ತುಳು ಚಿತ್ರರಂಗದಲ್ಲಿ ತಮ್ಮ ಕಾಮಿಡಿ ಕಮಾಲ್ ಮೂಲಕ ಮೋಡಿ ಮಾಡಿರುವ ದೇವದಾಸ್ ಕಾಪಿಕಾಡ್ ಈಗ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದನ್ನು ನಿರ್ದೇಶಿಸಿದ್ದಾರೆ.
“ಪುರುಷೋತ್ತಮನ ಪ್ರಸಂಗ’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದು, ಈ ಚಿತ್ರ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ. ವಿ.ರವಿ ಕುಮಾರ್ ನಿರ್ಮಿಸಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ದೇವದಾಸ್ ಕಾಪಿಕಾಡ್, “ತುಳುವಿನಲ್ಲಿ ಒಂಭತ್ತು ಸಿನಿಮಾಗಳನ್ನು ನಿರ್ದೇಶಿಸಿರುವ ನನಗೆ ಕನ್ನಡದಲ್ಲಿ ಇದು ಮೊದಲ ಚಿತ್ರ. ಪುರುಷೋತ್ತಮನ ಪ್ರಸಂಗ ಕೌಟುಂಬಿಕ ಕಥಾಹಂದರ ಹೊಂದಿರುವ ನೈಜಘಟನೆ ಆಧಾರಿತ ಚಿತ್ರ. ಪುರುಷೋತ್ತಮನ ಪಾತ್ರದಲ್ಲಿ ನಿರ್ಮಾಪಕ ರವಿಕುಮಾರ್ ಅವರ ಪುತ್ರ ಅಜಯ್ ಅಭಿನಯಿಸಿದ್ದಾರೆ. ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ನಾನು ಕೂಡಾ ನಟಿಸಿದ್ದೇನೆ. ಜಯಂತ ಕಾಯ್ಕಿಣಿ, ದೊಡ್ಡರಂಗೇಗೌಡ, ವಿ.ನಾಗೇಂದ್ರ ಪ್ರಸಾದ್ ಹಾಗೂ ನಾನು ಹಾಡುಗಳನ್ನು ಬರೆದಿದ್ದೇವೆ. ಫೆಬ್ರವರಿ ಮಧ್ಯದಲ್ಲಿ ಚಿತ್ರವನ್ನು ತೆರೆಗೆ ತರುವ ಯೋಚನೆ ಚಿತ್ರತಂಡಕ್ಕಿದೆ.
ನಾಯಕ ಅರ್ಜುನ್ ಮಾತನಾಡಿ, “ನಾನು ಈ ಹಿಂದೆ ಕಿಸ್, ಮೆಹಬೂಬ , ನಾಟ್‌ಔಟ್ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಈ ಚಿತ್ರದಲ್ಲಿನ ನನ್ನ ಪಾತ್ರವೂ ಚೆನ್ನಾಗಿದೆ’ ಎಂದರು.
ನಾಯಕಿ ರಿಷಿಕಾ ನಾಯ್ಕ್, ನಿರ್ಮಾಪಕರಾದ ವಿ.ರವಿಕುಮಾರ್, ಶಂಶುದ್ದೀನ್ ಚಿತ್ರದ ಕುರಿತು ಮಾತನಾಡಿದರು.