ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಬಳಸಿದ್ದ ಸುಧಾರಿತಾ ಸ್ಫೋಟಕ ಸಾಧನಾ (ಐಇಡಿ) ತಯಾರಿಸಲು ಬೆಂಗಳೂರಲ್ಲೇ ಕಚ್ಚಾ ವಸ್ತುಗಳನ್ನು ಖರೀದಿಸಲಾಗಿದೆ ಎಂಬುದು ತನಿಖಾ ಸಂಸ್ಥೆಗಳ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸ್ಫೋಟ ನಡೆದ ಸ್ಥಳದಲ್ಲಿ ಬ್ಯಾಟರಿಗಳು, ಗನ್ ಪೌಡರ್, ಪೋಟ್ಯಾಷಿಯಂ ನೈಟ್ರೇಟ್, ಹೈಡ್ರೋಜನ್ ಪರಾಕ್ಸೆ„ಡ್ ಮತ್ತು ಟೈಮರ್ ಹಾಗೂ ಬಿಸಿಯಾಗುವ ಬಲ್ಬ್ ಗಳು ಪತ್ತೆಯಾಗಿದ್ದವು. ಈ ಎಲ್ಲ ವಸ್ತುಗಳನ್ನು ಸ್ಥಳೀಯವಾಗಿಯೇ ನೇರವಾಗಿ ಅಥವಾ ಆನ್‌ಲೈನ್ ಮೂಲಕ ಖರೀದಿಸಲಾಗಿದೆ ಎಂಬ ಮಾಹಿತಿ ಸ್ಪಷ್ಟವಾಗಿದೆ.
ಈ ಹಿಂದೆ ನಡೆದ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಮತ್ತು ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ನಡೆದ ಪ್ರಾಯೋಗಿಕ ಸ್ಫೋಟದಲ್ಲೂ ಇದೇ ರಾಸಾಯಿಕ ವಸ್ತುಗಳನ್ನು ಬಳಸಲಾಗಿದೆ. ರಾಮೇಶ್ವರ ಪ್ರಕರಣದಲ್ಲಿ ಪ್ರಾಥಮಿಕ ಮಾಹಿತಿ ಪ್ರಕಾರ, ಕೃತ್ಯದಲ್ಲಿ ಐಸಿಸ್ ಸಂಘಟನೆ ಕೈವಾಡದ ಬಗ್ಗೆ ಮಾಹಿತಿ ಸಿಕ್ಕಿದೆ.
ಹೀಗಾಗಿ ಶಂಕಿತ ವ್ಯಕ್ತಿ ಹಾಗೂ ಆತನ ಸಹಚರರು ಸ್ಥಳೀಯವಾಗಿ ರಾಸಾಯನಿಕ ವಸ್ತುಗಳನ್ನು ಖರೀದಿಸಿ ನಗರದ ಹೊರವಲಯ ಅಥವಾ ಗಡಿಭಾಗದಲ್ಲೇ ತಯಾರು ಮಾಡಿರುವ ಸಾಧ್ಯತೆ ಇದೆ. ಅದಕ್ಕೆ ಪುಷ್ಟಿ ನೀಡುವಂತೆ ಶಂಕಿತ ವ್ಯಕ್ತಿಯ ಚಲನವಲನಗಳು ಸೆರೆಯಾಗಿರುವ ಸಿಸಿ ಕ್ಯಾಮೆರಾ ದೃಶ್ಯಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರಿಗೆ ಸಿಕ್ಕಿರುವ ದೃಶ್ಯಾವಳಿಗಳಲ್ಲಿ ಆರೋಪಿ ರಾಮೇಶ್ವರ ಹೋಟೆಲ್‌ಗಿಂತ ಹಿಂದೆ ಎರಡು ಕಿಲೋ àಮೀಟರ್ ದೂರದಲ್ಲೇ ಬಸ್ ಹತ್ತಿರುವುದು ಸೆರೆಯಾಗಿದೆ. ಸಿಟಿಯಿಂದ ಹೊರಡುವ 500ಡಿ ಬಸ್‌ನಲ್ಲಿ ಆರೋಪಿ ಬಸ್ ಹತ್ತಿ, ಕುಂದಲಹಳ್ಳಿ ಬಸ್ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಹೋಟೆಲ್‌ಗೆ ನಡೆದುಕೊಂಡೇ ಹೋಗಿದ್ದಾನೆ. ಮತ್ತೂಂದೆಡೆ ಮುಖ ಚಹರೆ ಪತ್ತೆಯಾಗಬಾರದೆಂಬ ಕಾರಣಕ್ಕೆ ಶಂಕಿತ ಬಸ್ ಏರಿದಾಗ, ಮುಖಕ್ಕೆ ಧರಿಸಿದ್ದ ಮಾಸ್ಕ್, ಟೋಪಿ ಹಾಗೂ ಬ್ಯಾಗ್ ತೆಗೆಯಲು ಮುಂದಾಗಿದ್ದಾನೆ. ಆದರೆ ಬಸ್‌ನಲ್ಲಿ ಸಿಸಿ ಕ್ಯಾಮರಾ ಇರುವುದು ಗಮನಿಸುತ್ತಿದ್ದಂತೆ ಮತ್ತೆ ಮಾಸ್ಕ್, ಟೋಪಿ, ಕಣ್ಣಿನ ಗ್ಲಾಸ್ ಸರಿ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಗಡಿಭಾಗವೇ ಆಯ್ಕೆ ಏಕೆ?
ರಾಮೇಶ್ವರಂ ಕೆಫೆಯಿಂದ ಹೊಸೂರು ಮಾರ್ಗವಾಗಿ ನೆರೆ ರಾಜ್ಯಕ್ಕೆ ತೆರಳಲು ಕನಿಷ್ಠ 1 ಗಂಟೆ ಬೇಕು. ಹೀಗಾಗಿ ಶಂಕಿತ, ತಾನೂ ಹೋಟೆಲ್‌ನಿಂದ ತೆರಳಿ ಒಂದು ಗಂಟೆ ಬಳಿಕ ಬಾಂಬ್ ಸ್ಫೋಟಿಸಲು ಟೈಮರ್ ಅಳವಡಿಸಿದ್ದಾನೆ. ಸ್ಫೋಟದ ಬಳಿಕ ಪೊಲೀಸರು ಸ್ಥಳಕ್ಕೆ ಬರುವ ಸಮಯ ಹಾಗೂ ನಗರಾದ್ಯಂತ ಅಲರ್ಟ್ ಆಗಿ ನಾಕಾಬಂದಿ ಹಾಕಲು ಕನಿಷ್ಠ 10-15 ನಿಮಿಷ ಬೇಕು. ಅಷ್ಟರಲ್ಲಿ ಗಡಿ ದಾಟಬಹುದು ಎಂಬುದು ಶಂಕಿತನ ಲೆಕ್ಕಚಾರ ಇರಬಹುದು ಎಂದು ತನಿಖಾ ಸಂಸ್ಥೆಗಳು ಅನುಮಾನ ವ್ಯಕ್ತಪಡಿಸಿವೆ.700ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಜತೆಗೆ ತಮಿಳುನಾಡಿನ ಕ್ರೈಂ ಬ್ರ್ಯಾಂಚ್ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ, ತನಿಖಾ ಸಂಸ್ಥೆಗಳಿಗೆ ತಮ್ಮ ವ್ಯಾಪ್ತಿಯ ಸಿಸಿ ಕ್ಯಾಮೆರಾ ದೃಶ್ಯಗಳನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.