Advertisement

ಶುದ್ಧ-ಸ್ಪಷ್ಟ ಕನ್ನಡ ಉಳಿಸಿ-ಬೆಳೆಸಬೇಕಿದೆ; ಮಹೇಶ ಜೋಶಿ

05:48 PM Dec 09, 2021 | Team Udayavani |

ಧಾರವಾಡ: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಶುದ್ಧ ಕನ್ನಡ ಭಾಷೆ ಮಾಡುವವರ ಸಂಖ್ಯೆ ಶೇ.26 ಮಾತ್ರ ಇದ್ದು, ಅದರಲ್ಲೂ ಅ ಕಾರ ಮತ್ತು ಹ ಕಾರ ವ್ಯತ್ಯಾಸ ತಿಳಿದ ಕನ್ನಡಿಗರು ತುಂಬಾ ಕಡಿಮೆಯೇ ಇದ್ದಾರೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅಭಿಪ್ರಾಯ ಪಟ್ಟರು.

Advertisement

ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಡಾ|ಲಿಂಗರಾಜ ಅಂಗಡಿ ಅವರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಾದೇಶಿಕವಾರು ಭಾಷೆಯ ಉಚ್ಛಾರ ಬದಲಾಗುತ್ತದೆ. ಆದರೆ ಶುದ್ಧ-ಸ್ಪಷ್ಟ ಕನ್ನಡವನ್ನು ನಾವು ಉಳಿಸಿ-ಬೆಳೆಸಬೇಕಿದೆ. ಇಡೀ ಜಗತ್ತಿನಲ್ಲಿ ಸಂಸ್ಕೃತ ಮತ್ತು ಕನ್ನಡ ಭಾಷೆಗಳು ಮಾತ್ರ ಶುದ್ಧ ಎಂಬ ಕೀರ್ತಿಗೆ ಪಾತ್ರವಾಗಿವೆ. ಇದನ್ನು ಉಳಿಸಿಕೊಂಡು ಹೋಗುವ ಹೊಣೆ ಕನ್ನಡಿಗರಾದ ನಮ್ಮ ಮೇಲಿದೆ ಎಂದರು.

ಬರುವ ವರ್ಷದೊಳಗೆ 3ಲಕ್ಷ ಹೊಸ ಸದಸ್ಯರನ್ನು ಮಾಡುವ ಗುರಿ ಹೊಂದಲಾಗಿದೆ. ರಾಜ್ಯದ ಪ್ರತಿ ಗ್ರಾಮಗಳಲ್ಲಿ ಕೂಡ ನಾನು ಪಾದಯಾತ್ರೆ ಮಾಡುತ್ತೇನೆ. ಮುಂದಿನ ಬಾರಿ ಮೊಬೈಲ್‌ ಆ್ಯಪ್‌ ಬಳಸಿ ಸುರಕ್ಷಿತವಾಗಿ ಮತ ಚಲಾಯಿಸುವಂತೆ ಮಾಡುತ್ತೇನೆ ಎಂದರು. ದೂರದರ್ಶನದಲ್ಲಿ ಚಂದನ ವಾಹಿನಿಯನ್ನು ಟಿವಿ 9 ಎಂದು ಕರೆಯುತ್ತಿದ್ದರು. ಆದರೆ ಅತ್ತರ್‌ (ಸುಗಂಧದ್ರವ್ಯ)ದಂತೆ ತಲೆ ನೋವು ಬರಿಸದೇ ಎಲ್ಲರಿಗೂ ಹಿತವಾದ ಕಂಪನ್ನೇ ಇದು ನೀಡುತ್ತಿತ್ತು. ಚಂದನ ಎಂದು
ಹೆಸರಿಟ್ಟು ಅದನ್ನು ಎಲ್ಲೆಡೆ ಪಸರಿಸುವಂತೆ ಮಾಡಿದೆ. ಅದೇ ಮಾದರಿಯಲ್ಲೇ ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯೋಧ್ಯೇಶಗಳನ್ನು ಈಡೇರಿಸುವ ಕೆಲಸ ಮಾಡುತ್ತೇನೆ ಎಂದರು.

ಕಸಾಪ ಚುನಾವಣೆಯಲ್ಲಿ ನಾನು ಒಂದು ಪಕ್ಷದ ಬೆಂಬಲ ಪಡೆದುಕೊಂಡೆ ಎನ್ನುವ ಆರೋಪವಿದೆ. ಆದರೆ ನಾನು ಯಾವುದೇ ಪಕ್ಷದ ಬೆಂಬಲ ಪಡೆಯದೇ ಎಲ್ಲ ಸಿದ್ಧಾಂತಗಳನ್ನು ಒಪ್ಪಿಕೊಂಡು ಕೆಲಸ ಮಾಡುತ್ತೇನೆ.
ಮಹೇಶ ಜೋಶಿ,
ಕಸಾಪ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next