Advertisement

ಎಂ.ಜಿ.ಎಂ. ಪುಸ್ತಕೋತ್ಸವ : ಓದಿನ ಅಭಿರುಚಿಯನ್ನು ಹೆಚ್ಚಿಸಲು ಹಲವು ಹೊಸ ಪ್ರಯೋಗ

01:02 PM Mar 06, 2021 | Team Udayavani |

ಉಡುಪಿ : ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ನಡೆಯುತ್ತಿರುವ ಎರಡು ದಿನದ ಪುಸ್ತಕೋತ್ಸವಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಎಂ.ಜಿ.ಎಂ. ಕಾಲೇಜು ವಿದ್ಯಾರ್ಥಿಗಳಲ್ಲಿ ಉತ್ಸಾಹವನ್ನು ಹೆಚ್ಚಿಸಲು ಹಮ್ಮಿಕೊಂಡಿರುವ ಪುಸ್ತಕೋತ್ಸವ  ನಿರೀಕ್ಷೆಗೂ ಮೀರಿ ಓದುಗರ ಮನತಟ್ಟಿದೆ. ನಿನ್ನೆ ಆರಂಭವಾದ ಪುಸ್ತಕೋತ್ಸವ ವಿದ್ಯಾರ್ಥಿಗಳಲ್ಲಿ ಹೊಸ ಬಗೆಯ ಓದಿನ ಅಭಿರುಚಿಯನ್ನು ಹಚ್ಚಿದೆ. ಪುಸ್ತಕೋತ್ಸವದ ಮೊದಲ ದಿನ ಹರಿದು ಬಂದ ಪ್ರತಿಕ್ರಿಯೆ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿ. ಮೊದಲ ದಿನ ಎಲ್ಲಾ ಪುಸ್ತಕ ಮಳಿಗೆ ಸೇರಿ ಒಟ್ಟು 1,42,000 ದಷ್ಟು ಮೊತ್ತದ ಪುಸ್ತಕಗಳು ಮಾರಾಟಗೊಂಡವು.

ಪುಸ್ತಕೋತ್ಸವದಲ್ಲಿ ಸುಮಾರು 15 ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳಿದ್ದವು. ಇದರಲ್ಲಿ ಕಥೆ,ಕಾದಂಬರಿ, ಸ್ಪರ್ಧಾತ್ಮಕ ಪರೀಕ್ಷಾ ಸಂಬಂಧಿತ ಪುಸ್ತಕಗಳು ಭರ್ಜರಿ ಮಾರಾಟವಾಗಿದೆ. ಕನ್ನಡ, ಇಂಗ್ಲೀಷ್, ತುಳು, ಕೊಂಕಣಿ ಭಾಷೆಯ ವೈವಿಧ್ಯಮಯ ಕೃತಿಗಳು ವಿದ್ಯಾರ್ಥಿಗಳ ಗಮನ ಸೆಳೆಯಿತು.

ತುಳು ಸಂಸ್ಕೃತಿ,ಸಂಪ್ರದಾಯಗಳನ್ನು ಸಾರುವ ಸಂಶೋಧನ ಆಧಾರಿತ ಕೃತಿಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡು ಓದುತ್ತಿರುವುದನ್ನು ನೋಡುವುದು ಖುಷಿ ತಂದಿದೆ. ತುಳು ನಿಘಂಟು, ‘ಅಣಿ ಅರದಲ ಸಿರಿ ಸಿಂಗಾರ’ ಇಂಥ ಕೃತಿಗಳನ್ನು ವಿದ್ಯಾರ್ಥಿಗಳು ಕೊಂಡು ಓದುವುದು ಸಂತಸದ ವಿಷಯ ಎನ್ನುತ್ತಾರೆ ಪುಸ್ತಕ ಮಳಿಗೆಯ ಮಾರಾಟಗಾರ ವೆಂಕಟೇಶ್.

Advertisement

ಪುಸ್ತಕೋತ್ಸವದಲ್ಲಿ ಪೂರ್ಣಚಂದ್ರ ತೇಜಸ್ವಿ, ಎಸ್.ಎಲ್ .ಭೈರಪ್ಪ,ಜೋಗಿ,ಎರ್,ಮಣಿಕಾಂತ್ ಅವರ ಕೃತಿಗಳಿಗೆ ಹೆಚ್ಚು ಬೇಡಿಕೆ ಬಂದಿದೆ ಎನ್ನುತ್ತಾರೆ ನವಕರ್ನಾಟಕ ಪುಸ್ತಕ ಮಳಿಗೆಯ ಸುರೇಶ್.

ಪುಸ್ತಕಮಳಿಗೆಯೊಟ್ಟಿಗೆ ಖಾದಿ ಬಟ್ಟೆ ಹಾಗೂ ಕೈಮಗ್ಗ ಸಾಮಾಗ್ರಿಗಳ ಮಾರಾಟ ಮಳಿಗೆ ವಿಶೇಷವಾಗಿ ಗಮನ ಸೆಳೆಯಿತು. ಪುಸ್ತಕೋತ್ಸವದಲ್ಲಿ ಜಿಲ್ಲೆಯ ವಿವಿಧ ಭಾಗದ ಪುಸ್ತಕಮಳಿಗೆಗಳು ಓದುಗರ ವಿಶಾಲ ಆಯ್ಕೆಗೆ ಆಹ್ವಾನ ನೀಡುತ್ತಿತ್ತು. ನವ ಕರ್ನಾಟಕ, ಸುರಭಿ ಬುಕ್ ಸೆಂಟರ್, ಭಾರತ್ ಬುಕ್ ಮಾರ್ಕ್ಸ್, ಸ್ಕೂಲ್ ಬುಕ್ ಕಂಪೆನಿ, ಬಿಬ್ಲಿಯೋಸ್ ಬುಕ್ ಸುರತ್ಕಲ್, ಜಿ,ವಿನ್ ಬುಕ್ ಮಾರ್ಕ್ಸ್ ಹೀಗೆ ವಿವಿಧ ಪುಸ್ತಕಮಳಿಗೆಗಳು ಇದ್ದವು.

ಪುಸ್ತಕದಾನವೆಂಬ ವಿನೂತನ ಪ್ರಯೋಗ : ಪುಸ್ತಕೋತ್ಸವದಲ್ಲಿ ಹಳೆಯ ಪುಸ್ತಕಗಳನ್ನು ದಾನವಾಗಿ ನೀಡುವ ವಿಶೇಷ ಕೌಂಟರ್ ಗಮನ ಸೆಳೆಯಿತು. ಇದರಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಹಿರಿಯ ಬರಹಗಾರರು ತಮ್ಮಲ್ಲಿದ್ದ ಹಳೆಯ ಪುಸ್ತಕ ಹಾಗೂ ಕೊಂಡು ತಂದ ಹೊಸ ಪುಸ್ತಕಗಳನ್ನು ದಾನವಾಗಿ ನೀಡಿದ್ದಾರೆ. ದಾನವಾಗಿ ಬಂದ ಪುಸ್ತಕಗಳನ್ನು ಸರ್ಕಾರಿ ಶಾಲೆಗೆ ನೀಡುವುದು ಈ ಯೋಜನೆಯ ಉದ್ದೇಶ.

ತರಗತಿಯಲ್ಲಿ ಕುಳಿತು ಪಾಠ ಕೇಳುವುದರ ಜೊತೆಗೆ ನಾವು ನಮ್ಮ ಕಾಲೇಜಿನ ಉಪನ್ಯಾಸಕರು ರಚಿಸಿದ ಪುಸ್ತಕ ಮಾರಾಟ ಮಾಡುವುದು ಒಂದು ಉತ್ತಮ ಅನುಭವ. ಇಲ್ಲಿ ಬಂದಿರುವ ಪುಸ್ತಕಗಳೆಲ್ಲವೊ ನಮಗೆ ಒಳ್ಳೆಯ ಜ್ಞಾನ ನೀಡುವಂಥದ್ದು. – ನವ್ಯಶ್ರೀ ಶೆಟ್ಟಿ, ವಿದ್ಯಾರ್ಥಿನಿ

 ಈಗಿನ ಮಕ್ಕಳಲ್ಲಿ ಓದುವ ಕೊರತೆ ಇದೆ. ನಮ್ಮ ವಿದ್ಯಾರ್ಥಿಗಳಲ್ಲಿ ಓದಿನ ಪರಿಚಯವಾಗಬೇಕು. ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿಯಲ್ಲಿ ಪುಸ್ತಕಗಳನ್ನು ಮಾರಾಟ ಮಾಡಬೇಕು ಎನ್ನುವ ಯೋಜನೆಯನ್ನು ಈ ಹಿಂದೆ ಸಹದ್ಯೊಗಿಗಳೊಂದಿಗೆ ಚರ್ಚಿಸಿದ್ದಿವಿ. ಅದರಂತೆ ಈ ಪುಸ್ತಕೋತ್ಸವದ ಕಾರ್ಯಕ್ರಮದ ಉದ್ದೇಶವನ್ನು, ಕಾರ್ಯಕ್ರಮದ ಮೊದಲೇ ಪ್ರತಿ ತರಗತಿಗೆ ಹೋಗಿ ಪುಸ್ತಕದ ಮಹತ್ವವನ್ನು ಸಾರಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪ್ರಚಾರ ಎಲ್ಲೆಡೆ ತಲುಪಿತ್ತು. ಆ ಕಾರಣವಾಗಿಯೇ ಇಂದಿನ ಈ ಪುಸ್ತಕೋತ್ಸವ ಕಾರ್ಯಕ್ರಮಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. –ಕಿಶೋರ್ ಚಂದನ್,  ಗ್ರಂಥಪಾಲಕ

 

Advertisement

Udayavani is now on Telegram. Click here to join our channel and stay updated with the latest news.

Next