Advertisement
ಬಾಲ್ಯದ, ಮರೆಯಲಾಗದ ನೆನಪುಗಳು ಅಂದರೆ- ಇಲಿಗಳ ಕಾಟದ್ದೂ ಒಂದು. ಮನೆಯಲ್ಲಿದ್ದ ಕಾಳು, ಕಡ್ಡಿ, ಬ್ಯಾಗು, ಬಟ್ಟೆಗಳೆಲ್ಲ ತಮ್ಮ “ಹಕ್ಕಿನ ಆಸ್ತಿ’ ಎಂದು ಭಾವಿಸಿದ್ದ ಇಲಿಗಳು, ಎಲ್ಲವನ್ನೂ ತಿಂದು ಹಾಕುತ್ತಿದ್ದವು. ಆ ನೆಪದಲ್ಲಿ ಮನೆಮಂದಿಗೆಲ್ಲ ಸಾಕಷ್ಟು ತೊಂದರೆ ಕೊಡುತ್ತಿದ್ದವು. “ಇಲಿ’, ಗಣೇಶನ ವಾಹನ. ಅದನ್ನು ಕೊಲ್ಲಬಾರದು ಎಂದು ಕೆಲವರು ಹೇಳುತ್ತಿದ್ದರು. ಆದರೆ, ಈ ಮಾತಿಗೆ ಸಮ್ಮತಿಯ ಬದಲು ವಿರೋಧವೇ ಹೆಚ್ಚಿತ್ತು. ಇಲಿಗಳನ್ನು ಕಂಟ್ರೋಲ್ ಮಾಡಲು ಕೆಲವರು ಬೆಕ್ಕು ಸಾಕಿದರು. ಕೆಲವೊಮ್ಮೆ ಬೆಕ್ಕು ಹಾಲು, ಮೊಸರು, ಅನ್ನಕ್ಕೂ ಬಾಯಿ ಹಾಕುವುದು ಕಂಡು, ಇಲಿಯೇ ವಾಸಿ ಅಂದುಕೊಂಡು ಸುಮ್ಮನಾಗುತ್ತಿದ್ದರು.
ಮನೆಯಲ್ಲಿ ಅಲ್ಲಲ್ಲಿ ಹಿಕ್ಕೆ, ಕಸ, ಒಂಥರಾ ವಾಸನೆ ಕಂಡುಬಂದಾಗೆಲ್ಲ, “ವಿಪರೀತ ಆಯ್ತು ಇವುಗಳ ಕಾಟ.. ನಾಳೆ ಬಸವಾನಿಯಿಂದ ಒಂದಿಷ್ಟು ಇಲಿ ಪಾಷಾಣ ತರಬೇಕು’ ಎಂಬ ಅಪ್ಪನ ಮಾತು ಕೇಳಿಬರುತ್ತಿತ್ತು. ಆಗೆಲ್ಲಾ ಎಲ್ಲ ಕೆಲಸವನ್ನೂ ಮನೆಮಂದಿಯೇ ನಿರ್ವಹಿಸುತ್ತಿದ್ದದ್ದರಿಂದ ಅನಿವಾರ್ಯಕ್ಕಷ್ಟೇ ಪೇಟೆಗೆ ಹೋಗುತ್ತಿದ್ದದ್ದು. ಉಳಿದಂತೆ ಸದಾ ತೋಟ ಗ¨ªೆಯ ಕೆಲಸಗಳು ಇದ್ದೇ ಇರುತ್ತಿತ್ತು. ಯಕಶ್ಚಿತ್ ಇಲಿಗಳಿಗಾಗಿ ಮೂರು + ಮೂರು = ಆರು ಮೈಲು ದೂರ ನಡೆದು.. ಇಲಿ ಪಾಷಾಣ ತರುವುದು ಕಾರ್ಯಸಾಧುವೇನೂ ಆಗಿರಲಿಲ್ಲ. ಆದರೆ, ಅಪ್ಪನ ಆ ಹೇಳಿಕೆ ಮನೆಮಂದಿಗೆ ಸ್ವಲ್ಪ ಮಟ್ಟಿಗಾದರೂ ನೆಮ್ಮದಿ ಕೊಡುತ್ತಿದ್ದದ್ದು ಸತ್ಯ…
Related Articles
Advertisement
ಕಡಿಮಾಡು ಇಳಿಸಿದ ಜಾಗದಲ್ಲಿ ಹಾಕಿದ ವಿದ್ಯುತ್ ವೈರನ್ನು, ತನ್ನ ದಾರಿಗೆ ಅಡ್ಡವೆಂಬ ಕಾರಣಕ್ಕಾಗಿ ಇಲಿ ಪದೇ ಪದೆ ತುಂಡು ಮಾಡುತ್ತಿದ್ದವು. ಹೀಗೆ ವೈರ್ ಕಟ್ ಮಾಡುವಾಗ “ಇಲಿಗೆ ಶಾಕ್ ಹೊಡೆಯುತ್ತಿರಲ್ಲಿಲ್ಲವೇ ?’ ಎಂದು ಮನಸ್ಸು ಪ್ರಶ್ನಿಸುತ್ತಿತ್ತು… ಸಾಕಷ್ಟು ಬಾರಿ ಹೀಗಾದ ನಂತರ ಕಬ್ಬಿಣದ ಕೊಳವೆಯೊಂದರಲ್ಲಿ ವೈರ್ ತೂರಿಸಿ, ಪರಿಹಾರ ಕಂಡುಕೊಂಡದ್ದು ಒಂದು ನೆನಪು…..
ಮೂಷಿಕ ಸಂಹಾರ…ಹೈಸ್ಕೂಲ್ ಓದುವಾಗ, ಅಕ್ಕನ ಜೊತೆಯಲ್ಲಿ ಚಕ್ರಾನಗರದ ಕೆ.ಪಿ.ಸಿ. ಕಾಲೋನಿಯಲ್ಲಿ ಇದ್ದ ದಿನಗಳವು. ಅಕ್ಕ-ಪಕ್ಕದ ಮನೆಗಳಿಗೆ ಮಧ್ಯದಲ್ಲಿ ಒಂದು ಗೋಡೆ ಮಾತ್ರ ಅಡ್ಡ. ಪಕ್ಕದ ಮನೆಯಲ್ಲಿ ಮಾತಾಡಿದರೆ, ಶಬ್ದ ಮಾಡಿದರೆ ಸ್ಪಷ್ಟವಾಗಿ ನಮ್ಮನೆಗೆ ಕೇಳಿಸುತ್ತಿತ್ತು. ಅಂದಷ್ಟೆ ಮಾಸ್ತಿಕಟ್ಟೆಯಿಂದ ಚಕ್ರಾನಗರಕ್ಕೆ ಶಿಫ್ಟ್ ಆಗಿದ್ದೆವು. ಅಕ್ಕಪಕ್ಕದವರ ಪರಿಚಯವಿನ್ನೂ ಆಗಿರಲಿಲ್ಲ. ಮನೆಯಲ್ಲಿ ತಂದ ಸಾಮಾನು ಜೋಡಿಸಿ, ಸುಸ್ತಾಗಿ ಮಲಗಿದಾಗ ರಾತ್ರಿ 11 ದಾಟಿತ್ತು. ನಿದ್ದೆ ಹತ್ತಿತ್ತಷ್ಟೆ. ಇದ್ದಕ್ಕಿದ್ದಂತೆ ಪಕ್ಕದ ಮನೆಯಿಂದ ಹೊಡಿ, ಬಡಿ, ಸಾಯಿಸು, ಬಿಡಬೇಡ, ಅಲ್ಲಿ………. ಇಲ್ಲೀ…. ಎಂಬೆಲ್ಲ ಚೀರಾಟದ ಜೊತೆಯಲ್ಲಿ ಬಡಿಗೆಯಲ್ಲಿ ಹೊಡೆದ, ಮಕ್ಕಳು ಹೆದರಿ ಕಿರುಚಿದ ಶಬ್ದ. ನಮಗೋ ಗಾಬರಿ-ಭಯ! ನಿದ್ದೆ ದೂರ ಓಡಿತು. ಕಳ್ಳರು ಬಂದಿದ್ದಾರೆಯೇ? ಮನೆ ಮಂದಿ ಜಗಳ ಆಡುತ್ತಿದ್ದಾರೆಯೇ? ಏನಿದು ಗಲಾಟೆ ಎಂದೆಲ್ಲಾ ಯೋಚಿಸುತ್ತಿರುವಾಗಲೇ ನಿಧಾನಕ್ಕೆ ಗದ್ದಲ ಕರಗಿತು. ಆನಂತರದಲ್ಲಿ ನಾವು ಹೆದರಿಕೊಂಡೇ ನಿದ್ದೆ ಮಾಡಿದ್ದಾಯಿತು. ಮರುದಿನ ವಿಚಾರಿಸುವಾಗ ತಿಳಿದು ಬಂದ ವಿಷಯವೇನು ಗೊತ್ತೇ? ಪಕ್ಕದ ಮನೆಯವರು ಮಲಗಿದ್ದ ಕೋಣೆಯಲ್ಲಿ ಇಲಿಯೊಂದು ಸೇರಿಕೊಂಡಿತ್ತಂತೆ. ಎಲ್ಲರೂ ಎಚ್ಚರವಿದ್ದಾಗಲೇ ಅದು ಕಣ್ಣಿಗೆ ಬಿದ್ದಿದೆ. ಅದನ್ನು ಹೊಡೆದು ಹಾಕಲೆಂದು ಎಲ್ಲರೂ ಮುಂದಾಗಿ…ಅಷ್ಟೆ …… ಕರ್ಮಕಾಂಡವಲ್ಲದೆ ಮತ್ತೇನು ?! ತಮ್ಮನ್ನು ಸಾಯಿಸಲು ಔಷಧಿ ಹಾಕಿದ್ದಾರೆ ಎಂದು ಇಲಿಗಳು ಅದು ಹೇಗೋ ಪತ್ತೆ ಹಚ್ಚುತ್ತಿದ್ದವು. ಸಿಹಿತಿಂಡಿಯ ಮೇಲೆ, ವಡೆ ಅಥವಾ ಬೋಂಡಾದ ಮೇಲೆ ಔಷಧಿ ಹಾಕಿಟ್ಟರೆ- ಆ ತಿಂಡಿಯನ್ನು ಅವು ಮೂಸಿಯೂ ನೋಡದೆ ಜೀವ ಉಳಿಸಿಕೊಳ್ಳುತ್ತಿದ್ದವು. ಆಗ ಬಂದದ್ದೇ ಇಲಿ ಬೋನು. ಅದರ ಒಳಕ್ಕೆ ಕೊಬ್ಬರಿಯ ಚೂರು ಅಥವಾ ಸಿಹಿತಿಂಡಿಯನ್ನು ನೇತು ಹಾಕಲಾಗುತ್ತಿತ್ತು. ನಾಲಗೆಯ ಚಪಲಕ್ಕೆ ಇಲಿಗಳು ಬಲಿಯಾಗುತ್ತಿದ್ದವು. ಕದಿಯಲು ಬಂದು, ಆ ಬೋನ್‌ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದವು. ನಡುರಾತ್ರಿ ಅಡುಗೆಮನೇಲಿ ಅಥವಾ ಅಟ್ಟದ ಮೇಲಿಂದ “ಢಬ್’ ಎಂಬ ಸದ್ದು ಕೇಳಿಸಿದರೆ, ಅಮ್ಮನೋ ಅಪ್ಪನೋ- “ಇಲಿ ಸಿಕ್ಕಿಕೊಳು¤. ಬೆಳಗ್ಗೆ ಅದನ್ನು ಹೊಡೆದು ಹಾಕೋಣ’ ಎನ್ನುತ್ತಲೇ ಮಗ್ಗಲು ಬದಲಿಸುತ್ತಿದ್ದರು. ಮರುದಿನ ಬೆಳಗ್ಗೆ ಅದನ್ನು ಹಿರಿಯರ ಮೂಡ್‌ಗೆ ತಕ್ಕಂತೆ ಹೊಡೆದು ಹಾಕುವ ಅಥವಾ ಮನೆಯಿಂದ ದೂರ ಕೊಂಡೊಯ್ದು ಬಿಡುವ ಕೆಲಸ ಆಗುತ್ತಿತ್ತು. ಡೇ ಶಿಫ್ಟ್ ಇಲಿಗಳು…
ಊರಿನ ಇಲಿಗಳನ್ನು ಊರಲ್ಲೆ ಬಿಟ್ಟು, (ಇಲಿ ನೆನಪುಗಳೊಡನೆ) ಬೆಂಗಳೂರಿಗೆ ಬಂದರೆ, ಮೆಜಸ್ಟಿಕ್ ಬಸ್ ಸ್ಟ್ಯಾಂಡ್‌ನಲ್ಲಿಯೇ ಇಲಿಯ ದರ್ಶನವಾಗಬೇಕೇ? ಪ್ಲಾಟ್‌ಫಾರ್ಮ್ ಬಳಿಯ ತೂತಿನಿಂದ ಇಲಿಯೊಂದು ಹೊರಬಂದು, ಹತ್ತಿರದಲ್ಲಿ ಬಿದ್ದಿದ್ದ ಬಿಸ್ಕತ್ತನ್ನು ತಿಂದು ಓಡಿತು! ಅಬ್ಟಾ, ಎಷ್ಟು ಧೈರ್ಯ? ಹಾಡು ಹಗಲೇ, ರಾಜಾರೋಷವಾಗಿ, ಅಷ್ಟು ಜನರ ಕಾಲ್ಸಂಧಿಯಲ್ಲಿ ಹೀಗೆ ಇಲಿ ಕಾಣಿಸಿದ್ದು! ಅದರ ಸಾಹಸ ! ಆ ಕ್ಷಣ ನನ್ನಲ್ಲಿ ಒಂದಿಷ್ಟು ಗಲಿಬಿಲಿ ಉಂಟಾದದ್ದು ಸತ್ಯ! ನಮ್ಮೂರಿನ ಇಲಿಗಳದೇನಿದ್ದರೂ ರಾತ್ರಿ ಪಾಳಿ. ಹಗಲು ಬೇಕೆಂದರೂ ಅವುಗಳ ದರ್ಶನ ದುರ್ಲಭ. ಹಗಲಿಡೀ ಎಲ್ಲಿರುತ್ತಿದ್ದವೋ! ಈ ಬೆಂಗಳೂರಿನಲ್ಲಿ, ಕಸದ ರಾಶಿ ಇರುವ ಜಾಗದಲ್ಲಿ, ಹಗಲು ರಾತ್ರಿಯ ವ್ಯತ್ಯಾಸವಿಲ್ಲದೆ ಇಲಿಗಳು ದರ್ಶನಕೊಡುತ್ತವೆ. ಖಾಲಿ ನಿವೇಶನಗಳನ್ನು ತಮ್ಮದೇ ಸಾಮ್ರಾಜ್ಯವೆಂಬಂತೆ ಬಿಲ ಕೊರೆದು ಜಲ ಮರುಪೂರಣಕ್ಕೆ ತಮ್ಮದೇ ಕೊಡುಗೆಯನ್ನು ನೀಡುತ್ತವೆ. ಬೆಂಗಳೂರಿನ ಅಂತರ್ಜಲ ಮಟ್ಟ ಸ್ವಲ್ಪವಾದರೂ ಉಳಿದಿದ್ದರೆ ಅದಕ್ಕೆ ಇಲಿ-ಹೆಗ್ಗಣಗಳ ಕೊಡುಗೆಯ ಸಹಕಾರ ಖಂಡಿತವಾಗಿಯೂ ಇದೆ ಎಂದು ಒಪ್ಪಿಕೊಳ್ಳುವುದಕ್ಕೆ ನನಗೆ ಯಾವ ಬಿಗುಮಾನವೂ ಇಲ್ಲ. ಮನೆಯ ಪಕ್ಕದ ಖಾಲಿ ನಿವೇಶನದಲ್ಲಿ ನಾವು ನೆಟ್ಟ ಗಿಡಗಳು ಈ ಇಲಿಯ ಬಿಲದ ಕಾರಣದಿಂದ ಉದ್ಧಾರವಾಗದಿದ್ದರೂ ಮರುಗುವುದನ್ನು ಬಿಟ್ಟುಬಿಟ್ಟಿದ್ದೇನೆ…. ದಷ್ಟಪುಷ್ಟವಾಗಿ ಬೆಳೆದಿರುವ ಇಲಿ-ಹೆಗ್ಗಣಗಳನ್ನು ನೋಡುವಾಗ ಇವು ಹೊಟ್ಟೆಗೆ ಏನು ತಿನ್ನುತ್ತವೆ ? ಎಂಬ ಪ್ರಶ್ನೆ ಮತ್ತೆ ಮತ್ತೆ ಮನಸ್ಸಿನಲ್ಲಿ ಉದಯಿಸುತ್ತದೆ… -ಸುರೇಖಾ ಭೀಮಗುಳಿ