ನಾನು ಪ್ರಥಮ ಪಿಯುಸಿಯಲ್ಲಿದ್ದಾಗ ನಡೆದ ಘಟನೆ. ವಾರ್ಷಿಕ ಪರೀಕ್ಷೆಯ ಸಮಯದಲ್ಲಿ ಒಂದು ದಿನ ಬಸ್ ತಡವಾದ್ದರಿಂದ ಪರೀಕ್ಷಾ ಕೇಂದ್ರಕ್ಕೆ ನಾನು ಮತ್ತು ಸ್ನೇಹಿತರು ಅರ್ಧ ಗಂಟೆ ತಡವಾಗಿ ಹೊರಡಬೇಕಾಯಿತು. ಕಾಲೇಜಿನ ಕಾರಿಡಾರ್ ಸಮೀಪಿಸುತ್ತಲೇ ಸ್ನೇಹಿತನೊಬ್ಬ ಹೋ… ಎಂದು ಕಿರುಚಿ ನಮ್ಮ ಹವಾ ತೋರಿಸೋಣವೆಂದ. ಅದಕ್ಕೆ ನಾವು ಸಮ್ಮತಿಸಿ ಕಿರುಚಿದೆವು. ಕ್ಲಾಸ್‌ನಿಂದ ಹೊರಬಂದ ಹಿಸ್ಟರಿ ಲೆಕ್ಚರರ್, ಕಿರುಚಿದ್ದು ಯಾರೆಂದು ಕೇಳಿದರು. ಆಗ ನಾವು ಒಬ್ಬರ ಮುಖ ಒಬ್ಬರು ನೋಡಿಕೊಂಡು ಏನೂ ಮಾತಾಡದೆ ಸುಮ್ಮನೆ ನಿಂತು ಬಿಟ್ಟೆವು.
ಆದರೆ ನಮ್ಮ ಲೆಕ್ಚರರ್ ಪರೀಕ್ಷೆ ಬರೆಯಲು ಬಿಡದೆ ಹೊರಗೆ ನಿಲ್ಲಿಸಿದರು. ಇಷ್ಟೆಲ್ಲಾ ಆದರೂ ನಮ್ಮ ಒಗ್ಗಟ್ಟು ಮುರಿಯಲಿಲ್ಲ. ಕಡೆಗೆ ನಮ್ಮ ರಿಜಿಸ್ಟರ್ ನಂಬರ್ ಬರೆದುಕೊಂಡು ಪರೀಕ್ಷೆ ಬರೆಯಲು ಅನುಮತಿ ನೀಡಿದ ಅದೇ ಉಪನ್ಯಾಸಕರು- “ಅದ್ಹೇಗೆ ನೀವು ಪಾಸಾಗುತ್ತೀರೋ ನಾನೂ ನೋಡ್ತೀನಿ. ಈ ಸಾರಿ ಕಾಲೇಜಿನಲ್ಲಿ ನೀವಿರಬೇಕು, ಇಲ್ಲಾ ನಾ ಇರಬೇಕು.’ ಎಂದು ರೇಗಿದರು.
ಆಗ ನಮ್ಮ ಓದು ಕೂಡಾ ಅಷ್ಟಕ್ಕಷ್ಟೆ ಇದ್ದಿದ್ದರಿಂದ ನಮಗೆ ಫೇಲಾಗುತ್ತೇವೆಂದು ಭಯವಾಯಿತು. ಹಾಗೂ ಹೀಗೂ ಪರೀಕ್ಷೆ ಮುಗಿಯಿತು. ಫಲಿತಾಂಶದ ದಿನವೂ ಬಂತು. ಆದರೆ ಭಯದಿಂದ ಎರಡೂ¾ರು ದಿನಗಳವರೆಗೆ ನಾನು ಫಲಿತಾಂಶವನ್ನೇ ನೋಡಿರಲಿಲ್ಲ. ಕಡೆಗೆ ನನ್ನ ಸ್ನೇಹಿತನೊಬ್ಬ ಬಂದು “ನೀನು ಪಾಸ್ ಆಗಿದೀಯಾ ಕಣೋ!’ ಎಂದಾಗ ನನಗೆ ಮಾತುಗಳೇ ಹೊರಡಲಿಲ್ಲ.
ಕೆಲವು ದಿನಗಳ ನಂತರ ಕಾಲೇಜು ಶುರುವಾದಾಗ ಹಿಸ್ಟರಿ ಲೆಕ್ಚರರ್ ಬಗ್ಗೆ ಭಯವಿದ್ದೇ ಇತ್ತು. ನಂತರ ನಮಗೆ ತಿಳಿದು ಬಂದಿದ್ದೇನೆಂದರೆ ಅವರು ಕೆಲಸ ಬಿಟ್ಟಿದ್ದರು! ನಮಗೆ ಖುಷಿಯ ಜೊತೆ ಒಳ್ಳೆಯ ಲೆಕ್ಚರರನ್ನು ಕಳೆದುಕೊಂಡೆವಲ್ಲ ಎಂದು ದುಃಖವೂ ಆಯಿತು! ಅವರು ಯಾವ ಕಾರಣಕ್ಕೆ ಕಾಲೇಜು ಬಿಟ್ಟರೋ ಗೊತ್ತಿಲ್ಲ. ನಮ್ಮ ಸ್ನೇಹಿತರೆಲ್ಲರೂ, ಕೊನೆಗೂ ಮೇಷ್ಟ್ರು, ಹೇಳಿದಂತೆಯೇ ನಡೆದುಕೊಂಡರಲ್ಲ ಎಂದು ಆಶ್ಚರ್ಯಪಟ್ಟರು.
– ನಾಗರಾಜ ಚಿಂಚರಿಕಿ, ರಾಯಚೂರು