Advertisement

ಅಚ್ಚ ಕನ್ನಡಿಗರ ಸ್ವಚ್ಛ ಚಿತ್ರ…

10:04 PM Aug 08, 2019 | mahesh |

‘ಡಾಟರ್‌ ಆಫ್ ಪಾರ್ವತಮ್ಮ’ ಮತ್ತು ‘ಸೂಜಿದಾರ’ ಚಿತ್ರಗಳ ನಂತರ ನಟಿ ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಮತ್ತೂಂದು ನಾಯಕಿ ಪ್ರಧಾನ ಚಿತ್ರ ‘ಕನ್ನಡ್‌ ಗೊತ್ತಿಲ್ಲ’ ತೆರೆಗೆ ಬರಲು ಸಿದ್ಧವಾಗುತ್ತಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿ ಸೆನ್ಸಾರ್‌ ಮುಂದಿರುವ ‘ಕನ್ನಡ್‌ ಗೊತ್ತಿಲ್ಲ’ ಚಿತ್ರದ ಮೊದಲ ಟೀಸರ್‌ ಅನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ.

Advertisement

‘ರಾಜಕುಮಾರ’ ಖ್ಯಾತಿಯ ನಿರ್ದೇಶಕ ಸಂತೋಷ್‌ ಆನಂದರಾಮ್‌ ‘ಕನ್ನಡ್‌ ಗೊತ್ತಿಲ್ಲ’ ಚಿತ್ರದ ಮೊದಲ ಟೀಸರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಇದೇ ವೇಳೆ ಮಾತನಾಡಿದ ಸಂತೋಷ್‌ ಆನಂದರಾಮ್‌, ‘ನನಗೆ ಈ ಚಿತ್ರತಂಡದಲ್ಲಿ ಯಾರೂ ಸ್ನೇಹಿತರಲ್ಲ. ಆದರೆ ಇದು ಕನ್ನಡದ ಚಿತ್ರ ಎನ್ನುವ ಅಭಿಮಾನದಿಂದ ಚಿತ್ರದ ಟೀಸರ್‌ ಬಿಡುಗಡೆ ಮಾಡಲು ಒಪ್ಪಿಕೊಂಡೆ. ಕನ್ನಡದ ಮೇಲಿನ ಅಭಿಮಾನ ಈ ಚಿತ್ರದ ಟೀಸರ್‌ ಬಿಡುಗಡೆಗೆ ಕರೆದುಕೊಂಡು ಬಂದಿದೆ.

‘ಕನ್ನಡ್‌ ಗೊತ್ತಿಲ್ಲ’ ಚಿತ್ರದ ಟೀಸರ್‌ ನೋಡಿ ಖುಷಿಯಾಯಿತು. ಟೀಸರ್‌ ತುಂಬಾ ಚೆನ್ನಾಗಿ ಬಂದಿದೆ. ಚಿತ್ರದಲ್ಲಿ ಏನಿರಬಹುದು ಎನ್ನುವ ಕುತೂಹಲವನ್ನು ಮೂಡಿಸುವಂತಿದೆ’ ಎಂದು ಟೀಸರ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಖಾಸಗಿ ಎಫ್.ಎಂ ವಾಹಿನಿಯಲ್ಲಿ ರೇಡಿಯೋ ಜಾಕಿ ಆಗಿ ಕೇಳುಗರಿಗೆ ಪರಿಚಯವಿದ್ದ ಮಯೂರ್‌ ರಾಘವೇಂದ್ರ ‘ಕನ್ನಡ್‌ ಗೊತ್ತಿಲ್ಲ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಮಯೂರ್‌ ರಾಘವೇಂದ್ರ, ‘ನಾನು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಅನುಭವಕ್ಕೆ ಬಂದ, ನಾನು ಸನ್ನಿವೇಶಗಳೆ ‘ಕನ್ನಡ್‌ ಗೊತ್ತಿಲ್ಲ’ ಚಿತ್ರ ಮಾಡಲು ಕಾರಣವಾಯ್ತು. ಒಮ್ಮೆ ಮಧ್ಯರಾತ್ರಿ ಈ ಸಂಗತಿಗಳನ್ನೇ ಇಟ್ಟುಕೊಂಡು ಯಾಕೆ ಸಿನಿಮಾ ಮಾಡಬಾರದು ಅನ್ನೋ ಐಡಿಯಾ ಬಂತು.

ಮೊದಲು ಟೈಟಲ್ ಫ್ಲ್ಯಾಶ್‌ ಆಯಿತು. ಅದನ್ನು ಬರೆದಿಟ್ಟುಕೊಂಡು ನಂತರ ಚಿತ್ರದ ಕಥೆ ಶುರು ಮಾಡಿದೆ. ಇದೊಂದು ನಾಯಕಿ ಪ್ರಧಾನ ಚಿತ್ರ. ನನ್ನ ಕಥೆಗೆ ಕನ್ನಡದ ನಟಿಯರೇ ಬೇಕಾಗಿತ್ತು. ಆಗ ಹರಿಪ್ರಿಯಾ ಅವರನ್ನು ಅಪ್ರೋಚ್ ಮಾಡಿದೆ. ಕಥೆ ಕೇಳಿದ ಹರಿಪ್ರಿಯಾ ಕೂಡ ಇದರಲ್ಲಿ ನಟಿಸಲು ಒಪ್ಪಿದರು. ನಂತರ ಚಿತ್ರತಂಡಕ್ಕೆ ಒಬ್ಬೊಬ್ಬರಾಗಿ ಸೇರ್ಪಡೆಯಾದರು. ಅಂತಿಮವಾಗಿ ಎಲ್ಲವೂ ಅಂದುಕೊಂಡಂತೆ ನಡೆದು ಈಗ ‘ಕನ್ನಡ್‌ ಗೊತ್ತಿಲ್ಲ’ ಚಿತ್ರ ಬಿಡುಗಡೆಗೆ ಹಂತಕ್ಕೆ ಬಂದು ನಿಂತಿದೆ’ ಎಂದು ಚಿತ್ರದ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ‘ಕನ್ನಡ್‌ ಗೊತ್ತಿಲ್ಲ’ ಚಿತ್ರಕ್ಕೆ ಗಿರಿಧರ್‌ ದಿವಾನ್‌ ಛಾಯಾಗ್ರಹಣ ಮತ್ತು ಸಂಕಲನವಿದೆ. ಚಿತ್ರದ ಹಾಡುಗಳಿಗೆ ನಕುಲ್ ಅಭ್ಯಂಕರ್‌ ಸಂಗೀತ ಸಂಯೋಜಿಸಿದ್ದಾರೆ. ಒಟ್ಟಾರೆ ಸಸ್ಪೆನ್ಸ್‌ ಕಂ ಕ್ರೈಂ -ಥ್ರಿಲ್ಲರ್‌ ಕಥಾಹಂದರದ ‘ಕನ್ನಡ್‌ ಗೊತ್ತಿಲ್ಲ’ ಚಿತ್ರ ಮುಂದಿನ ತಿಂಗಳ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ.

ಜಿ.ಎಸ್‌.ಕಾರ್ತಿಕ ಸುಧನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next