಉತ್ಸವದಲ್ಲಿ ಸಾಂಪ್ರದಾಯಿಕವಾಗಿ ಬಳಕೆಯಾಗುವ ಬಿರುದಾವಳಿ ಪರಿಕರ ತಯಾರಿ ಕಾರ್ಯ ಪೂರ್ಣಗೊಂಡಿದೆ.

Advertisement

ಯಕ್ಷಗಾನ ರಂಗದ ಜತೆಗೆ ಕರಕುಶಲಕಲೆ ಯಲ್ಲಿಯೂ ಗುರುತಿಸಿಕೊಂಡಿರುವ ಯಕ್ಷಗಾನ ಕಲಾವಿದ ಶಶಿಕಾಂತ್‌ ಶೆಟ್ಟಿ ಕಾರ್ಕಳ ಅವರು ಪುರಪ್ರವೇಶ ಮೆರವಣಿಗೆ, ಪರ್ಯಾಯ ಮೆರವಣಿಗೆಗೆ ಅಗತ್ಯವಿರುವ ಬಿರುದಾವಳಿಗಳನ್ನು ತಯಾರಿಸಿದ್ದಾರೆ. ಯಕ್ಷಗಾನ ವಿವಿಧ ಉಡುಪು ತಯಾರಿಕೆಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿರುವ ಇವರು ಮಠ, ದೇವಸ್ಥಾನಗಳಿಗೆ ಬಿರುದಾವಳಿಯನ್ನು ಮಾಡಿಕೊಡುತ್ತಾರೆ. ಉತ್ಸವ, ಜಾತ್ರೆಗಳಲ್ಲಿ ದೇವರ ಮೂರ್ತಿಯನ್ನು ಮೆರವಣಿಗೆಯಲ್ಲಿ ಕರೆತರುವಾಗ, ಮಠಾಧೀಶರಿಗೆ ಪಲ್ಲಕಿ ಉತ್ಸವದ ವೇಳೆ ಗೌರವ ಸೂಚಕ ಲಾಂಛನ ವಾಗಿ ಬಿರುದಾವಳಿಗಳನ್ನು ಬಳಸಲಾಗುತ್ತದೆ. ಈ ಬಿರುದಾವಳಿ ಮೆರವಣಿಗೆಯ ಮುಂಭಾಗದಲ್ಲಿದ್ದು, ಉತ್ಸವದ ಮೆರುಗನ್ನು ಹೆಚ್ಚಿಸುತ್ತದೆ.

ಶಶಿಕಾಂತ್‌ ಶೆಟ್ಟಿ ಅವರು ಒಂದು ತಿಂಗಳಿನಿಂದ ಬಿರುದಾವಳಿ ಕೆಲಸವನ್ನು ಆರಂಭಿಸಿ ಇದೀಗ ಪೂರ್ಣಗೊಳಿಸಿದ್ದಾರೆ. ಇದರಲ್ಲಿ ಮಕರ ತೋರಣ, ಪತಾಕೆ, ಸೂರ್ಯ ಕಿರಣ, ಚಂದ್ರ ಕಿರಣ, ಗೆಜ್ಜೆ ಕಲಶ, ಈಟಿ ಸಹಿತ ವಿವಿಧ ಪರಿಕರಗಳು ಇವೆ. ಅಶ್ವತ್ಥ ಎಲೆ ಆಕಾರದಲ್ಲಿರುವ ಸೂರ್ಯ ಕಿರಣ, ಚಂದ್ರ ಕಿರಣದಲ್ಲಿ ಶ್ರೀಮಠದ ಪಟ್ಟದ ದೇವರ ಹೆಸರು ಶ್ರೀ ವಿಟ್ಠಲ ಎಂದು ಬರೆಯಲಾಗಿದೆ.

ಸೀಮೆ ಕೋಲು, ಬೆತ್ತ ಬಳಕೆ

ಈ ಬಿರುದಾವಳಿ ಹತ್ತಿ ಬಟ್ಟೆಯ ಕೆಂಪು, ಶ್ವೇತ ವರ್ಣದಿಂದ ಮಾಡಲ್ಪಟ್ಟಿದ್ದು, ಸೀಮೆ ಕೋಲು, ಬೆತ್ತವನ್ನು ಬಳಕೆ ಮಾಡಲಾಗಿದೆ. 10 ಸೆಟ್‌ಗಳನ್ನು ಹೊಂದಿದ್ದು, ಇದರಲ್ಲಿ ಹಿತ್ತಾಳೆ ಗಗ್ಗರ ಗೆಜ್ಜೆ, ಹಿತ್ತಾಳೆ ಕಲಶ ಇರುತ್ತದೆ. ಈ ಬಿರುದಾವಳಿ ಪುರ ಪ್ರವೇಶ ಮೆರವಣಿಗೆಯಿಂದ ಆರಂಭಗೊಂಡು ಪರ್ಯಾಯ ಉತ್ಸವ ಅನಂತರ ಮಠದ ಎಲ್ಲ ಉತ್ಸವ, ರಥೋತ್ಸವದಲ್ಲಿ ಎರಡು ವರ್ಷ ನಿರಂತರ ಬಳಕೆ ಮಾಡಲಾಗುತ್ತದೆ.

Advertisement

ಮೂರನೆಯ ಪರ್ಯಾಯ

ಬಿರುದಾವಳಿಗಳನ್ನು ಸ್ಥಳೀಯ ಕರಕುಶಲ ಕಲಾವಿದರ ಕೈನಲ್ಲಿಯೇ ಮಾಡಿಸಬೇಕು ಎಂಬ ಆಶಯ ಹೊಂದಿದ್ದ ಅದಮಾರು ಶ್ರೀಪಾದರ ಆಶಯದಂತೆ ಅದಮಾರು ಶ್ರಿಪಾದರ ಪರ್ಯಾಯಕ್ಕೆ ಮೊದಲು ಬಿರುದಾವಳಿಯನ್ನು ರೂಪಿಸಿದೆ. ಅನಂತರ ಕೃಷ್ಣಾಪುರ ಪರ್ಯಾಯಕ್ಕೂ ಬಿರುದಾವಳಿ ತಯಾರಿಸಲಾಗಿತ್ತು. ಇದೀಗ ಪುತ್ತಿಗೆ ಶ್ರೀಪಾದರ ಪರ್ಯಾಯಕ್ಕೂ ಬಿರುದಾವಳಿಯನ್ನು ತಯಾರಿಸಲಾಗಿದೆ ಎಂದು ಕಲಾವಿದ ಶಶಿಕಾಂತ್‌ ಶೆಟ್ಟಿ ತಿಳಿಸಿದ್ದಾರೆ.

ಅಗತ್ಯ ಮೂಲಸೌಕರ್ಯ: ಡಿಸಿ ಸೂಚನೆ

ಉಡುಪಿ: ಶ್ರೀ ಕೃಷ್ಣ ಮಠದ ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ಜ. 8ರಿಂದ 18ರವರೆಗೆ ವಿವಿಧ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು, ಭಕ್ತರು ಹೆಚ್ಚು ಬರುವ ನಿರೀಕ್ಷೆಯಿದೆ. ವಾಹನಗಳ ಸುಗಮ ಸಂಚಾರಕ್ಕೆ ಯೋಜನೆ ರೂಪಿಸಿ, ಸಂಚಾರದಲ್ಲಿ ವ್ಯತ್ಯಯವಾಗದಂತೆ ಹಾಗೂ ಅಗತ್ಯ ಮೂಲ ಸೌಲಭ್ಯ ಒದಗಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಸ್ತೆ ಸೇರಿದಂತೆ ಮತ್ತಿತರ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಕುಡಿಯುವ ನೀರು, ಆರೋಗ್ಯ ಸೇವೆ ಸೌಲಭ್ಯ ಕಲ್ಪಿಸಬೇಕು ಎಂದರು.

ನೈರ್ಮಲ್ಯ ಘನ ತ್ಯಾಜ್ಯ ವಿಲೇವಾರಿ ಸೇರಿದಂತೆ ಶೌಚಾಲಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿ ಸ್ವತ್ಛತೆಗೆ ಆದ್ಯತೆ ನೀಡಬೇಕು. ಭಕ್ತರು, ಪ್ರವಾಸಿಗರಿಗೆ ಅನುಕೂಲವಾಗುವಂತೆ ದಾರಿ ದೀಪಗಳನ್ನು ಸುಸಜ್ಜಿತವಾಗಿರುವಂತೆ ಹಾಗೂ ತಾತ್ಕಾಲಿಕ ಶೌಚಾಲಯಗಳನ್ನು ಸೃಜಿಸಬೇಕು ಎಂದರು.

ಮಠದ ಪಾರ್ಕಿಂಗ್‌ ಆವರಣದ ಕೌಂಟರ್‌ನಲ್ಲಿ ಪ್ರವಾಸಿ ತಾಣಗಳ ಮಾಹಿತಿ ಒಳಗೊಂಡ ಬ್ರೌಷರ್‌ ಲಭ್ಯವಿರಬೇಕು. ಸಹಾಯವಾಣಿಗಳನ್ನೂ ತೆರೆಯಬೇಕು. ಚಿತ್ರಗಳನ್ನು ಎಲ್‌ಇಡಿ ಪರದೆಯಲ್ಲಿ ಪ್ರದರ್ಶಿಸುವ ಜತೆಗೆ ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಪ್ಯಾಕೇಜ್‌ ಸರ್ವಿಸ್‌ ವಿಶೇಷ ಬಸ್‌ ಗಳ ವ್ಯವಸ್ಥೆ ಮಾಡಬೇಕು ಎಂದು ಪ್ರವಾಸೋದ್ಯಮ, ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ನಿರ್ದೇಶಿಸಿದರು. ವಾಹನಗಳ ಪಾರ್ಕಿಂಗ್‌ ವ್ಯವಸ್ಥೆಯನ್ನು ಬೋರ್ಡ್‌ ಹೈಸ್ಕೂಲ್‌, ಚರ್ಚ್‌ ಶಾಲೆ, ಎಂಜಿಎಂ ಕ್ರೀಡಾಂಗಣ, ಬೀಡಿನಗುಡ್ಡೆ ಮೈದಾನ, ಅಮ್ಮಣಿ ಶೆಟ್ಟಿ ಮೈದಾನ, ಪುರಭವನ ಮತ್ತು ಲಭ್ಯವಿರುವ ಇತರೆ ಸೂಕ್ತ ಸ್ಥಳಗಳಲ್ಲಿ ವ್ಯವಸ್ಥೆ ಮಾಡಬೇಕು ಎಂದರು.

ಎಡಿಸಿ ಮಮತಾದೇವಿ ಜಿ.ಎಸ್‌., ಎಸ್‌ಪಿ ಡಾ| ಅರುಣ್‌ ಕೆ., ಎಎಸ್ಪಿ ಸಿದ್ಧಲಿಂಗಪ್ಪ, ಮಾಹೆ ಸಹ ಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌, ಲೆ| ಜ| ಡಾ| ಎಂ.ಡಿ.ವೆಂಕಟೇಶ್‌ ಮಾಜಿ ಶಾಸಕ ರಘುಪತಿ ಭಟ್‌, ಪೌರಾಯುಕ್ತ ರಾಯಪ್ಪ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್‌, ಪುತ್ತಿಗೆ ಮಠದ ದಿವಾನರಾದ ನಾಗರಾಜ್‌ ಆಚಾರ್ಯ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next