ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ ಇಲಾಖೆಯಿಂದ ಅಳವಡಿಸಿರುವ ಶುದ್ಧ ನೀರಿನ ಘಟಕಗಳಲ್ಲಿ ನೀಡಲಾಗುತ್ತಿರುವ ನೀರಿನ ದರವನ್ನು ಏರಿಕೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪ್ರಸ್ತುತ ಪ್ರತಿ ಲೀಟರ್‌ಗೆ 10 ಪೈಸೆ ದರದಂತೆ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ. ಆದರೆ, ನಿರ್ವ ಹಣಾ ವೆಚ್ಚ 25 ಪೈಸೆ ಆಗುತ್ತಿದೆ. ಇದನ್ನು ಸರಿದೂಗಿಸಲು ಪ್ರತಿ ಲೀಟರ್‌ಗೆ 25 ಪೈಸೆ ನಿಗದಿ ಮತ್ತು 5 ವರ್ಷ ಕಾಲ ನಿರ್ವಹಣೆ, ಕಾರ್ಯಾಚರಣೆ ಶುಲ್ಕ ನಿಗದಿಗೊಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ನೀರಿನ ಮಾರಾಟದಿಂದ ಸಿಗುವ ಶುಲ್ಕ ಹಾಗೂ ನಿರ್ವಹಣೆಗೆ ನೀಡುವ ಮೊತ್ತ ನೋಡಿ ಅದಕ್ಕೂ ಹೆಚ್ಚು ವೆಚ್ಚವಾದರೆ ನಾವು ಕೊಡಬೇಕಾಗುತ್ತದೆ. ಇದಕ್ಕಾಗಿ ಐದು ವರ್ಷಗಳಿಗೆ 233 ಕೋಟಿ ರೂ. ವೆಚ್ಚದ ಅಂದಾಜು ಮಾಡಲಾಗಿದೆ ಎಂದು ವಿವರಿಸಿದರು.
ಹೊರಗುತ್ತಿಗೆಗೆ ತೀರ್ಮಾನ: ಇದರ ಜತೆಯಲ್ಲೇ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಹೊರ ಗುತ್ತಿಗೆ ವಹಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಆದರೆ, ಪ್ರಸ್ತುತ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಮಾಡುತ್ತಿರುವ ಗ್ರಾಮ ಪಂಚಾಯಿತಿಗಳು ತಾವೇ ನಿರ್ವಹಣೆ ಹೊಣೆಗಾರಿಕೆ ನಿಭಾಯಿಸುತ್ತೇವೆ ಎಂದರೆ ಅದಕ್ಕೂ ಒಪ್ಪಿಗೆ ನೀಡಲಾಗುವುದು. ಹೊಸದಾಗಿ ಯಾವುದಾದರೂ ಗ್ರಾಮ ಪಂಚಾಯಿತಿಗಳು ನಿರ್ವಹಣೆಗೆ ಮುಂದಾದರೂ ಅನುಮತಿ ನೀಡಲಾಗುತ್ತದೆ.
ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಆರ್‌ಡಿಪಿಆರ್ ಇಲಾಖೆಯಿಂದ ಸುಮಾರು 18 ಸಾವಿರ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲು ತೀರ್ಮಾನಿಸಿದ್ದು ಆ ಪೈಕಿ 16 ಸಾವಿರ ಅಳವಡಿಸಲಾಗಿದೆ ಎಂದಿದ್ದಾರೆ.
ಘಟಕಗಳ ನಿರ್ವಹಣೆ ದೊಡ್ಡ ಸವಾಲಾಗಿದೆ. ಹೀಗಾಗಿ, ತಾಲೂಕು ಮಟ್ಟದಲ್ಲಿ ಪ್ಯಾಕೇಜ್ ಮಾಡಿ ರಾಜ್ಯ ಮಟ್ಟದಲ್ಲಿ ಒಂದು ಸಂಸ್ಥೆಗೆ ನಿರ್ವಹಣೆಗೆ ಹೊರಗುತ್ತಿಗೆಗೆ ನೀಡಲು ನಿರ್ಧರಿಸಲಾಗಿದೆ. 5 ವರ್ಷ ನಿರ್ವಹಣೆ ಸಮೇತ ಸುಸೂತ್ರವಾಗಿ ಘಟಕ ಕಾರ್ಯನಿರ್ವಹಿಸುವಂತೆ ಮಾಡಲು ಒಟ್ಟು 233 ಕೋಟಿ ರೂ. ವೆಚ್ಚ ಸರ್ಕಾರವೇ ಭರಿಸಲಿದೆ. ಪ್ರತಿ ಘಟಕಕ್ಕೆ ಸರಾಸರಿ ಮೂರು ಸಾವಿರ ರೂ.ನಂತೆ ನಿರ್ವಹಣೆ ವೆಚ್ಚ ನೀಡಲಾಗುವುದು ಎಂದು ಹೇಳಿದರು.