ಬೆಂಗಳೂರು: ಜಲ ಮಂಡಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಂದ ಲಭ್ಯವಾಗುವ ಶುದ್ಧೀಕರಿಸಿದ ನೀರನ್ನು ನಗರದ ಕೆರೆಗಳನ್ನು ಹರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದರು.
ಮಂಗಳವಾರ ಕೋರಮಂಗಲ ಮತ್ತು ಚಲ್ಲಘಟ್ಟ ಕಣಿವೆಯಲ್ಲಿ ನಿರ್ಮಾಣವಾಗುತ್ತಿರುವ 150 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಕಾಮಗಾರಿ ಪರಿಶೀಲಿಸಿ ಮಾತನಾಡಿ, ಬೆಂಗಳೂರಿನಲ್ಲಿ ಪ್ರತಿದಿನ 1,440 ಎಂಎಲ್‌ಡಿ ತ್ಯಾಜ್ಯ ನೀರು ಉತ್ಪತ್ತಿ ಆಗುತ್ತಿದ್ದು, ಪ್ರಸ್ತುತ 1,057 ಎಂಎಲ್‌ಡಿ ನೀರನ್ನು ಶುದ್ಧೀಕರಿಸಲಾಗುತ್ತಿದೆ.
ಮುಂದಿನ ವರ್ಷದೊಳಗೆ ಅದರ ಪ್ರಮಾಣವನ್ನು 1552 ಎಂಎಲ್‌ಡಿ ಹೆಚ್ಚಿಸಲಾಗುವುದು. ಆ ನೀರಿನಿಂದ ನಗರದ ಕೆರೆಗಳನ್ನು ಭರ್ತಿ ಮಾಡಲು ಜಲಮಂಡಳಿ ಯೋಜನೆ ರೂಪಿಸುತ್ತಿದೆ. ಪ್ರಸ್ತುತ 515 ಎಂಎಲ್‌ಡಿ ಸಾಮರ್ಥ್ಯದ ವಿವಿಧ ಘಟಕಗಳ ನಿರ್ಮಾಣಕ್ಕೆ ಕಾಮಗಾರಿ ನಡೆಯುತ್ತಿದ್ದು, ಅದನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುತ್ತದೆ ಎಂದರು.
ಕೋರಮಂಗಲ ಮತ್ತು ಚಲ್ಲಘಟ್ಟ ಕಣಿವೆಯಲ್ಲಿ 308 ದಶಲಕ್ಷ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಿಗೆ ನೂತನವಾಗಿ 150 ಎಂಎಲ್‌ಡಿ ಸಾಮರ್ಥ್ಯದ ಘಟಕ ಸೇರ್ಪಡೆ ಆಗುತ್ತಿದೆ. ಈ ಘಟಕದಿಂದ ಲಭ್ಯವಾಗುವ ನೀರನ್ನು ಆನೇಕಲ್ ಸುತ್ತಮುತ್ತಲಿನ ಕೆರೆಗಳನ್ನು ತುಂಬಲು ಬಳಸಲಾಗುತ್ತದೆ ಎಂದರು.
ಎಸ್‌ಟಿಪಿ ಅಳವಡಿಸಲು ಎಚ್ಚರಿಕೆ: ಹೆಚ್ಚು ತ್ಯಾಜ್ಯ ಉತ್ಪತ್ತಿ ಮಾಡುವ ಅಪಾರ್ಟ್‌ಮೆಂಟ್‌ಗಳು ಎಸ್‌ಟಿಪಿ ಅಳವಡಿಸದಿದ್ದರೆ, ಕಟ್ಟಡ ಅನುಮತಿ ಅಥವಾ ವಾಸ ಮಾಡುವುದನ್ನು ನಿಷೇಧಿಸಲಾಗುವುದು ಎಂದು ಎಚ್ಚರಿಸಿದರು. ಕೆರೆಗೆ ತ್ಯಾಜ್ಯ ನೀರು ಹರಿಸುವ ಕಾರ್ಖಾನೆ ಹಾಗೂ ಅಪಾರ್ಟ್‌ಮೆಂಟ್‌ಗಳು ಕಡ್ಡಾಯವಾಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ(ಎಸ್‌ಟಿಪಿ)ವನ್ನು ಅಳವಡಿಸಿಕೊಳ್ಳಬೇಕು. ನೀರನ್ನು ಶುದ್ಧಿಕರಿಸದೇ ಬಿಟ್ಟಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಂಥ ಅಪಾರ್ಟ್‌ಮೆಂಟ್‌ಗಳಲ್ಲಿ ಜನರ ವಾಸ್ತವ್ಯವನ್ನೂ ನಿರ್ಬಂಧಿಸಲಾಗುತ್ತದೆ ಎಂದು ಹೇಳಿದರು.
ಕ್ರಿಮಿನಲ್ ಪ್ರಕರಣ ದಾಖಲಿಗೆ ಸೂಚನೆ: ಅನಧಿಕೃತವಾಗಿ ನೀರಿನ ಸಂಪರ್ಕ ಹೊಂದಿರುವ ಬಳಕೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣದಡಿ ಎಫ್ಐಆರ್ ದಾಖಲಿಸಿ, ಕ್ರಮ ಕೈಗೊಳ್ಳುವಂತೆ ಜಲಮಂಡಳಿ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸೂಚಿಸಿದರು. ಕೇವಲ ದೂರು ನೀಡುವುದರಿಂದ ಅನಧಿಕೃತ ಸಂಪರ್ಕವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಅಂಥವರ ವಿರುದ್ಧ ಎಫ್ಐಆರ್ ದಾಖಲಿಸಿ. ಇದರಿಂದ, ಅನಧಿಕೃತ ಸಂಪರ್ಕ ಹೊಂದಲು ಮುಂದಾಗುವುದಿಲ್ಲ ಎಂದರು.