ಹೈದರಾಬಾದ್: ʼಪುಷ್ಪ-2ʼ ಸಿನಿಮಾದ ಪ್ರಿಮಿಯರ್ ಶೋ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಮೂವರನ್ನು ಹೈದರಬಾದ್ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ (Pushpa 2: The Rule) ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಕಂಡಿದೆ. ನಾಲ್ಕೇ ದಿನದಲ್ಲಿ 621 ಕೋಟಿ ರೂ. ಗಳಿಕೆ ಕಾಣುವ ಮೂಲಕ ದಾಖಲೆ ಬರೆದಿದೆ. ಸಿನಿಮಾಕ್ಕೆ ಪ್ರೇಕ್ಷಕರಿಂದ ಅಮೋಘ ಪ್ರತಿಕ್ರಿಯೆ ಕೇಳಿ ಬರುತ್ತಿದೆ.
ಡಿ.4 ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ʼಪುಷ್ಪ-2ʼ ಸಿನಿಮಾದ ಪ್ರಿಮಿಯರ್ ಶೋ ಆಯೋಜಿಸಲಾಗಿತ್ತು. ಪ್ರಿಮಿಯರ್ ಶೋಗೆ ಅಲ್ಲು ಅರ್ಜುನ್ ಅವರು ಆಗಮಿಸಿದ್ದರು. ಅಲ್ಲು ಅರ್ಜುನ್ ಅವರನ್ನು ನೋಡುವ ಭರದಲ್ಲಿ ಥಿಯೇಟರ್‌ನಲ್ಲಿ ನೆರೆದಿದ್ದ ಜನರು ಹಾತೊರೆದಿದ್ದು ಇದು ಕಾಲ್ತುಳಿತಕ್ಕೆ ಕಾರಣವಾಗಿದೆ.
ಪ್ರಿಮಿಯರ್ ಶೋ ವೀಕ್ಷಣೆಗೆ ದಿಲ್‌ಸುಖ್‌ನಗರದವರಾದ ರೇವತಿ ಅವರು ತಮ್ಮ ಪತಿ ಭಾಸ್ಕರ್ ಅವರು ಇಬ್ಬರು ಮಕ್ಕಳೊಂದಿಗೆ ಸಂಧ್ಯಾ ಥಿಯೇಟರ್ ಗೆ ಬಂದಿದ್ದರು. ಈ ವೇಳೆ ಕಾಲ್ತುಳಿತಕ್ಕೆ ಸಿಲುಕಿ ರೇವತಿ ಮೃತಪಟ್ಟಿದ್ದಾರೆ. ಅವರ ಮಗನಿಗೆ ಗಂಭೀರ ಗಾಯಗಳಾಗಿವೆ.
ಈ ಘಟನೆ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ ಅಲ್ಲು ಅರ್ಜುನ್ (Allu Arjun) ಅವರು ಸಂತಾಪ ಸೂಚಿಸಿ ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದರು.
ಇದೀಗ ಈ ಘಟನೆ ಸಂಬಂಧ ಪೊಲೀಸರು ಥಿಯೇಟರ್ ಮಾಲೀಕ ಸೇರಿ ಮೂವರನ್ನು ಬಂಧಿಸಿದ್ದಾರೆ. ಸಂಧ್ಯಾ ಥಿಯೇಟರ್ ಮಾಲೀಕ ಎಂ.ಸಂದೀಪ್, ವ್ಯವಸ್ಥಾಪಕ ಎಂ. ನಾಗರಾಜು ಹಾಗೂ ಭದ್ರತಾ ಮುಖ್ಯಸ್ಥ ಗಂಧಕಂ ವಿಜಯ್ ಚಂದರ್ ಅವರನ್ನು ಬಂಧಿಸಲಾಗಿದೆ.
ಈ ಮೂವರ ವಿರುದ್ಧ ಐಪಿಸಿ ಸೆಕ್ಷನ್ 105 ಅಡಿಯಲ್ಲಿ ದೂರು ದಾಖಲಿಸಿ ಬಂಧಿಸಲಾಗಿದೆ. ಈ ಸಂಬಂಧ ಅಲ್ಲು ಅರ್ಜುನ್ ಹಾಗೂ ಚಿತ್ರತಂಡದ ಮೇಲೂ ದೂರು ದಾಖಲಾಗಿದೆ.