ಪ್ರಶ್ನೆ- ಪ್ಯೂರ್ ಲವ್ ಅಂದರೇನು?
ಉತ್ತರ- ಜೀವನ ಪರ್ಯಂತ ಒಂದೇ ಹುಡುಗಿಯನ್ನು ಲವ್ ಮಾಡುವುದಕ್ಕೆ ಪ್ಯೂರ್ ಲವ್ ಅಂತಾರೆ.
– ಮೇಲಿನ ಈ ಪ್ರಶ್ನೋತ್ತರ ಅಪ್ಪ-ಮಗನ ನಡುವಿನದ್ದು. ಚಿಕ್ಕಂದಿನಿಂದಲೂ ರೇಡಿಯೋ ಕೇಳುವ ಹುಚ್ಚು ಆ ಹುಡುಗನದ್ದು. ಹಾಗೊಮ್ಮೆ ರೇಡಿಯೋದಲ್ಲಿ ಪದೇ ಪದೇ ಬರುತ್ತಿದ್ದ ಪದವೊಂದನ್ನು ಕೇಳುವ ಆ ಹುಡುಗ, ಒಮ್ಮೆ ತನ್ನ ಅಪ್ಪನ ಬಳಿ ಬಂದು, “ಅಪ್ಪ ಆ ಪದದ ಅರ್ಥವೇನು’ ಎಂಬ ಪ್ರಶ್ನೆ ಮುಂದಿಟ್ಟಾಗ, ಅಪ್ಪನ ಉತ್ತರ ಹೀಗಿರುತ್ತೆ.’ ಹಾಗಾದರೆ, ಈ ಪ್ರಶ್ನೋತ್ತರ ಎಲ್ಲಿಯದ್ದು ಎಂಬುದಕ್ಕೆ “ಅಂದವಾದ ‘ ಸಿನಿಮಾ ಉತ್ತರ.
ಹೌದು, ಇದೇ ಮೊದಲ ಸಲ ಹೊಸಬರು ಸೇರಿ ಮಾಡಿರುವ ಚಿತ್ರವಿದು. ಸದ್ಯಕ್ಕೆ ಸೆನ್ಸಾರ್ ಅಂಗಳದಲ್ಲಿದ್ದು, ಬಿಡುಗಡೆ ತಯಾರಿಯಲ್ಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈ ಅಂತ್ಯದಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕ ಚಲ ನಿರ್ದೇಶಕರಾಗಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿರುವ ಚಲ, ಚಿತ್ರದ ಬಗ್ಗೆ ಹೇಳುವುದು ಇಷ್ಟು. “ಪ್ಯೂರ್ ಲವ್ ಅನ್ನೋದು ಈ ಕಾಲಕ್ಕೆ ಸರಿಹೊಂದುತ್ತಾ? ಒಂದೇ ಹುಡುಗಿಯನ್ನು ಲವ್ ಮಾಡುವುದು ಈಗಿನ ಕಾಲದಲ್ಲಿ ಕಷ್ಟನಾ, ಸುಲಭನಾ ಎಂಬುದನ್ನು ಹಾಸ್ಯಮಯವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಜಾನರ್ ಸಿನಿಮಾ ಆಗಿದ್ದು, ಚಿತ್ರದಲ್ಲಿ ಅನುಷಾ ನಾಯಕಿಯಾಗಿದ್ದಾರೆ. ಜೈ ಎಂಬ ಹೊಸ ಪ್ರತಿಭೆ ನಾಯಕನಾಗಿ ಎಂಟ್ರಿಕೊಟ್ಟಿದ್ದಾನೆ. ಅವರಿಬ್ಬರದು ಇಲ್ಲಿ ಲವ್ ಪ್ಯೂರ್ ಆಗಿ ಉಳಿಯುತ್ತಾ ಇಲ್ಲವಾ ಎಂಬ ಪ್ರೀತಿ ಕಥೆಯನ್ನೇ ಇಲ್ಲಿ ಹೊಸದಾಗಿ ಹೇಳುವ ಪ್ರಯತ್ನ ಮಾಡಿರುವುದಾಗಿ ಹೇಳುತ್ತಾರೆ ಚಲ.
ಸದ್ಯಕ್ಕೆ ಆಡಿಯೋ ಬಿಡುಗಡೆಗೆ ಸಜ್ಜಾಗಿರುವ ಚಿತ್ರಕ್ಕೆ ಗುರುಕಿರಣ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಎ.ಆರ್.ರೆಹಮಾನ್ ಅವರ ಜೊತೆ ಕೆಲಸ ಮಾಡಿರುವ ವಿಕ್ರಮ್ ವರ್ಮನ್ ಸಂಗೀತವಿದ್ದು, ಜಯಂತ್ ಕಾಯ್ಕಿಣಿ, ಯೋಗರಾಜ್‌ಭಟ್, ಹೃದಯಶಿವ ಎಂಟು ಗೀತೆಗಳನ್ನು ರಚಿಸಿದ್ದಾರೆ. ಇದುವರೆಗೆ ಖಳ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡಿದ್ದ ಹರೀಶ್ ರಾಯ್ ಇಲ್ಲಿ ನಾಯಕನ ಒಳ್ಳೆಯ ತಂದೆಯಾಗಿ ನಟಿಸಿದ್ದಾರೆ. ಶ್ರೀಧರ್ ನಾಯಕಿಯ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ಕೊಡಚಾದ್ರಿ, ಸಕಲೇಶಪುರ ಸುತ್ತಮುತ್ತ ಚಿತ್ರೀಕರಣವಾಗಿದ್ದು, ಬಹುತೇಕ ಚಿತ್ರ ಮಳೆ ಮತ್ತು ಮಂಜುವಿನಲ್ಲೇ ಚಿತ್ರಿತಗೊಂಡಿದೆ. ಫ್ಯಾಷನ್ ಡಿಸೈನರ್ ಆಗಿರುವ ಮಧು ರಾಜ್ ನಿರ್ಮಾಕರಾಗಿದ್ದು, ಅವರಿಗೆ ಇದು ಮೊದಲ ಚಿತ್ರ.