Advertisement

ವಲಸಿಗರ ಸಂಪೂರ್ಣ ಮಾಹಿತಿ ಕಲೆ ಹಾಕಿ

02:31 PM May 04, 2019 | Suhan S |

ರಾಮನಗರ: ವಸತಿ ಮತ್ತು ಜನವಿರುವ ಪ್ರದೇಶಗಳು ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ವಲಸೆ ಬರುವವರ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಬೇಕು. ಇದಕ್ಕೆ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಮಾಗಡಿ ಶಾಸಕ ಎ.ಮಂಜುನಾಥ್‌ ಹೇಳಿದರು.

Advertisement

ಬಿಡದಿ ಪೊಲೀಸ್‌ ಠಾಣೆ ವತಿಯಿಂದ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶ್ರೀಲಂಕಾ ಬಾಂಬ್‌ ನ್ಪೋಟದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿ, ಬೆಂಗಳೂರು ಮಹಾನಗರ ಹಾಗೂ ಬೆಂಗಳೂರಿಗೆ ಸಮೀಪದಲ್ಲಿರುವ ಬಿಡದಿ ಪಟ್ಟಣ ಮತ್ತು ಕೈಗಾರಿಕಾ ಪ್ರದೇಶಗಳು ಎಷ್ಟು ಸುರಕ್ಷಿತವಾಗಿವೆ ಎನ್ನುವ ಸಂಶಯ ಎದುರಾಗಿದೆ. ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹೊರಗಿನವರು ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಬಿಡದಿ ಪಟ್ಟಣ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಬಾಡಿಗೆಗೆ ಬಂದು ನೆಲೆಸಿದ್ದಾರೆ. ಈ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಹೊಸದಾಗಿ ನೆಲೆಸಿರುವ, ಬಾಡಿಗೆ ಮನೆಗಳಿಗೆ ಬರುವ ವಲಸಿಗರ ಮಾಹಿತಿ ಕಲೆ ಹಾಕುವ ಮೂಲಕ ಹೆಚ್ಚು ಸುರಕ್ಷತೆಗೆ ಗಮನ ನೀಡಬೇಕು ಎಂದು ಹೇಳಿದರು.

ಮನೆ ನೀಡುವಾಗ ಪರಿಶೀಲಿಸಿ: ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿನ ಬಾಡಿಗೆ ಮನೆಗೆ ಬರುವ ವಲಸಿಗರ ಬಗ್ಗೆ ಹೆಚ್ಚು ನಿಗಾ ಇಡಬೇಕು. ಜೊತೆಗೆ ಆವರ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರ ಆಧಾರ್‌ರ್ ಕಾರ್ಡ್‌, ಪರಿತರ ಚೀಟಿ ನಕಲಿ ಗುರುತಿನ ಚೀಟಿಗಳನ್ನು ಪಡೆದು, ಅವು ಅವರಿಗೆ ಸೇರಿದವೆ ಎಂದು ಸೂಕ್ಷ್ಮವಾಗಿ ಪರಿಶೀಲನೆ ಮಾಡಿ, ಬಳಿಕ ಬಾಡಿಗೆಗೆ ಮನೆ ನೀಡಬೇಕಿರುವುದು ಮನೆ ಮಾಲೀಕರ ಜವಾಬ್ದಾರಿಯಾಗಿದೆ. ಇಲ್ಲವಾದಲ್ಲಿ ಆಕಸ್ಮಿಕವಾಗಿ ಆಪರಾಧ ಪ್ರಕರಣ ನಡೆದರೆ ಮನೆ ಮಾಲೀಕರು ತಪ್ಪಿತಸ್ಥರಾಗಬೇಕಾದ ಆನಿವಾರ್ಯತೆ ಎದುರಾಗಿದೆ ಎಂದು ಎಚ್ಚರಿಕೆಯ ಸಂದೇಶ ನೀಡಿದರು .

ಭಯೋತ್ಪಾದನೆ ಸಣ್ಣ ಪಟ್ಟಣಕ್ಕೂ ವ್ಯಾಪಿಸಿದೆ: ವೃತ್ತ ಆರಕ್ಷಕ ನಿರೀಕ್ಷಕ ಜೀವನ್‌ ಮಾತನಾಡಿ, ಪ್ರಸಕ್ತ ಸನ್ನಿವೇಶದಲ್ಲಿ ಭಯೋತ್ಪಾದನೆ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಣ್ಣ ಪಟ್ಟಣಗಳೂ ವ್ಯಾಪಿಸಿದೆ. ವಲಸೆ ಬಂದು ವರ್ಷಾನುಗಟ್ಟಲೆ ಸ್ಥಳೀಯವಾಗಿದ್ದುಕೊಂಡು ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಾರೆ. ಹೀಗಾಗಿ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಸುಳಿವು ನೀಡಿದರೆ ಮಾತ್ರ ನಾವು ಪರಿಶೀಲನಾ ಕ್ರಮಗಳನ್ನು ಮಾಡಲು ಸಾಧ್ಯ ಎಂದರು.

ಸೂಕ್ತ ಭದ್ರತೆಗಾಗಿ ಸೌಲಭ್ಯ ಕಲ್ಪಿಸಿ: ಶೀಘ್ರವೇ ಬಿಡದಿ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಹಾಗೂ ವಲಸೆ ಬಂದಿರುವ ಉದ್ಯೋಗಿಗಳ ಸಂಪೂರ್ಣ ವಿವರ ಸಂಗ್ರಹಣೆ ಮಾಡಲಾಗುವುದು. ಗೃಹ ಇಲಾಖೆ ಹೊರ ತಂದಿರುವ ಕರ್ನಾಟಕ ಸಾರ್ವಜನಿಕ ಸುರಕ್ಷಾ ಕಾಯ್ದೆ-2018 ನಿಯಮಗಳ ಬಗ್ಗೆ ಕಾರ್ಖಾನೆ ಆಡಳಿತ ಮಂಡಳಿಯವರು ತಿಳಿದುಕೊಳ್ಳಬೇಕು. ಸೂಕ್ತ ಭದ್ರತೆಗಾಗಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ರಕ್ಷಣೆಗೆ ಬೇಕಾದ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ನೀಡಬೇಕು. ಕನಿಷ್ಠ 30 ದಿನ ಬ್ಯಾಕಪ್‌ ಇರುವಂತಹ ಸಿಸಿ ಟಿವಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

Advertisement

ಪ್ರತಿನಿಧಿಗಳಿಂದ ಮಾಹಿತಿ ವಿನಿಯಮ: ಈ ಸಂದರ್ಭದಲ್ಲಿ ವಿವಿಧ ಕಂಪೆನಿಗಳಿಂದ ಆಗಮಿಸಿದ್ದ ಪ್ರತಿನಿಧಿಗಳು ತಮ್ಮ ಕಾರ್ಖಾನೆಗಳಲ್ಲಿ ಸದ್ಯ ಚಾಲ್ತಿಯಲ್ಲಿರುವ ಭದ್ರತಾ ವ್ಯವಸ್ಥೆ ಹಾಗೂ ಸುಧಾರಿತ ಕ್ರಮಗಳ ಬಗ್ಗೆ ಮಾಹಿತಿ ವಿನಿಯಮ ಮಾಡಿಕೊಂಡರು. ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ಹೊರ ಠಾಣೆ ಸ್ಥಾಪನೆ, ಕಾರ್ಖಾನೆಗಳಲ್ಲಿನ ರಕ್ಷಣಾ ಸಿಬ್ಬಂದಿಗಳ ಜೊತೆಗೆ ನಿಕಟ ಸಂಪರ್ಕವನ್ನಿಟ್ಟುಕೊಂಡು ಅನುಮಾನಾಸ್ಪದ ವ್ಯಕ್ತಿಗಳ ಮಾಹಿತಿ ಸಂಗ್ರಹಿಸುವಂತೆ, ಜಾಗೃತಿ ಸಭೆಗಳಿಂದ ಸಮನ್ವಯ ಸಾಧಿಸುವ ಜತೆಗೆ ಒಗ್ಗಟ್ಟು ವೃದ್ಧಿಯಾಗುವ ಬಗ್ಗೆ ಸಲಹೆ ಅಭಿಪ್ರಾಯಗಳು ವ್ಯಕ್ತವಾದವು.

ಸಭೆಯಲ್ಲಿ ಬಿಡದಿ ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ವಿವೇಕ್‌, ಜಿಪಂ ಮಾಜಿ ಸದಸ್ಯ ಇಟ್ಟಮಡು ರಾಮಚಂದ್ರಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ವಿಷಕಂಠಯ್ಯ, ಪುರಸಭೆ ಸದಸ್ಯ ಬಿ.ಎಂ.ರಮೇಶ್‌ ಕುಮಾರ್‌ ಸೇರಿದಂತೆ ಪುರಸಭೆ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಆಟೋ ಚಾಲಕರು ಹಾಗೂ ಪೊಲೀಸ್‌ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next