Advertisement

ಯುಗಾದಿ ಹಬ್ಬಕ್ಕೆ ಖರೀದಿ ಬಲು ಜೋರು

11:01 AM Apr 05, 2019 | Naveen |

ಸುರಪುರ: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಎನ್ನುವ ಕವಿವಾಣಿಯಂತೆ ಯುಗಾದಿ ಹಬ್ಬ ಬರುತ್ತಿದ್ದಂತೆ ತಾಲೂಕಿನಾದ್ಯಂತ ಜನರಲ್ಲಿ ಸಂತಸ ಸಂಭ್ರಮ ಮನೆ ಮಾಡಿದೆ. ನವ ಮನ್ವಂತರ ಸ್ವಾಗತಿಸಲು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ.

Advertisement

ಹಿಂದುಗಳ ಪಾಲಿಗೆ ಎಲ್ಲ ಹಬ್ಬಗಳಲ್ಲಿ ಯುಗಾದಿ ಅತ್ಯಂತ ದೊಡ್ಡ ಹಬ್ಬ. ಎರಡು ಮೂರು ದಿನ ಮೊದಲೇ ಎಲ್ಲಡೆ ಹಬ್ಬದ ವಾತಾವರಣ ಸಂಭ್ರಮ ಕಳೆ ಕಟ್ಟುತ್ತದೆ. ಹೊಸ ಬಟ್ಟೆ ಖರೀದಿ, ಹಣ್ಣು, ಬೇವಿನ ಮಡಿಕೆ, ಎಚ್ಚ ಸೇರಿದಂತೆ ವಿವಿಧ ಸಾಮಾಗ್ರಿ ಖರೀದಿಗಳಲ್ಲಿ ತೊಡಗಿಸಿಕೊಳ್ಳುವ ಜನರು ಹಬ್ಬದ ಸಿದ್ಧತೆಯಲ್ಲಿ ತೊಡಗುತ್ತಾರೆ.

ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ನಗರದ ಮಾರುಕಟ್ಟೆ ಜನಸಂದಣಿ ಕಂಡು ಬಂತು. ಅಂಗಡಿ ಮುಂಗಟ್ಟುಗಳು ಜನರಿಂದ ತುಂಬಿದ್ದವು. ಬಸ್‌ ನಿಲ್ದಾಣ ರಸ್ತೆ, ಗಾಂಧಿ ವೃತ್ತ, ಪಟೇಲ್‌ ಚೌಕ್‌. ವೇಣುಗೋಲಾಸ್ವಾಮಿ ರಸ್ತೆ, ಅರಮನೆ ಮಾರ್ಗಗಳಲ್ಲಿ ಜನರು ಹಬ್ಬದ ಸಾಮಗ್ರಿ ಖರೀದಿಯಲ್ಲಿ ತೊಡಗಿರುವ ದೃಶ್ಯ ಕಂಡು ಬಂದಿತು.

ತಾಲೂಕಿನ ವಿವಿಧ ಗ್ರಾಮಗಳಿಂದ ಜನರು ಹಬ್ಬದ ಖರೀದಿಗಾಗಿ ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಹೀಗಾಗಿ ನಗರದ ಎಲ್ಲ ಬೀದಿಗಳಲ್ಲಿ ಜನರೇ ಜನರು.

ವಾಹನ ಸಂಚಾರ ದಟ್ಟವಾಗಿತ್ತು. ಇದರಿಂದ ರಸ್ತೆ ಸಂಚಾರದಲ್ಲಿ ವ್ಯತ್ಯಯ ಕಂಡು ಬಂದಿತು. ಬಟ್ಟೆ ಅಂಗಡಿಗಳು ಜನರಿಂದ ತುಂಬಿದ್ದವು. ಸಿದ್ದ ಉಡುಪುಗಳ ಅಂಗಡಿಗಳಲ್ಲಿ ಪಾಲಕರು ಮಕ್ಕಳಿಗೆ ಬಟ್ಟೆ ಕೊಡಿಸುವಲ್ಲಿ ನಿರತರಾಗಿದ್ದರು. ಬಿಸಲಿನ ಪ್ರಕರತೆಯಿಂದ ಧಣಿವಾರಿಸಿಕೊಳ್ಳಲು ಕೆಲವರು ಅಂಗಡಿಗಳ ನೆರಳು ಆಶ್ರಯಿಸಿದ್ದರು.

Advertisement

ಕರಬೂಜ್‌, ಕಲ್ಲಂಗಡಿ. ದ್ರಾಕ್ಷಿ, ಚಿಕ್ಕು, ಸೇಬು, ಬಾಳೆಹಣ್ಣು, ಖರ್ಜೂರ, ಬೆಳವಲ, ಮಾವಿನಕಾಯಿ ಸೇರಿದಂತೆ ವಿವಿಧ ಹಣ್ಣುಗಳನ್ನು ರಸ್ತೆ ಬದಿ ರಾಸಿ ರಾಸಿ ಹಾಕಲಾಗಿತ್ತು. ಬಂಡಿಯಲ್ಲಿ ಬೇವಿನ ಎಚ್ಚ, ಮಡಿಕೆ ಮಾರಾಟ ಜೋರಾಗಿತ್ತು, ಹಣ್ಣು, ಮಡಿಕೆ ಮತ್ತು ಬೇವಿನ ಎಚ್ಚ ಖರೀದಿಯಲ್ಲಿ ಜನರು ನಾ ಮುಂದು ತಾ ಮುಂದು ಎನುವಂತೆ ಮುಗಿಬಿದಿದ್ದರು. ವಿವಿಧ ಸಾಮಗ್ರಿಗಳ ಮಾರಾಟ ಭರ್ಜರಿಯಾಗಿ ನಡೆಯಿತು. ಸಂಜೆವರೆಗೂ ಜನರು ವಿವಿಧ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು. ಬೇಗನೆ ಮಾರಾಟ ಮಾಡಿದ ಕೆಲ ವ್ಯಾಪಾರಿಗಳ ಇನ್ನಷ್ಟು ಸಾಮಗ್ರಿ ತಂದು ಜಮಾಯಿಸುತ್ತಿದ್ದರು.

ಏಲಕ್ಕಿ ಬಾಳೆಹಣ್ಣಿಗೆ ಖರೀದಿಗೆ ಜನರು ಮುಗಿಬಿದಿದ್ದರು ಹೀಗಾಗಿ ಏಲಕ್ಕಿ ಬಾಳೆ ಹಣಿಗೆ ಎಲ್ಲಿಲ್ಲದೆ ಬೇಡಿಕೆ ಕಂಡು ಬಂತು. ಕೆಲವರು ಸಿಗದ ಕಾರಣ ಸುತ್ತಾಡಿ, ಸುತ್ತಾಡಿ ಬಂದು ವಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಹೈಬ್ರಿಡ್‌ ಬಾಳೆ ಹಣ್ಣು ಖರೀದಿಸಿದರು.

ಬರಗಾಲದಿಂದ ಬೆಳೆ ಇಲ್ಲ ಕೈಯಲ್ಲಿ ಹಣವಿಲ್ಲ. ಆದರೂ ಹಬ್ಬ ಬಿಡುವಂತಿಲ್ಲ. ಹಣ್ಣು ಹಂಪಲು, ಬೇವಿನ ಎಚ್ಚ ಎಲ್ಲ ವಸ್ತುಗಳ ದರ ಹೆಚ್ಚಾಗಿದೆ. ಸಾವಿರ ರೂ. ತಂದ್ರು ಕೈ ಚೀಲ ತುಂಬ ಹಬ್ಬಕ್ಕ ಬೇಕಾಗುವಷ್ಟು ಸಾಮಗ್ರಿ ಬರುತ್ತಿಲ್ಲ.
.ನಾಗರೆಡ್ಡಿ ಯಾದಗಿರಿ,
ರತ್ತಾಳ ಗ್ರಾಮ ನಿವಾಸಿ

ಬರಗಾಲ ಎದುರಾದಾಗ ಜನರ ಕೈಯಾಗ ರೊಕ್ಕ ಇರುವುದಿಲ್ಲ. ಹಣ್ಣುಗಳ ರೇಟು ದುಬಾರಿಯಾಗ್ಯಾದ. ಮೊದಲಿನಂಗ ಮಾರಾಟ ಇಲ್ಲ. ಡಜನಗಟ್ಟಲ್‌ ಖರೀದಿ ಮಾಡುವವರು ಅರ್ಧ ಡಜನ್‌ ತಗೋಳೊಕತ್ಯಾರ. ಎರಡು ಮೂರು ಬೆಳವಲ ಬದಲು ಒಂದೇ ತಗೆದುಕೊಂಡು ಹೊಕ್ಕಾರ. ಹಿಂಗಾಗಿ ಹೇಳಿಕೊಳ್ಳುವಂತ ಲಾಭ ಇಲ್ಲ.
ಶೇಖಪ್ಪ ಮೇದಾ,
ಹಣ್ಣು ವ್ಯಾಪಾರಿ

ಸಿದ್ದಯ್ಯ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next