Advertisement

ಕ್ಯೂಆರ್‌ ಕೋಡ್‌ನಿಂದ ತೊಗರಿ ಖರೀದಿ ವಿಳಂಬ! ಮುಕ್ತ ಮಾರುಕಟ್ಟೆಯತ್ತ ಮುಖ

05:06 PM Jan 12, 2021 | Team Udayavani |

ರಾಯಚೂರು: ತೊಗರಿ ಖರೀದಿ ಕೇಂದ್ರಗಳಲ್ಲಾಗುತ್ತಿದ್ದ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಚೀಲಕ್ಕೂ ಸರ್ಕಾರ ಕ್ಯೂಆರ್‌ ಕೋಡ್‌ ನೀಡುತ್ತಿದ್ದು, ಇದರಿಂದ ಖರೀದಿ ವಿಳಂಬವಾಗುತ್ತಿದೆ. ಈಗಾಗಲೇ ಸುಮಾರು 12,600 ಸಾವಿರಕ್ಕೂ ಅಧಿ ಕ ರೈತರು ನೋಂದಣಿ ಮಾಡಿಸಿದ್ದು, ಖರೀದಿ ಶುರುವಾಗದ ಕಾರಣ ರೈತರು ಮುಕ್ತ ಮಾರುಕಟ್ಟೆಯತ್ತ ಮುಖ ಮಾಡುತ್ತಿದ್ದಾರೆ.

Advertisement

ಮುಕ್ತ ಮಾರುಕಟ್ಟೆಗಿಂತ ಉತ್ತಮ ಬೆಲೆ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಖರೀದಿ ಕೇಂದ್ರಗಳ ಮೂಲಕ ತೊಗರಿ ಖರೀದಿಸುತ್ತಿತ್ತು. ಆದರೆ, ಎಷ್ಟೇ ನಿಯಮ ರೂಪಿಸಿದರೂ ಇಲ್ಲೂ ಸಾಕಷ್ಟು ಅಕ್ರಮ ನಡೆಯುತ್ತಿತ್ತು. ಅರ್ಹ ರೈತರಿಗೆ ವಂಚನೆಯಾಗಿ ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುತ್ತಿದ್ದರು. ಇದನ್ನು ತಪ್ಪಿಸಲೆಂದೇ ಈ ಬಾರಿ ಪ್ರತಿ ಚೀಲದ ಮೇಲೂ ಕ್ಯೂಆರ್‌ ಕೋಡ್‌ ಮುದ್ರಿಸಲಾಗುತ್ತಿದೆ. ಇದರಿಂದ ಯಾವ ರೈತರಿಂದ ಎಷ್ಟು ತೊಗರಿ ಖರೀದಿಯಾಗಿದೆ ಎಂಬ ನಿಖರ ಮಾಹಿತಿ ಸಿಗಲಿದ್ದು, ಅಕ್ರಮಕ್ಕೆ ಸಾಧ್ಯವಾದಷ್ಟು ಕಡಿವಾಣ ಬೀಳಲಿದೆ. ರೈತರ ನೋಂದಣಿ ಸಂಖ್ಯೆಯನ್ನು ಕ್ಯೂಆರ್‌ ಕೋಡ್‌ಗೆ ಹೊಂದಿಸಲಾಗುತ್ತಿದೆ. ಫ್ರೂಟ್ಸ್‌ ತಂತ್ರಾಂಶದ ಆಧಾರದಡಿ ಕೇಂದ್ರ ಸರ್ಕಾರದ ನಾಫೆಡ್‌ ಸಂಸ್ಥೆ ಖರೀದಿಗೆ ಮುಂದಾಗಿದೆ.

ಕಳೆದ ವರ್ಷ ಪ್ರತಿ ಪಹಣಿಗೆ ಕೇವಲ 10 ಕ್ವಿಂಟಲ್‌ ಮಾತ್ರ ತೊಗರಿ  ಖರೀದಿಸಲಾಗುತ್ತಿತ್ತು. ಈ ಬಾರಿ ಅದನ್ನು 20 ಕ್ವಿಂಟಲ್‌ಗೆ ಹೆಚ್ಚಿಸಲಾಗಿದೆ. ಅಲ್ಲದೇ, ಖರೀದಿ ಕೇಂದ್ರಗಳನ್ನು 35ರಿಂದ 42ಕ್ಕೆ ಹೆಚ್ಚಿಸಲಾಗಿದೆ. ಈಗಾಗಲೇ ಎಲ್ಲೆಡೆ ನೋಂದಣಿ ಕಾರ್ಯ ಶುರುವಾಗಿದೆ. ಕಳೆದ ವರ್ಷ ಇಷ್ಟೊತ್ತಿಗಾಗಲೇ
ಖರೀದಿ ಆರಂಭಿಸಲಾಗಿತ್ತು. ಕಳೆದ ವರ್ಷ ಸುಮಾರು 2.10 ಲಕ್ಷ ಕ್ವಿಂಟಲ್‌ ತೊಗರಿ ಖರೀದಿಸಲಾಗಿತ್ತು.

ಮುಕ್ತ ಮಾರುಕಟ್ಟೆಯತ್ತ ಚಿತ್ತ: ಈ ಬಾರಿ ಸರ್ಕಾರ 6 ಸಾವಿರ ರೂ. ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲೂ ವರ್ತಕರು ಇದೇ ದರಕ್ಕೆ ಖರೀದಿ ಮಾಡುತ್ತಿದ್ದಾರೆ. ಈಗಾಗಲೇ ನೋಂದಣಿ ಮಾಡಿಸಿರುವ ರೈತರಿಂದ ಈವರೆಗೂ ತೊಗರಿ ಖರೀದಿ ಮಾಡಿರದ ಕಾರಣ ರೈತರು ಮುಕ್ತ ಮಾರುಕಟ್ಟೆಯತ್ತ ಮುಖ ಮಾಡುತ್ತಿದ್ದಾರೆ.

ವರ್ತಕರು ಕಮಿಶನ್‌ ಕಡಿತ ಮಾಡಿದರೂ ನಗದು ವ್ಯವಹಾರ ಮಾಡುವುದರಿಂದ ರೈತರಿಗೆ ನೇರ ಹಣ ಸಂದಾಯವಾಗುತ್ತಿದೆ. ಈ ಕಾರಣಕ್ಕೆ ಅವರು ಮುಕ್ತ ಮಾರುಕಟ್ಟೆಗೆ ಒಲವು ತೋರುತ್ತಿದ್ದಾರೆ. ಈಗ ನಿತ್ಯ 7-8 ಸಾವಿರ ಕ್ವಿಂಟಲ್‌ ತೊಗರಿ ಆವಕವಾಗುತ್ತಿದೆ.

Advertisement

ಇಳುವರಿ ಕುಂಠಿತ: ಜಿಲ್ಲೆಯಲ್ಲಿ ಈ ಬಾರಿಯೂ ಸಾಕಷ್ಟು ಪ್ರಮಾಣದಲ್ಲಿ ತೊಗರಿ ಬೆಳೆಯಲಾಗಿದೆ. ಆದರೆ, ಕಳೆದ ಮುಂಗಾರಿನಲ್ಲಿ ಸತತವಾಗಿ ಸುರಿದ ಮಳೆಯಿಂದ ಎಲ್ಲ ಬೆಳೆಗಳ ಇಳುವರಿ ಕುಂಠಿತಗೊಂಡಿದೆ. ತೊಗರಿ ಕೂಡ ನಿರೀಕ್ಷಿತ ಮಟ್ಟದಲ್ಲಿ ಬೆಳೆದಿಲ್ಲ. ಇದರಿಂದ ಈ ಬಾರಿ ಖರೀದಿ ಕೇಂದ್ರ ನೋಂದಣಿಯಲ್ಲೂ ಗಣನೀಯ ಪ್ರಮಾಣದ ಇಳಿಕೆಯಾಗಿದೆ. ಅಲ್ಲದೇ, ಕೆಲವೆಡೆ ತೊಗರಿ ಕಣಗಳು ಈಗ ನಡೆಯುತ್ತಿದ್ದು, ಮಾರುಕಟ್ಟೆಗೆ ಬರುವ ದರದಲ್ಲಿ
ಕಡಿಮೆಯಾಗಬಹುದು ಎನ್ನಲಾಗುತ್ತಿದೆ.

ಈಗಾಗಲೇ ಎಲ್ಲ ಖರೀದಿ ಕೇಂದ್ರಗಳಲ್ಲೂ ನೋಂದಣಿ ಪ್ರಕ್ರಿಯೆ ಶುರುವಾಗಿದೆ. ಜ.31ರವರೆಗೂ ನೋಂದಣಿಗೆ ಅವಕಾಶವಿದೆ. ಸರ್ಕಾರ ಕ್ಯೂಆರ್‌ ಕೋಡ್‌ ನೀಡುವ ಕಾರಣಕ್ಕೆ ಖರೀದಿ ಶುರುವಾಗಿಲ್ಲ. ಇನ್ನೊಂದೆರಡು ದಿನಗಳಲ್ಲಿ ಕ್ಯೂಆರ್‌ ಕೋಡ್‌ ಬರಬಹುದು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೋಂದಣಿಯಲ್ಲಿ ಸ್ವಲ್ಪ ಇಳಿಕೆಯಾಗಿದೆ.
*ನಾಗರಾಜ್‌,
ಮಾರ್ಕೆಂಟಿಗ್‌ ಫೆಡರೇಶನ್‌ ರಾಯಚೂರು

ವರದಿ:ಸಿದ್ಧಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next