ಯಾವುದೇ ವಸ್ತುವನ್ನು ಖರೀದಿಸುವ ಮೊದಲು, ಅದು ನಮಗೆ ಅಗತ್ಯವಾ ಎಂದು ಎರಡೆರಡು ಬಾರಿ ಯೋಚಿಸಬೇಕು. ಖರೀದಿಯನ್ನು ಯಾವುದೋ ಕಾರಣದಿಂದ ಸ್ವಲ್ಪ ದಿನಗಳ ಕಾಲ ಮುಂದೂಡಿದರೂ ಆ ನೆಪದಲ್ಲಿ ಸ್ವಲ್ಪ ಹಣ ಉಳಿಯಿತೆಂದೇ ಲೆಕ್ಕ…
ನಾವು ಎಷ್ಟೋ ಕೆಲಸಗಳನ್ನು ಮುಂದೂಡುತ್ತಲೇ ಇರುತ್ತೇವೆ. ಈ ಕೆಲಸವನ್ನು ನಾಳೆ ಮಾಡಿದರಾಯಿತು. ಹೇಗಿದ್ದರೂ ನಾಳೆ ಬಿಡುವಿದೆ, ಎನ್ನುವುದು ನಮ್ಮ ಮಾಮೂಲು ಜಾಯಮಾನವೇ ಆಗಿರುತ್ತದೆ. ಆದರೆ, ತುರ್ತು ಕೆಲಸ ಇದ್ದಾಗ ನಾವು ಮುಂದೂಡುವುದಿಲ್ಲ. ಅಂದರೆ ಯಾವುದನ್ನು ಈಗಲೇ ಮಾಡಬೇಕು, ಇನ್ನು ಯಾವುದು ನಿಧಾನಕ್ಕೆ ಮಾಡಿದರೂ ಸಾಕು ಎಂದು ನಾವು ಅರಿತಿರಬೆಕು. ಕೆಲವೊಂದು ಕಾರ್ಯಗಳನ್ನು ತಕ್ಷಣ ಮಾಡಬೇಕು. ಇನ್ನು ಕೆಲವು ಕೆಲಸಗಳಿಗೆ ನಿಧಾನವೇ ಪ್ರಧಾನ. ಏನಾದರೂ ಕಂಡ ತಕ್ಷಣ ಕೊಳ್ಳುವ ಮನೋಭಾವ ನಮಗಿದ್ದರೆ, ಅದರಿಂದ ಹೊರ ಬರುವುದು ನಮಗೇ ಕಷ್ಟ ಆಗುತ್ತಿದ್ದರೆ ಅದಕ್ಕಿರುವ ಸುಲಭ ಪರಿಹಾರ, ಅದನ್ನು ಮುಂದೂಡುವುದು.
ಈಗ ಹಬ್ಬಗಳ ಸಾಲು ಶುರು. ಎಲ್ಲಿ ನೋಡಿದರೂ ಸೇಲ್‌ಗಳೇ ರಾರಾಜಿಸುತ್ತಿವೆ. ಭಾರೀ ರಿಯಾಯಿತಿ, ತೀರುವಳಿ ಮಾರಾಟ, ಬೈ ಒನ್‌ಗೆಟ್ ಒನ್ ಎಂಬ ಬೋರ್ಡ್‌ಗಳನ್ನು ನೋಡಿದ ಯಾರಿಗಾದರೂ ಕೊಳ್ಳುವುದಕ್ಕೆ ಮುಂದಾಗಬೇಕೆಂದು ಅನ್ನಿಸುವುದು ಸಹಜ. ಈ ಸಹಜ ಬಯಕೆಯನ್ನು ಮುಂದೂಡಬಹುದೆ? ಒಮ್ಮೆ ಹೀಗೆ ಮುಂದೂಡಿದರೆ ಖರೀದಿಸಬೇಕೆಂಬ ನಮ್ಮ ಬಯಕೆಯೂ ಕ್ಷೀಣಿಸುತ್ತದೆ. ಕೊಂಡರೂ ಸರಿ, ಕೊಳ್ಳದಿದ್ದರೂ ಸರಿ ಎನ್ನುತ್ತೇವೆ. ನಮಗೆ ಅಷ್ಟು ಅಗತ್ಯ ಇಲ್ಲ ಎಂದು ಗೊತ್ತಿರುವ ಎಷ್ಟೋ ಖರ್ಚುಗಳನ್ನು ಮುಂದೂಡುವುದಕ್ಕೆ ನಾವು ಕಲಿತರೆ ಮುಂದಿನದು ಉಳಿತಾಯವಲ್ಲದೇ ಬೇರೆ ಅಲ್ಲ. ಅಗತ್ಯವಾದ ಖರ್ಚುಗಳನ್ನು, ಮಾಡಲೇ ಬೇಕಾದ ಖರ್ಚುಗಳನ್ನು ಮುಂದೂಡಬಾರದು. ಆಸ್ಪತ್ರೆ, ಮಕ್ಕಳಿಗೆ ಓದು… ಇಂಥವುಗಳನ್ನು ಖರೀದಿಸಲು, ಇವುಗಳ ಮೇಲೆ ಹಣ ವ್ಯಯಿಸಲು ಹಿಂದೆ ಮುಂದೆ ನೋಡಬಾರದು. ಅದೇ ಬಟ್ಟೆ, ಮನೆಗೆ ಬೇಕಾದ ಎಷ್ಟೋ ಅಲಂಕಾರಿಕ ಸಾಮಾನುಗಳು ಇವೆಲ್ಲವೂ ಅಗತ್ಯವಾದ ಖರ್ಚುಗಳು ಅಲ್ಲದೇ ಇರಬಹುದು.
ಏನೇ ಖರೀದಿ ಮಾಡುವಾಗಲೂ ಇದು ನಮಗೆ ಅಗತ್ಯವೋ, ಅನಿವಾರ್ಯವೋ ಎಂದು ಪರಿಶೀಲಿಸಲು ಸಮಯ ಸಿಗುವುದಕ್ಕಾದರೂ ಖರೀದಿಯನ್ನು ಮುಂದೂಡಬೇಕು. ಈಗ ನಾವು ನೋಡುವ ಎಲ್ಲ ಅಂಗಡಿಗಳೂ ನಮಗೆ ಅನಿವಾರ್ಯ ಎನ್ನುವುದನ್ನು ಮಾರುತ್ತಿಲ್ಲ. ಮೊಬೈಲ್, ಬಟ್ಟೆ, ಉಪಕರಣಗಳು, ಮನೆ ಅಲಂಕಾರದ ವಸ್ತುಗಳು. ಕೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿಸುವ ಜಾಹೀರಾತುಗಳು. ಇಂತಹ ಸಂದರ್ಭದಲ್ಲಿ ಖರೀದಿಯನ್ನು ಮುಂದೂಡಿದರೆ ಸಾಕು, ಉಳಿತಾಯ ತನ್ನಿಂದ ತಾನೇ ಆಗುತ್ತದೆ. ಒಮ್ಮೆ ಉಳಿತಾಯ ಮಾಡುವುದು ಅಭ್ಯಾಸ ಆದರೆ ಆಮೇಲೆ ಖರ್ಚು ಮಾಡುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಕೊಳ್ಳುವುದನ್ನು ಮುಂದೂಡಿದಾಗ ಅಗತ್ಯಗಳನ್ನು ಇನ್ನಷ್ಟು ಸ್ಪಷ್ಟವಾಗಿ ಅರಿಯುತ್ತೇವೆ. ಆಗ ನಮಗೆ ಇದು ಬೇಕೋ ಬೇಡವೋ ಎಂದು ನಾವೇ ಪರಿಶೀಲಿಸಿಕೊಳ್ಳುತ್ತೇವೆ. ಇಂತಹ ಪರಿಶೀಲನೆಯೇ ನಮ್ಮ ಆರ್ಥಿಕ ಶಿಸ್ತಿನ ಮೂಲವೂ ಆಗಿರುತ್ತದೆ.
ಸುಧಾಶರ್ಮ ಚವತಿ