ಹಾಸನ: ಆರೋಗ್ಯಕರ ಭಾರತ ನಿರ್ಮಾಣದ ನಿಟ್ಟಿನಲ್ಲಿ ಪ್ರತಿ ಮಗುವಿಗೂ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ ಅಂಗವಿಕಲತೆಯನ್ನು ಹೋಗಲಾಡಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು. ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ(ಹಿಮ್ಸ್)ಯಲ್ಲಿ ಭಾನುವಾರ ನಡೆದ 2020ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನೆಗೆ ಭೇಟಿ ನೀಡಿ ಲಸಿಕೆ: ರೋಗ ನಿರೋಧಕ ಶಕ್ತಿ ಕುಂಠಿತವಾಗಿರುವಂತಹ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಮಕ್ಕಳು ಈ ಅಭಿಯಾನದಿಂದ ಹೊರಗುಳಿಯುವ ಸಂಭವವಿದೆ. ಹಾಗಾಗಿ ಅಭಿಯಾನದ ಮೊದಲನೇ ದಿನ ಬೂತ್ ಮಟ್ಟದಲ್ಲಿ ಅಂಗನವಾಡಿ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಉಳಿದ 2 ದಿನಗಳಲ್ಲಿ ಅಭಿಯಾನದಿಂದ ಹೊರಗುಳಿದ ಮಕ್ಕಳಿಗೆ ಆರೋಗ್ಯ ಕಾರ್ಯಕರ್ತರು ಮನೆ-ಮನೆ ಭೇಟಿ ಮಾಡಿ ಪೋಲಿಯೋ ಲಸಿಕೆ ನೀಡುತ್ತಾರೆ. ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದಲ್ಲಿ ಪ್ರತಿಯೊಬ್ಬ ಮಕ್ಕಳಿಗೂ ಲಸಿಕೆಯನ್ನು ತಪ್ಪದೇ ಕೊಡುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಕಡ್ಡಾಯವಾಗಿ ಲಸಿಕೆ ಹಾಕಿಸಿ: ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಬಿ.ಎ.ಪರಮೇಶ್ ಮಾತನಾಡಿ, ಅಂಗವಿಕಲತೆ ಚಿಕ್ಕ ಮಕ್ಕಳಲ್ಲಿ ಕಂಡು ಬರುವ ರೋಗವಾಗಿದೆ. ದೈಹಿಕವಾಗಿ ಶಾಶ್ವತ ಅಂಗವೈಕಲ್ಯ ಉಂಟುಮಾಡುವ ಈ ಸಾಂಕ್ರಾಮಿಕ ರೋಗದ ತಡೆಗಾಗಿ ಪಲ್ಸ್ ಪೋಲಿಯೋ ಲಸಿಕೆಯನ್ನು ಪೋಷಕರು ತಪ್ಪದೇ ಹಾಕಿಸಬೇಕು ಎಂದರು. ಪ್ರತಿಯೊಂದು ಮಗುವಿಗೂ ಪೋಲಿಯೋ ಲಸಿಕೆ ಹಾಕಿದಾಗ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದರು.
ಆರೋಗ್ಯ ಇಲಾಖೆ ಪಲ್ಸ್ ಪೋಲಿಯೋದ ರಾಜ್ಯ ಮಟ್ಟದ ನೋಡಲ್ ಅಧಿಕಾರಿ ಡಾ.ಮಮತಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಕೃಷ್ಣಮೂರ್ತಿ, ಹಿಮ್ಸ್ ನಿರ್ದೇಶಕ ಡಾ. ರವಿಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಕಾಂತರಾಜು, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ರಾಜಗೋಪಾಲ್, ಹಿಮ್ಸ್‌ನ ಮಕ್ಕಳ ಭಾಗದ ಮುಖ್ಯಸ್ಥ ಡಾ.ಪ್ರಸನ್ನ ಕುಮಾರ್, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಯಕ ನಿರ್ದೇಶಕರಾದ ವಿನೋದ್ ಚಂದ್ರ, ತಾಲಕು ವೈದ್ಯಾಧಿಕಾರಿ ಡಾ.ವಿನಯ್, ಆಯುಷ್ ಅಧಿಕಾರಿ ವೀಣಾ, ಮತ್ತಿತರ ಅಧಿಕಾರಿಗಳು ಹಾಜರಿದ್ದರು.
ಹಾಸನ ಜಿಲ್ಲೆಯಲ್ಲಿ 5 ವರ್ಷಕ್ಕಿಂತ ಕಡಿಮೆಯಿರುವ ಮಕ್ಕಳ ಸಂಖ್ಯೆ 1.25 ಲಕ್ಷವಿದ್ದು, ಆ ಎಲ್ಲಾ ಮಕ್ಕಳಿಗಾಗಿ 872 ಪಲ್ಸ್ ಪೋಲಿಯೋ ಲಸಿಕಾ ಬೂತ್‌ಗಳನ್ನು ಜಿಲ್ಲಾದ್ಯಂತ ಸ್ಥಾಪನೆ ಮಾಡಲಾಗಿದೆ. ಈ ಸೌಲಭ್ಯ ಸದ್ಬಳಕೆಯಾಗಬೇಕು.
-ಆರ್.ಗಿರೀಶ್, ಹಾಸನ ಜಿಲ್ಲಾಧಿಕಾರಿ