ಹೈದರಾಬಾದ್: ಪುಷ್ಪ-2 ಚಿತ್ರದ ಭರ್ಜರಿ ಯಶಸ್ಸಿನಲ್ಲಿದ್ದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅವರು ಇದೀಗ ಜೈಲುಪಾಲಾಗಿದ್ದಾರೆ. ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಶುಕ್ರವಾರ (ಡಿ.13) ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ನಟ ಅಲ್ಲು ಅರ್ಜುನ್ ಅವರನ್ನು ಹೈಕೋರ್ಟ್ ಮುಂದೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಹಿಂದೆ, ಪುಷ್ಪ-2 ಚಿತ್ರದ ಬಿಡುಗಡೆಯ ಸಮಯದಲ್ಲಿ ಹೈದರಾಬಾದ್ ಥಿಯೇಟರ್‌ನಲ್ಲಿ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಬಗ್ಗೆ ತನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ನಟ ಅಲ್ಲು ಅರ್ಜುನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮತ್ತೊಂದೆಡೆ, ಮೃತ ಮಹಿಳೆಯ ಪತಿ ಬಂಧನದ ಬಗ್ಗೆ ತಿಳಿದಿಲ್ಲದ ಕಾರಣ ಪ್ರಕರಣವನ್ನು ಹಿಂಪಡೆಯಲು ಸಿದ್ಧ ಎಂದು ಹೇಳಿದರು. ನನ್ನ ಪತ್ನಿ ಸಾವನ್ನಪ್ಪಿದ ಕಾಲ್ತುಳಿತಕ್ಕೂ ಅಲ್ಲು ಅರ್ಜುನ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಮೃತ ರೇವತಿ ಪತಿ ಭಾಸ್ಕರ್ ಹೇಳಿದ್ದಾರೆ.
ಹೈದರಾಬಾದ್ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆತರಲಾಗಿತ್ತು.
ಅಲ್ಲು ಅರ್ಜುನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ, ಸುಕುಮಾರ್ ನಿರ್ದೇಶನದ ಪುಷ್ಪ-2 ಚಿತ್ರವು ಕಳೆದ ವಾರ ಬಿಡುಗಡೆಯಾಗಿತ್ತು. ಈ ಸಂದರ್ಭದಲ್ಲಿ ಅಲ್ಲು ಅರ್ಜುನ್ ಅವರು ಪೊಲೀಸರಿಗೆ ಮಾಹಿತಿ ನೀಡದೆ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ ಓರ್ವ ಮಹಿಳೆ ಸಾವನ್ನಪ್ಪಿದ್ದರು.