ಸೈದಾಪುರ: ಪ್ಲೋರೈಡ್‌ಯುಕ್ತ ನೀರು ಇರುವ ಸೈದಾಪುರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಸುಮಾರು 10 ಗ್ರಾಮಗಳ ಜನರಿಗೆ ಶುದ್ಧ ನೀರು ಒದಗಿಸುವ ಉದ್ದೇಶದಿಂದ ಪ್ರಾರಂಭವಾದ ಶುದ್ಧ ನೀರಿನ ಘಟಕ ಇದಿಗ ನೀರಿನ ಕೊರತೆಯಿಂದ ಹಲವು ದಿನಗಳಿಂದ ಸ್ಥಗಿತಗೊಂಡಿದೆ.
ಪಟ್ಟಣದಲ್ಲಿ ಎರಡು ವರ್ಷದ ಹಿಂದೆ ಪ್ರಾರಂಭವಾದ ಇಲ್ಲಿನ ಘಟಕ, ಅಧಿಕಾರಿಗಳ ನಿಷ್ಕಾಳಜಿಯಿಂದ ಜನರಿಗೆ ಶುದ್ಧ ನೀರು ದೊರೆಯದೆ ಪ್ಲೋರೈಡ್‌ಯುಕ್ತ ನೀರನ್ನು ಕುಡಿಯುವುದು ಅನಿವಾರ್ಯವಾಗಿದೆ.
ಪಟ್ಟಣದಲ್ಲಿ ಸತತವಾಗಿ 2-3 ವಾರಗಳಿಂದ ನೀರಿನ ಸರಬರಾಜು ನಿಂತಿದೆ. ನೀರು ನೀಡುವ ಬೋರವೆಲ್ಗಳ ನಿರ್ವಹಣೆ ಕೊರತೆ ಮತ್ತು ಇದ್ದ ಬೋರವೆಲ್ಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ. ಇದರ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬವುದು ಇಲ್ಲಿನ ಜನರ ಅಳಲು. ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಬೋರವೆಲ್ಗಳು ನೀಲಹಳ್ಳಿ ಕ್ರಾಸ್ ಬಳಿ ಇವೆ. ಅಲ್ಲಿ ನೂತನವಾಗಿ ಯಾದಗಿರಿ ಮತ್ತು ರಾಯಚೂರು ನಡುವೆ ರಾಷ್ಟೀಯ ಹೆದ್ದಾರಿ ನಿರ್ಮಾಣ ಆಗುತ್ತಿರುವುದರಿಂದ ಸರಬರಾಜು ಮಾಡುವ ಪೈಪ್‌ಗ್ಳು ತೆಗೆಯಲಾಗಿದ್ದು. ನಂತರ ರಸ್ತೆ ನಿರ್ಮಾಣ ಮಾಡುವ ಗುತ್ತಿಗೆದಾರರು ನೀರಿನ ಪೈಪ್‌ಗ್ಳ ದುರಸ್ತಿ ಮಾಡದಿರುವುದರಿಂದ ಪಟ್ಟಣಕ್ಕೆ ನೀರಿನ ಕೊರತೆ ಹೆಚ್ಚಾಗಿದೆ ಎನ್ನುತ್ತಾರೆ ಇಲ್ಲಿನ ಗ್ರಾಮ ಪಂಚಾಯತ ಸಿಬ್ಬಂದಿ.
ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಿರುವ ಕಾರಣ ಜನರಿಗೆ ಶುದ್ಧ ನೀರು ಒದಗಿಸುವುದು ಕಷ್ಟಕರವಾಗಿದೆ. ಮತ್ತು ಬೋರವೆಲ್ನಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಈ ಸಮಸ್ಯೆ ಕುರಿತು ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು, ಮುಂದಿನ 2-3ದಿನಗಳಲ್ಲಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಹಿಡಿದು ಸಾರ್ವಜನಿಕರಿಗೆ ಶುದ್ಧ ನೀರು ಕಲ್ಪಿಸಲು ಪ್ರಯತ್ನಿಸುತ್ತೇನೆ.
•
ಶೇಖರ, ಪಿಡಿಒ ಸೈದಾಪುರ
ಈ ಶುದ್ಧ ನೀರು ಘಟಕ ಪ್ರಾರಂಭದಿಂದ ಯಾವುದಾರು ಒಂದು ತಾಂತ್ರಿಕ ಕಾರಣಗಳಿಂದ ನೀರು ಸರಿಯಾಗಿ ಶುದ್ಧ ಆಗುತ್ತಿಲ್ಲ ಮತ್ತು ತಿಂಗಳಿಗೆ ಒಂದರಿಂದ ಎರಡು ಬಾರಿ ಸ್ಥಗಿತ ಆಗುತ್ತಿದೆ. ಇದಕ್ಕೆಲ್ಲಾ ಕಾರಣ ಇಲ್ಲಿನ ಗ್ರಾಪಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಹಾಗೂ ಪಟ್ಟಣದಲ್ಲಿ ಸತತವಾಗಿ ನೀರಿನ ಸಂಕಷ್ಟ ಎದರಾದರು ಜನಪ್ರತಿನಿಧಿಗಳು ಗಮನ ಹರಿಸದಿರುವುದು ಬೇಜಾರಿನ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಶೀಘ್ರದಲ್ಲಿ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ಗ್ರಾಪಂಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು.
•
ಚಂದ್ರಶೇಖರ ಕರಣಿಗಿ,
ಸ್ಥಳೀಯ ನಿವಾಸಿ