ಮಾಸ್ಕೋ:ಜಗತ್ತಿನಾದ್ಯಂತ ಕೋವಿಡ್ 19 ಸೋಂಕು ಹರಡುತ್ತಿದ್ದು, ಇದಕ್ಕಾಗಿ ಹಲವಾರು ದೇಶಗಳು ಲಸಿಕೆ ಕಂಡುಹಿಡಿಯುವ ಪ್ರಯತ್ನದಲ್ಲಿವೆ. ಏತನ್ಮಧ್ಯೆ ರಷ್ಯಾ ಕೋವಿಡ್ 19 ಸೋಂಕಿಗೆ ಲಸಿಕೆ ಕಂಡುಹಿಡಿದಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಂಗಳವಾರ (ಆಗಸ್ಟ್ 11ಮ 2020) ಘೋಷಿಸಿದ್ದಾರೆ. ಇದರೊಂದಿಗೆ ಜಗತ್ತಿನ ಮೊದಲ ಕೋವಿಡ್ 19 ಲಸಿಕೆ ಬಿಡುಗಡೆಗೆ ರಷ್ಯಾ ಸಿದ್ಧವಾದಂತಾಗಿದೆ.
ಮಾಸ್ಕೋದ ಗಮೆಲಿಯಾ ಸಂಶೋಧನಾ ಸಂಸ್ಥೆ ಮತ್ತು ರಷ್ಯಾದ ರಕ್ಷಣಾ ಸಚಿವಾಲಯ ಜಂಟಿಯಾಗಿ ಈ ಲಸಿಕೆಯನ್ನು ಅಭಿವೃದ್ದಿಪಡಿಸಿದೆ. ಅಷ್ಟೇ ಅಲ್ಲ ಸ್ವತಃ ರಷ್ಯಾ ಅಧ್ಯಕ್ಷ ಪುಟಿನ್ ಅವರ ಮಗಳ ಮೇಲೆಯೇ ಈ ಲಸಿಕೆಯ ಪ್ರಯೋಗ ನಡೆಸಲಾಗಿದೆ ಎಂದು ದ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಈ ಕೋವಿಡ್ 19 ಸೋಂಕಿನ ಲಸಿಕೆಯ ಪ್ರಯೋಗ ಜೂನ್ 18ರಿಂದ ಆರಂಭಗೊಂಡಿತ್ತು. ಪರೀಕ್ಷೆಯಲ್ಲಿ ಎಲ್ಲಾ 38 ಮಂದಿಯ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದು ಕಂಡು ಬಂದಿದೆ ಎಂದು ಸ್ಪುಟ್ನಿಕ್ ನ್ಯೂಸ್ ವರದಿ ತಿಳಿಸಿದೆ.
ಲಸಿಕೆಯ ಪ್ರಗತಿ ಬಗ್ಗೆ ಮಾಹಿತಿ ನೀಡುವಂತೆ ಅಧ್ಯಕ್ಷ ಪುಟಿನ್ ಅವರು ಆರೋಗ್ಯ ಸಚಿವ ಮಿಖಾಯಿಲ್ ಮುರಾಶ್ಕೊಗೆ ತಿಳಿಸಿದ್ದರು. ಅಲ್ಲದೇ ಈ ಲಸಿಕೆ ಸಾಕಷ್ಟು ಪರಿಣಾಮಕಾರಿಯಾಗಿದ್ದು, ರೋಗ ನಿರೋಧ ಶಕ್ತಿಯು ಸ್ಥಿರವಾಗಿರುವಂತೆ ಮಾಡುತ್ತದೆ ಎಂದು ವಿವರಿಸಿದ್ದಾರೆ.ಈಗಾಗಲೇ ರಷ್ಯಾ ಲಸಿಕೆ ಉತ್ಪಾದನೆಯಲ್ಲಿ ತೊಡಗಿದ್ದು, ದೊಡ್ಡ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆ ನಮ್ಮ ಗುರಿಯಾಗಿದೆ ಎಂದು ಅಧ್ಯಕ್ಷ ಪುಟಿನ್ ತಿಳಿಸಿದ್ದಾರೆ.
ಪ್ರತಿಕಾಯಗಳನ್ನು ಆಧರಿಸಿ ಈ ಲಸಿಕೆಯನ್ನು ರಷ್ಯಾ ಅಭಿವೃದ್ಧಿಪಡಿಸಿತ್ತು. ಅಲ್ಲದೇ ಎರಡು ಹಂತಗಳಲ್ಲಿ ಮನುಷ್ಯನ ಮೇಲೆ ಪ್ರಯೋಗ ನಡೆಸಿತ್ತು. ಪ್ರಥಮ ಬಾರಿಯ ಕ್ಲಿನಿಕಲ್ ಟ್ರಾಯಲ್ (ಮನುಷ್ಯನ ಮೇಲಿನ ಪ್ರಯೋಗ) ಜೂನ್ 18ರಂದು ಕೊನೆಯಾಗಿತ್ತು ಎಂದು ರಷ್ಯಾ ಈಗಾಗಲೇ ವಿವರಿಸಿತ್ತು.
ಲಸಿಕೆಯನ್ನು ಮೊದಲ ಬಾರಿಗೆ ವೈದ್ಯರು ಮತ್ತು ಶಿಕ್ಷರಿಗೆ ನೀಡಲಾಗುವುದು ಎಂದು ಲೈವ್ ಮಿಂಟ್ ವರದಿ ಮಾಡಿದೆ. ಸೆಪ್ಟೆಂಬರ್ ನಲ್ಲಿ ಲಸಿಕೆ ತಯಾರಿಕೆ ಆರಂಭವಾಗಲಿದ್ದು, ಅಕ್ಟೋಬರ್ ನಲ್ಲಿ ಲಸಿಕೆಯನ್ನು ನಾವು ರೋಗಿಗಳಿಗೆ ನೀಡಲು ಅನುಕೂಲವಾಗುವಂತೆ ಬಿಡುಗಡೆ ಮಾಡಲಿದ್ದೇವೆ ಎಂದು ರಷ್ಯಾ ರಕ್ಷಣಾ ಸಚಿವ ತಿಳಿಸಿದ್ದಾರೆ. ಈ ಲಸಿಕೆ ರಷ್ಯಾ ಪ್ರಜೆಗಳಿಗೆ ಉಚಿತವಾಗಿ ನೀಡಲಿದ್ದು, ಇದರ ಹೊರೆಯನ್ನು ಬಜೆಟ್ ನಲ್ಲಿ ಭರಿಸಲಾಗುವುದು ಎಂದು ತಿಳಿಸಿದ್ದಾರೆ.