ಬಂಗಾರಪೇಟೆ: ಮಳೆ ನೀರು ಸಂಗ್ರಹಿಸುವ ಸಲುವಾಗಿ ಸರ್ಕಾರವೇ ಕೃಷಿ ಹೊಂಡಗಳ ನಿರ್ಮಾಣಕ್ಕೆ ಸಹಾಯಧನ ನೀಡುತ್ತಿದೆ. ಇದು ರೈತರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲವೇ ಆದ್ರೂ ಮಹಿಳೆಯರು, ಮಕ್ಕಳು, ಪ್ರಾಣಿಗಳ ಜೀವನಕ್ಕೆ ಕಂಟಕವಾಗಿವೆ.
ತಾಲೂಕಿನ ಕಾರಮಂಗಲ-ಗುಟ್ಟಹಳ್ಳಿಯ ಮುಖ್ಯ ರಸ್ತೆಯ ಪಕ್ಕದಲ್ಲಿ ರೈತರೊಬ್ಬರು ತಮ್ಮ ಜಮೀನಿನಲ್ಲಿ ನಿರ್ಮಾಣ ಮಾಡಿರುವ ಕೃಷಿ ಹೊಂಡಕ್ಕೆ ಯಾವುದೇ ತಂತಿ ಬೇಲಿ ನಿರ್ಮಿಸಿಲ್ಲ. ಇದರಿಂದ ಅಮಾಯಕ ಜೀವಗಳು ಬಲಿಯಾಗುವ ಸಾಧ್ಯತೆ ಇದೆ. ಕೃಷಿ ಅಧಿಕಾರಿಗಳು ಬೇಲಿ ಹಾಕುವಂತೆ ಕಡ್ಡಾಯಗೊಳಿಸಿದ್ದರೂ ರೈತರು ಕ್ರಮಕೈಗೊಳ್ಳದೇ ನಿರ್ಲಕ್ಷ್ಯವಹಿಸಿದ್ದಾರೆ.
ಜಿಲ್ಲೆ ಸತತ ಬರಗಾಲದಿಂದ ತತ್ತರಿಸಿದ್ದು, ರೈತರು ಸಾಲ ಮಾಡಿ ಕಷ್ಟಪಟ್ಟು ವ್ಯವಸಾಯ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಬೀಳುವ ಅಲ್ಪ ಸ್ವಲ್ಪ ಮಳೆಯ ನೀರನ್ನು ಕೃಷಿ ಹೊಂಡದಲ್ಲಿ ಸಂಗ್ರಹಿಸಿ, ಬೇಸಾಯ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಕೃಷಿ ಇಲಾಖೆ ಮೂಲಕ ಹೊಂಡ ನಿರ್ಮಾಣ ಮಾಡಲು ಶೇ.50ರಷ್ಟು ಸಹಾಯಧನ, ಸರ್ಕಾರ ನೀಡುತ್ತಿದ್ದರೂ ರೈತರು ಬೇಲಿ ಹಾಕಿಕೊಳ್ಳಲು ಮುಂದೆ ಬರುತ್ತಿಲ್ಲ.
ಕೃಷಿ ಹೊಂಡದಲ್ಲಿ ಜಾರಿ ಬಿದ್ದು ಪ್ರಾಣ ಕಳೆದುಕೊಂಡಿರುವವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಿದೆ. ರಾಜ್ಯ ಸರ್ಕಾರವು ಕೃಷಿಹೊಂಡ ಸುತ್ತಲೂ ತಂತಿ ಬೇಲಿ ನಿರ್ಮಾಣ ಮಾಡಿ ಅಗತ್ಯ ಸುರಕ್ಷತೆ ಕ್ರಮ ತೆಗೆದುಕೊಳ್ಳುವಂತೆ ಹಾಗೂ ಕ್ರಮ ಕೈಗೊಳ್ಳದ ಕೃಷಿ ಹೊಂಡಕ್ಕೆ ಯಾವುದೇ ಸಹಾಯಧನ ನೀಡದಂತೆ ಆದೇಶ ಹೊರಡಿಸಿತು. ಆದರೆ, ಹಲವು ಗ್ರಾಮಗಳಲ್ಲಿ ರೈತರು ನಿರ್ಮಿಸಿಕೊಂಡಿರುವ ಕೃಷಿ ಹೊಂಡಕ್ಕೆ ತಂತಿ ಬೇಲಿ ಅಳವಡಿಸಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳು ಯಾಕೆ ಇಂತಹ ಕೃಷಿ ಹೊಂಡದ ಕಡೆ ಗಮನ ನೀಡಿಲ್ಲ ಎನ್ನುವುದಕ್ಕೆ ಕೃಷಿ ಅಧಿಕಾರಿಗಳೇ ಉತ್ತರ ನೀಡಬೇಕಾಗಿದೆ.
ನೀರು ಕುಡಿಯಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಈಗಾಗಲೇ ಮಹಿಳೆಯರು, ಮಕ್ಕಳು ಪ್ರಾಣಿಗಳು ಪ್ರಾಣ ಕಳೆದುಕೊಂಡಿವೆ. ಆದರೂ ರೈತರು ಹೊಂಡದ ಸುತ್ತ ಬೇಲಿ ಹಾಕಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳೂ ಮನವೊಲಿಸುವ ಕಾರ್ಯ ಮಾಡಿಲ್ಲ. ಅಮಾಯಕರ ಜೀವ ಬಲಿಯಾಗುವ ಮುನ್ನ ತಾಲೂಕಿನಲ್ಲಿರುವ ಕೃಷಿ ಹೊಂಡಕ್ಕೆ ಬೇಲಿ ನಿರ್ಮಿಸಲು ಇಲಾಖೆ ಕೂಡಲೇ ಕ್ರಮಕೈಗೊಳ್ಳಬೇಕು.
-ಎಂ.ಸಿ.ಮಂಜುನಾಥ್