ಪುರಾತನ ದೇವಾಲಯದ ತಳಭಾಗದಲ್ಲಿ ಹುದುಗಿರುವ ಭಾರೀ ಪ್ರಮಾಣದ ನಿಧಿಗಳನ್ನು ಬೃಹತ್ ಗಾತ್ರದ ಸರ್ಪಗಳು ಕಾವಲು ಕಾಯುತ್ತಿರುತ್ತವೆ ಎಂಬ ಕಥೆಯನ್ನು ಕೇಳಿರುತ್ತೇವೆ, ಅದೇ ರೀತಿ ಕಥಾಹಂದರ ಹೊಂದಿರುವ ಸಿನಿಮಾಗಳು ಈಗಾಗಲೇ ತೆರೆ ಕಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ಇದೀಗ ಬರೋಬ್ಬರಿ 46 ವರ್ಷಗಳ ಬಳಿಕ ಪುರಿಯ ಜಗನ್ನಾಥ್ ದೇವಾಲಯದ ರತ್ನ ಭಂಡಾರ(Ratna Bhandar)ದ ಬಾಗಿಲನ್ನು ಜುಲೈ 14ರಂದು ತೆರೆಯಲು ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿದೆ. ಮೂಲಗಳ ಪ್ರಕಾರ 1985ರಲ್ಲಿ ಪುರಿ ದೇಗುಲದಲ್ಲಿರುವ ರತ್ನ ಭಂಡಾರದ ಬಾಗಿಲನ್ನು ಕೊನೆಯ ಬಾರಿಗೆ ತೆರೆಯಲಾಗಿದ್ದು, ಅಂದಿನಿಂದ ಇಂದಿನವರೆಗೆ ರತ್ನ ಭಂಡಾರದ (Ratna Bhandar) ಬಾಗಿಲು ಮುಚ್ಚಿಯೇ ಇದ್ದು, ಇದೀಗ ನಾಲ್ಕು ದಶಕಗಳ ಬಳಿಕ ರತ್ನ ಭಂಡಾರದ ಬಾಗಿಲು ತೆರೆಯಲು ಮುಹೂರ್ತ ನಿಗದಿ ಪಡಿಸಲಾಗಿದೆ!
ಅಧಿಕಾರಿಗಳಿಗೆ ನಿಧಿ ಕಾಯುತ್ತಿರುವ ಸರ್ಪಗಳದ್ದೇ ಭಯ!
ಇತಿಹಾಸ ಪ್ರಸಿದ್ಧವಾದ ಪುರಿ ಜಗನ್ನಾಥ ದೇವಾಲಯ(Puri Jagannath Temple)ದ ರತ್ನ ಭಂಡಾರದ ಬಾಗಿಲನ್ನು ತೆರೆಯಲು ಸಿದ್ಧತೆ ನಡೆಸುತ್ತಿರುವ ಏತನ್ಮಧ್ಯೆ ಶ್ರೀ ಜಗನ್ನಾಥ ಟೆಂಪಲ್ ಅಡ್ಮಿನಿಸ್ಟ್ರೇಶನ್ (SJTA) ಅಧಿಕಾರಿಗಳು ಮಾತ್ರ ರತ್ನ ಭಂಡಾರದ ಸುತ್ತ-ಮುತ್ತ ಇರುವ ಹಾವುಗಳಿಂದ ರಕ್ಷಣೆ ಪಡೆಯುವುದು ಹೇಗೆಂಬ ಚಿಂತೆಯಲ್ಲಿದ್ದಾರೆ. ಅದಕ್ಕಾಗಿ ನುರಿತ ಉರಗ ತಜ್ಞರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ಏನಾದರು ಅಪಾಯ ಸಂಭವಿಸಿದರೆ ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯರನ್ನು ತಂಡವನ್ನು ನಿಯೋಜಿಸಿಕೊಳ್ಳಲು ತಯಾರಾಗಿದ್ದಾರೆ.
ರತ್ನ ಭಂಡಾರ(Ratna Bhandar)ವನ್ನು ಹೇಗೆ ತೆರೆಯಲಾಗುತ್ತದೆ ಎಂಬ SOP(ಕರಡು)ಯನ್ನು ಅನುಮತಿ ಪಡೆಯಲು ಅಧಿಕಾರಿಗಳು ಒಡಿಶಾ ಸರ್ಕಾರಕ್ಕೆ ಕಳುಹಿಸಿದ್ದಾರೆ. ಅದರ ಜೊತೆಗೆ ನುರಿತ ಉರಗ ತಜ್ಞರು ಹಾಗೂ ವೈದ್ಯರ ತಂಡವನ್ನು ಕಳುಹಿಸಿಕೊಡುವಂತೆ ಮನವಿ ಮಾಡಿಕೊಂಡಿರುವುದಾಗಿ SJTA ಅಧಿಕಾರಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
1985ರ ಜುಲೈ 14ರಂದು ಬಲಭದ್ರ ದೇವರ ಚಿನ್ನಾಭರಣಗಳ ಪತ್ತೆಗಾಗಿ ರತ್ನ ಭಂಡಾರ(Ratna Bhandar)ವನ್ನು ಕೊನೆಯ ಬಾರಿಗೆ ತೆರೆಯಲಾಗಿತ್ತು. ರತ್ನ ಭಂಡಾರದಲ್ಲಿ ಎಷ್ಟು ನಿಧಿಗಳಿವೆ ಎಂಬ ಬಗ್ಗೆ 1978ರ ಮೇ 13ರಿಂದ ಜುಲೈ 13ರವರೆಗೆ ಲೆಕ್ಕಾಚಾರ ಹಾಕಲಾಗಿದ್ದು, ಇದು ಕೊನೆಯದಾಗಿ ನಡೆದ ಲೆಕ್ಕಾಚಾರವಾಗಿತ್ತು. ಆ ಬಳಿಕ ರತ್ನ ಭಂಡಾರದೊಳಗೆ ವಿಷಕಾರಿ ಸರ್ಪಗಳು, ನಾಗರ ಹಾವುಗಳು ಕಾವಲು ಕಾಯುತ್ತಿರುವ ಬಗ್ಗೆ ದಂತಕಥೆಗಳು, ಜಾನಪದ ಕಥೆಗಳು ಹುಟ್ಟಿಕೊಂಡಿದ್ದವು.
ಬರೋಬ್ಬರಿ 45 ವರ್ಷಗಳ ಬಳಿಕ ರತ್ನ ಭಂಡಾರ(Ratna Bhandar)ದ ಬಾಗಿಲು ತೆರೆಯಲ್ಲಿದ್ದು, ಅಲ್ಲಿರು ಪುರಾತನ ಚಿನ್ನಾಭರಣ, ವಜ್ರ, ವೈಡೂರ್ಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗತೊಡಗಿದೆ. ಅದರ ಜೊತೆಗೆ ಅಲ್ಲಿ ವಾಸವಾಗಿರುವ ಹಾವುಗಳ ಬಗ್ಗೆಯೂ ಅಧಿಕಾರಿಗಳಿಗೆ ಅಷ್ಟೇ ಭಯ ಹುಟ್ಟಿಸಿದೆಯಂತೆ!
ರತ್ನ ಭಂಡಾರದೊಳಗೆ ಹಾವುಗಳಿವೆ ಎಂದು ಭಯಪಡಲು ಕಾರಣವಿದೆ…ಒಂದು ದಂತಕಥೆಗಳ ನಂಬಿಕೆ, ಮತ್ತೊಂದು ಇತ್ತೀಚೆಗೆ ಜಗನ್ನಾಥ ಹೆರಿಟೇಜ್ ಕಾರಿಡಾರ್ ಯೋಜನೆಯಡಿ ದೇವಾಲಯಕ್ಕೆ ಬಣ್ಣ ಬಳಿದ ಸಂದರ್ಭದಲ್ಲಿ ದೇವಾಲಯದ ಸುತ್ತ ಇರುವ ಹಲವಾರು ಸಣ್ಣ, ಸಣ್ಣ ರಂಧ್ರದ ಒಳಗೆ ಹಾವುಗಳು ಹೋಗುತ್ತಿರುವುದು, ಹಾವುಗಳು ಹೊರಬರುತ್ತಿರುವುದನ್ನು ಪ್ರತ್ಯಕ್ಷವಾಗಿ ಗಮನಿಸಿದ್ದರು. ಈ ಹಾವುಗಳು ರತ್ನ ಭಂಡಾರದೊಳಗೆ ಇರುವ ಸಾಧ್ಯತೆ ಹೆಚ್ಚು ಎಂಬುದು ದೇವಾಲಯದ ಮಂಡಳಿಯ ಸದಸ್ಯರ, ಅಧಿಕಾರಿಗಳ ಭಯಕ್ಕೆ ಕಾರಣವಾಗಿದೆ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ರತ್ನ ಭಂಡಾರ(Ratna Bhandar)ದ ಬಾಗಿಲನ್ನು ತೆರೆಯುವ ಮುನ್ನ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗಿದೆ ಎಂಬುದು ಶ್ರೀ ಜಗನ್ನಾಥ ಟೆಂಪಲ್ ಅಡ್ಮಿನಿಸ್ಟ್ರೇಶನ್ ನ ನಿಲುವಾಗಿದೆ.
ಒಂದು ಅಂದಾಜಿನ ಪ್ರಕಾರ ರತ್ನ ಭಂಡಾರದಲ್ಲಿ ಇರುವ ಅಮೂಲ್ಯ ವಜ್ರ ವೈಡೂರ್ಯ, ಚಿನ್ನಾಭರಣಗಳನ್ನು ಬಳಸಿಕೊಂಡರೆ ವಿಶ್ವದ ಹಲವು ಬಡ ರಾಷ್ಟ್ರಗಳ ಆರ್ಥಿಕತೆಯನ್ನು ಸುಧಾರಿಸಬಹುದಂತೆ!
1978ರಲ್ಲಿ ಕೊನೆ ಬಾರಿ ಲೆಕ್ಕ ಹಾಕಿದ ವೇಳೆ ಪುರಿ ರತ್ನ ಭಂಡಾರದಲ್ಲಿ 12,500 ಚಿನ್ನಾಭರಣಗಳಿದ್ದು, ಅದರಲ್ಲಿ ವಜ್ರ, ಪಚ್ಚೆ, ಹರಳುಗಳಿದ್ದವಂತೆ. 2018ರಲ್ಲಿ ನ್ಯಾಯಾಲಯವು ಪುರಾತತ್ವ ಇಲಾಖೆಗೆ ರತ್ನ ಭಂಡಾರದ ಆಭರಣಗಳನ್ನು ಪರಿಶೀಲಿಸುವಂತೆ ಆದೇಶಿಸಿತ್ತು. ಈ ಸಂದರ್ಭದಲ್ಲಿ ದೇವಾಲಯಕ್ಕೆ ಪರಿಶೀಲನೆಗಾಗಿ ಆಗಮಿಸಿದ್ದ ಎಎಸ್ ಐ ಅಧಿಕಾರಿಗಳ ತಂಡಕ್ಕೆ ದೇವಾಲಯದ ಕೀಲಿ ಕೈ ನಾಪತ್ತೆಯಾಗಿದೆ ಎಂದು ತಿಳಿಸುವ ಮೂಲಕ ತಪಾಸಣೆ ಕೆಲಸ ಅಪೂರ್ಣಗೊಂಡಿತ್ತು. ಇದೀಗ ಹೆಚ್ಚುವರಿಯಾಗಿ ಇರುವ ಕೀ ಮೂಲಕ ಬೀಗ ತೆರೆಯಲು ಪ್ರಯತ್ನಿಸುವ ಸಾಧ್ಯತೆ ಇದ್ದು, ಒಂದು ವೇಳೆ ಆ ಕೀಯಿಂದ ಬಾಗಿಲು ತೆರೆಯದಿದ್ದರೆ, ಬಾಗಿಲನ್ನು ಒಡೆದು ರತ್ನ ಭಂಡಾರದಲ್ಲಿರುವ ಚಿನ್ನಾಭರಣಗಳ ಲೆಕ್ಕಾಚಾರ ನಡೆಯಲಿದೆ.