ಹೈದರಾಬಾದ್: ಅಲ್ಲು ಅರ್ಜುನ್ ಅಭಿಮಾನಿಗಳು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅದರ ಜೊತೆಗೆ ಇಡೀ ಪ್ಯಾನ್ ಇಂಡಿಯಾವೇ ಬಹು ನಿರೀಕ್ಷಿತ ʼಪುಷ್ಪ-2ʼ ಸಿನಿಮಾದ ಟೀಸರ್ ಗಾಗಿ ಕಾದು ಕೂತಿದೆ.
ಟೀಸರ್ ರಿಲೀಸ್ ಅಪ್ಡೇಟ್ ಬಳಿಕ ʼಪುಷ್ಪ-2ʼ ತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿ ಟೀಸರ್ ಕುತೂಹಲಕ್ಕೆ ಮತ್ತಷ್ಟು ಹೈಪ್ ಹೆಚ್ಚಿಸಿದೆ. ಗೋಲ್ಡ್ ಚೈನ್ ಹಾಕಿಕೊಂಡು, ಕೈಯಲ್ಲೊಂದು ಮಚ್ಚು ಹಿಡಿದುಕೊಂಡು ಪಕ್ಕಾ ಲೋಕಲ್ ಡಾನ್ ನಂತೆಯೇ ʼಪುಷ್ಪʼ ಕಾಣಿಸಿಕೊಂಡಿರುವ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ಚಿತ್ರತಂಡ ಬಹು ನಿರೀಕ್ಷಿತ ಟೀಸರ್ ನ್ನು ರಿಲೀಸ್ ಮಾಡಿದೆ. ಆಭರಣ ತೊಟ್ಟು, ಜಾತ್ರೆಯಲ್ಲಿ ಕುಣಿಯುವ ದೇವಿಯಂತೆ ಮಾಸ್ ಆಗಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಜಬರ್ ದಸ್ತ್ ಫೈಟ್ ಸೀನ್ ವೊಂದನ್ನು ಟೀಸರ್ ಝಲಕ್ ನಲ್ಲಿ ತೋರಿಸಲಾಗಿದೆ. ಸನ್ನಿವೇಶಕ್ಕೆ ತಕ್ಕ ದೇವಿ ಶ್ರೀ ಪ್ರಸಾದ್ ಅವರ ಹಿನ್ನೆಲೆ ಸಂಗೀತ ಹೊಂದಿಕೆ ಆಗಿದೆ.
ಅಲ್ಲು ಅರ್ಜುನ್ ಸಿನಿಮಾದಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಟೀಸರ್ ನಲ್ಲಿ ನಿರ್ದೇಶಕರು ತೋರಿಸಿದ್ದಾರೆ.
ʼಪುಷ್ಪ: ದಿ ರೂಲ್ʼ ಚಿತ್ರದಲ್ಲಿ ಅಲ್ಲು ಅರ್ಜುನ್, ಫಾಹಾದ್ ಫಾಸಿಲ್, ರಶ್ಮಿಕಾ ಮಂದಣ್ಣ, ಸುನೀಲ್, ಅನಸೂಯಾ ಭಾರದ್ವಾಜ್, ಬ್ರಹ್ಮಾಜಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಚಿತ್ರವನ್ನು ಸುಕುಮಾರ್ ಬರೆದು ನಿರ್ದೇಶಿಸಿದ್ದಾರೆ ಮತ್ತು ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ರವಿ ವೈ ಶಂಕರ್ ನಿರ್ಮಿಸಿದ್ದಾರೆ.
2024 ರ ಆಗಸ್ಟ್ 15 ರಂದು ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಕನ್ನಡದಲ್ಲಿ ಸಿನಿಮಾ ತೆರೆಕಾಣಲಿದೆ.