Advertisement
ನವೆಂಬರ್ 4ರಂದು ಪಿಯುಸಿ ವಿಜ್ಞಾನ ಓದುತ್ತಿರುವ ಸುಮಾರು ಮೂರು ಲಕ್ಷ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹನ್ ಯೋಜನಾ (ಕೆವಿಪಿವೈ) ವಿದ್ಯಾರ್ಥಿ ವೇತನಕ್ಕಾಗಿ ದೇಶಾದ್ಯಂತ ಪರೀಕ್ಷೆ ಬರೆಯಲಿದ್ದಾರೆ. ಈ ಪರೀಕ್ಷೆಯನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್) ನಡೆಸುತ್ತದೆ.
Related Articles
Advertisement
ಆದರೆ ವೃತ್ತಿ ಶಿಕ್ಷಣಕ್ಕೆ ಎಲ್ಲಿಲ್ಲದ ಮಹತ್ವ ನೀಡಲಾಗುತ್ತಿದೆ. ಶತಾಯಗತಾಯ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಓದಲೇಬೇಕು ಎಂಬ ಹಠದೊಂದಿಗೆ ವಿದ್ಯಾರ್ಥಿಗಳು, ಪೋಷಕರು ಯಾವ ದುಬಾರಿ ತರಬೇತಿ ಕೊಡಿಸಲೂ ಮುಂದಾಗುತ್ತಾರೆ. ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್ ಶಿಕ್ಷಣವೆಂದರೆ ಆಡಳಿತಾತ್ಮಕ ಉದ್ಯೋಗ, ಭಾರೀ ವೇತನ, ಐಷಾರಾಮಿ ಬದುಕು ಎಲ್ಲಾ ಕೈಗೆಟುಕಿದಂತೆ ಎಂಬ ಭಾವನೆ ನಮ್ಮಲ್ಲಿದೆ. ಎಲ್ಲಾ ಅದರ ಬೆನ್ನು ಹತ್ತುವವರೇ. ಕರ್ನಾಟಕ ಪರೀûಾ ಪ್ರಾಧಿಕಾರ (ಕೆಇಎ) ಇಡೀ ರಾಜ್ಯದ ಎಂಜಿನಿಯರಿಂಗ್ ಸೀಟು ಹಂಚುವ ಉಸ್ತುವಾರಿ ಹೊತ್ತಿದೆ. ಆದರೆ ಬೆಂಗಳೂರಿನ ನಮ್ಮದೇ ಐಐಎಸ್‌ಸಿ ನಡೆಸುವ ಕೆವಿಪಿವೈ ಪರೀಕ್ಷೆಯ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಮಾರ್ಗಸೂಚಿಯಲ್ಲೂ ಒಂದಕ್ಷರವಿಲ್ಲ. ರಾಷ್ಟ್ರಮಟ್ಟದ ಪರೀಕ್ಷೆಗಳಿಗೆ ಪೂರಕವಾಗುವಂತೆ ಶಿಕ್ಷಣ ಇಲಾಖೆಯೇ ತನ್ನ ಮಾರ್ಗ ಸೂಚಿಯಲ್ಲಿ ಕೆಲವು ಸ್ಪಷ್ಟ ಸೂಚನೆಗಳನ್ನು ನೀಡಬೇಕು ಹಾಗೂ ಈ ಪರೀಕ್ಷೆಗಳಿಗೆ ಅನುಗುಣವಾಗುವಂತೆ ಪಠ್ಯವನ್ನೂ ಸಮನ್ವಯಗೊಳಿಸುವ ಇಲ್ಲವೇ ರಾಷ್ಟ್ರೀಯ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಪ್ರಯತ್ನ ಮಾಡಬೇಕು. ಈಗ ಎನ್‌ಸಿಇಆರ್‌ಟಿ ಪಠ್ಯ ಕ್ರಮ ಇರುವುದರಿಂದ ಈ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿದಿದೆ. ಆದರೆ ಕರ್ನಾಟಕ ಪ್ರೌಢಶಿಕ್ಷಣ ಪರೀûಾ ಮಂಡಳಿಯ ಸಿಲಬಸ್‌ಗೂ, ಕೆವಿಪಿವೈ ಪರೀûಾ ಮಟ್ಟಕ್ಕೂ ತುಂಬಾ ವ್ಯತ್ಯಾಸವಿದೆ. ಹೀಗಾಗಿ ಐಸಿಎಸ್‌ಸಿ, ಸಿಬಿಎಸ್‌ಸಿ ಪಠ್ಯ ಕ್ರಮಗಳಿಗೆ ಓದಿರುವ, ಅದರಲ್ಲೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಮಾತ್ರ ಕೆವಿಪಿವೈ ಪರೀಕ್ಷೆಗೆ ತಯಾರಾಗುವುದು ಸುಲಭವಾಗುತ್ತದೆ. ಇತರೆ ವಿದ್ಯಾರ್ಥಿಗಳಿಗೆ ಇದು ಕಬ್ಬಿಣದ ಕಡಲೆಯೇ! ಶುದ್ಧ ವಿಜ್ಞಾನ ವಿಷಯಗಳ ಬಗ್ಗೆ ಆಸಕ್ತಿ ಇದ್ದು ಕೆವಿಪಿವೈ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಹೀಗಾಗಿ ಯಾರದೇ ಅಕಾಡೆಮಿಕ್ ಸಹಾಯವಿಲ್ಲದೆ ತಮಗೆ ತಾವೇ ಪರೀಕ್ಷೆಗೆ ಸಿದ್ಧವಾಗಬೇಕಾಗುತ್ತದೆ. ಖಾಸಗಿಯಾಗಿ ದುಬಾರಿ ಪುಸ್ತಕಗಳನ್ನು ಕೊಳ್ಳಬೇಕು ಮತ್ತು ಖಾಸಗಿ ತರಬೇತಿಗೆ ಸೇರಬೇಕು. ಈ ಖಾಸಗಿ ತರಬೇತಿ ಸಂಸ್ಥೆಗಳು ಅವೈಜ್ಞಾನಿಕವಾಗಿ ಪರೀಕ್ಷಾರ್ಥಿಗಳಿಂದ ಹಣ ವಸೂಲಿ ಮಾಡುತ್ತವೆ. ಹಲವು ಕಡೆ ಇದೇ ಒಂದು ದಂಧೆಯಾಗಿ ರೂಪುಗೊಂಡಿದೆ; ಕಾಲೇಜು ಉಪನ್ಯಾಸಕರೇ ಖಾಸಗಿ ಪಾಠದ ಜೊತೆಗೆ ಕೆವಿಪಿವೈ ಪರೀಕ್ಷೆಗೂ ವಿಶೇಷ ಸಿದ್ಧತೆ ಮಾಡುವ ಸ್ಕೀಂಗಳನ್ನು ಯೋಜಿಸಿದ್ದಾರೆ. ಪಪೂ ಪರೀಕ್ಷಾ ಮಂಡಳಿಯಿಂದಾಗಲೀ, ತಾವು ಓದುತ್ತಿರುವ ಕಾಲೇಜಿನಿಂದಾಗಲೀ ಯಾವುದೇ ಬೆಂಬಲ, ಪ್ರೋತ್ಸಾಹವಿಲ್ಲದ ಕಾರಣ ವಿದ್ಯಾರ್ಥಿಗಳು ಮಿಕ್ಕೆಲ್ಲಾ ಶೈಕ್ಷಣಿಕ ಚಟುವಟಿಕೆಗಳ ಒತ್ತಡದ ಜೊತೆ ಜೊತೆಗೇ ಕೆವಿಪಿವೈ ಪರೀಕ್ಷೆಗೆ ಸಿದ್ಧವಾಗಬೇಕು. ಕಾಲೇಜಲ್ಲಿ ಮುಗಿಯದ ಪಠ್ಯ ವಿಷಯಗಳನ್ನು ತಾವೇ ಅಧ್ಯಯನ ಮಾಡಬೇಕು.. ಕಾಲೇಜಿನ ಟೆಸ್ಟ್‌ಗಳು, ಮಧ್ಯವಾರ್ಷಿಕ ಪರೀಕ್ಷೆಗಳು, ಪ್ರಯೋಗ ಶಾಲೆಗಳ ರೆಕಾರ್ಡ್ ಬರೆಯುವುದು, ಸಿಇಟಿ ತರಬೇತಿ ಇವುಗಳ ತೀವ್ರ ಒತ್ತಡದ ನಡುವೆ ಕೆವಿಪಿವೈ ಪರೀಕ್ಷೆಗೆ ಸಿದ್ಧರಾಗಲು ಸಮಯವೆಲ್ಲಿದೆ? ಈ ಪರೀಕ್ಷೆಯನ್ನು ಆನ್‌ಲೈನ್ ಮೂಲಕವೇ ತೆಗೆದುಕೊಳ್ಳಬೇಕು. ಪರೀಕ್ಷೆಗೆ ಅಭ್ಯಾಸವಾಗಲೆಂದು ಇದಕ್ಕೆ ಸಂಬಂಧಿಸಿದ ಮಾಕ್ ಟೆಸ್ಟ್ ಗಳು ಆನ್‌ಲೈನಲ್ಲಿ ಲಭ್ಯವಿದೆ. ಆದರೆ ಕಂಪ್ಯೂಟರ್/ಲ್ಯಾಪ್‌ಟಾಪ್ ಲಭ್ಯವಿಲ್ಲದ, ಇಂಟರ್‌ನೆಟ್ ಸೌಲಭ್ಯವಿಲ್ಲದ ಸಾವಿರಾರು ಗ್ರಾಮೀಣ ಪ್ರದೇಶದ ಮಕ್ಕಳು ಮಾಕ್‌ಟೆಸ್ಟ್ ತೆಗೆದುಕೊಳ್ಳುವುದಾದರೂ ಹೇಗೆ? ರಾಷ್ಟ್ರ ಮಟ್ಟದಲ್ಲಿ ಇತರೆ ನಗರ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸುವುದಾದರೂ ಹೇಗೆ? ಶುದ್ಧ ಮತ್ತು ಅನ್ವಯಿಕ ವಿಜ್ಞಾನ ಓದಬೇಕೆಂದು ಹಂಬಲಿಸುವ ವಿದ್ಯಾರ್ಥಿಗಳ ಪಾಡು ಇದು.
ಶುದ್ಧ ವಿಜ್ಞಾನಗಳ ಬಗ್ಗೆ ಅನಾದರ ಗೊತ್ತಿರುವ ವಿಷಯವೇ! ಆದರೆ ವೃತ್ತಿಪರ ಶಿಕ್ಷಣವೆಂದೇ ಬಿಂಬಿಸಲ್ಪಟ್ಟಿರುವ ಎಂಜಿನಿಯರಿಂಗ್ ಶಿಕ್ಷಣವೂ ಕೆಲವೇ ವರ್ಗದ ವಿದ್ಯಾರ್ಥಿಗಳ ಸ್ವತ್ತಾಗಿದೆ ಎಂಬುದು ತೀವ್ರ ವಿಷಾದದ ಸಂಗತಿ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ ನಡೆಸುವ ಜೆಇಇ (ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮ್) ಪರೀಕ್ಷೆಗಳ ಕತೆಯೂ ಇದೇ! ಇಷ್ಟು ವರ್ಷ ಸಿಬಿಎಸ್‌ಇ ಜೆಇಇ ಪರೀಕ್ಷೆಗಳನ್ನು ನಡೆಸುತ್ತಿತ್ತು. ಈ ವರ್ಷದಿಂದ ಎನ್‌ಟಿಎ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ಜೆಇಇ ಮುಖ್ಯ ಮತ್ತು ಅಡ್ವಾನ್ಸ್$ ಪರೀಕ್ಷೆಗಳನ್ನು ನಡೆಸುತ್ತಿದೆ. ದೇಶದಾದ್ಯಂತ ಇರುವ ಎನ್‌ಐಟಿಗಳು, ಐಐಟಿಗಳು ಮತ್ತು ಕೇಂದ್ರದಿಂದ ಅನುದಾನ ಪಡೆಯುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಜೆಇಇಯನ್ನು ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಕಳೆದ ಸಾಲಿನಲ್ಲಿ ದೇಶಾದ್ಯಂತ ಸುಮಾರು 10.43 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದಾರೆ. ಅದರಲ್ಲಿ ಸುಮಾರು 2.2 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ವರ್ಷ ಸುಮಾರು 13 ಲಕ್ಷ ವಿದ್ಯಾರ್ಥಿಗಳು ಜೆಇಇ ಬರೆಯುವ ನಿರೀಕ್ಷೆ ಇದೆ. ಇದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಎನ್‌ಟಿಎ ಮೂಲಕ ನಡೆಸುವ ಅರ್ಹತಾ ಪರೀಕ್ಷೆಯಾದ್ದರಿಂದ ಇದಕ್ಕೆ ಶುಲ್ಕವೂ ಕಡಿಮೆ. ವಿದ್ಯಾರ್ಥಿಗಳಿಗೆ 500, 900 ಹಾಗೂ ವಿದ್ಯಾರ್ಥಿನಿಯರಿಗೆ 250, 450 ಕ್ರಮವಾಗಿ ಒಂದು ಮತ್ತು ಎರಡು ಪತ್ರಿಕೆಗಳಿಗೆ ನಿಗದಿಪಡಿಸಲಾಗಿದೆ. ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಪ್ರತಿವರ್ಷ ಎರಡು ಬಾರಿ ಜನವರಿ ಮತ್ತು ಏಪ್ರಿಲ್‌ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ.
ಕಳೆದ ವರ್ಷ ಸುಮಾರು 2.32 ಲಕ್ಷ ವಿಜ್ಞಾನ ವಿದ್ಯಾರ್ಥಿಗಳು ಪಿಯು ಮಂಡಳಿ ನಡೆಸುವ ಎರಡನೇ ಪಿಯು ಪರೀಕ್ಷೆಗಳನ್ನು ತೆಗೆದುಕೊಂಡಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿಗೆ 1.98 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಆದರೆ ಮಾಹಿತಿ ಮತ್ತು ಸೌಲಭ್ಯಗಳ ಕೊರತೆಯಿಂದ ಇದೇ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಜೆಇಇ ಪರೀಕ್ಷೆ ತೆಗೆದುಕೊಳ್ಳಲು ಉತ್ಸಾಹ ತೋರುತ್ತಿಲ್ಲ. ಇದನ್ನೇ ನಗರ ಪ್ರದೇಶದ ಕಾಲೇಜುಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಬಂಡವಾಳ ಮಾಡಿಕೊಂಡಿವೆ. ಕೆವಿಪಿವೈ, ಜೆಇಇ, ಸಿಇಟಿ, ನೀಟ್ ಹೀಗೆ ಪಠ್ಯಕ್ರಮದ ಜೊತೆಗೇ ಇವನ್ನು ಸಮನ್ವಯಗೊಳಿಸಿರುವುದಾಗಿ ಹೇಳಿಕೊಂಡು ದುಬಾರಿ ಶುಲ್ಕ ವಸೂಲಿ ಮಾಡುತ್ತಿವೆ. ಕೆಲವು ಕಾಲೇಜುಗಳು ಕೆವಿಪಿವೈ ಮತ್ತು ಜೆಇಇ ಫಲಿತಾಂಶವನ್ನೇ ತಮ್ಮ ಕಾಲೇಜಿನ ಪ್ರತಿಷ್ಠೆಯ ವಿಷಯವ ನ್ನಾಗಿಸಿಕೊಂಡಿವೆ. ಒಂದು ಕಾಲೇಜಿನಲ್ಲಿ ಒಂದೇ ವರ್ಷ 23 ವಿದ್ಯಾರ್ಥಿಗಳು ಕೆವಿಪಿವೈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಕಾಲೇಜಿನಲ್ಲಿ ಪ್ರವೇಶ ಪಡೆಯಲು ರೂ.2.25 ಲಕ್ಷ ಶುಲ್ಕ ಕಟ್ಟಬೇಕು. ಇನ್ನೊಂದು ಕಾಲೇಜಿನಲ್ಲಿ ಒಬ್ಬರೂ ಕೆವಿಪಿವೈ ವಿದ್ಯಾರ್ಥಿವೇತನಕ್ಕೆ ಅರ್ಹತೆ ಪಡೆಯದ ಕಾರಣ ಕಾಲೇಜಿನ ಘನತೆ ಮುಕ್ಕಾಯಿತೆಂದು ಭಾವಿಸಿ ಅಲ್ಲಿನ ಆಡಳಿತ ಮಂಡಳಿ ಎಸ್‌ಎಸ್‌ಎಲ್‌ಸಿ ಮತ್ತು ಪ್ರಥಮ ಪಿಯುನಲ್ಲಿ ವಿಜ್ಞಾನ, ಗಣಿತದಲ್ಲಿ ಶೇ.100 ಅಂಕ ಪಡೆದವರು ಮಾತ್ರ ಪರೀಕ್ಷೆ ಬರೆಯಬೇಕು ಎಂದು ಅಲಿಖೀತ ನಿಬಂಧನೆ ಹೇರಿ ವಿದ್ಯಾರ್ಥಿಗಳ ಪರೀಕ್ಷೆ ಬರೆಯುವ ಅವಕಾಶವನ್ನೇ ಕಿತ್ತುಕೊಂಡಿದೆಯಂತೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಜೆಇಇ ವಿಷಯದಲ್ಲೂ ಅನ್ಯಾಯಕ್ಕೊಳಗಾಗಿದ್ದಾರೆ. ಅಗತ್ಯ ಮಾಹಿತಿ, ತರಬೇತಿ, ಪೂರಕ ಬೆಂಬಲ ಇಲ್ಲದ ಕಾರಣ ಇವರು ರಾಷ್ಟ್ರಮಟ್ಟದ ಪರೀಕ್ಷೆಗಳನ್ನು ಎದುರಿಸುವ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ರಾಷ್ಟ್ರೀಯ ತಾಂತ್ರಿಕ ವಿದ್ಯಾಲಯಗಳ ಪ್ರವೇಶ ಗಗನ ಕುಸುಮವಾಗಿದೆ.ಅವರು ಸಿಇಟಿಗೇ ತೃಪ್ತಿಪಟ್ಟುಕೊಳ್ಳಬೇಕಾಗಿದೆ.
ಸಮಾನ ಶಿಕ್ಷಣ, ಸಮಾನಹಕ್ಕು, ಅವಕಾಶಗಳ ಬಗ್ಗೆ ಮಾತಾಡುವ ನಮ್ಮ ಸರ್ಕಾರಗಳು ಇತ್ತ ಗಮನಹರಿಸಬೇಕಿದೆ. ಪಿಯು ಮಂಡಳಿ ತಮ್ಮ ಮಾರ್ಗಸೂಚಿಯಲ್ಲಿ ಕೆವಿಪಿವೈ ಮತ್ತು ಜೆಇಇ ಮೊದಲಾದ ಪರೀಕ್ಷೆಗಳ ಕುರಿತು ಸಂಕ್ಷಿಪ್ತ ಮಾಹಿತಿಯನ್ನಾದರೂ ನೀಡಬೇಕು. ಪಿಯು ಪಠ್ಯಕ್ರಮದಲ್ಲಿ ಈಗಿರುವ ಪಠ್ಯದ ಜೊತೆ ಜೊತೆಗೆ ಅಂತರ್ಗತವಾಗಿ ಈ ಪರೀಕ್ಷೆಗಳ ಬಗ್ಗೆಯೂ ಉಪನ್ಯಾಸಕರು ತರಬೇತಿ ನೀಡಬೇಕು. ಈ ನಿಟ್ಟಿನಲ್ಲಿ ಉಪನ್ಯಾಸಕರಿಗೂ ಅಗತ್ಯ ಮಾಹಿತಿ, ತರಬೇತಿ ನೀಡಬೇಕು. ಕನಿಷ್ಟ ಶುದ್ಧ ವಿಜ್ಞಾನದಲ್ಲಿ ವಿದ್ಯಾರ್ಥಿಗಳಿಗೆ ಅಸಕ್ತಿ ಬೆಳೆಯುವಂತೆ ಮಾಡಲೇಬೇಕು. ಧರ್ಮಗಳ ಹಸ್ತಕ್ಷೇಪದಿಂದ ವೈಜ್ಞಾನಿಕ ಮನೋಭಾವ ಕುಂಠಿತವಾಗುತ್ತದೆ, ಸಂಶೋಧನೆಗೆ ಕೇಂದ್ರ ಹಣವನ್ನೇ ಕೊಡುವುದಿಲ್ಲ ಎಂದು ಬೊಬ್ಬೆ ಹೊಡೆಯುವ ಬುದ್ಧಿಜೀವಿ ವಿಜ್ಞಾನಿಗಳು ಈ ಬಗ್ಗೆ ಯೋಚಿಸಲು ಇದು ಸಕಾಲ ಎನಿಸುತ್ತದೆ.
ತುರುವೇಕೆರೆ ಪ್ರಸಾದ್