ಉಡುಪಿ: ಪರ್ಯಾಯ ಪೀಠ ಏರಲಿರುವ ಅದಮಾರು ಮಠದ ಕಿರಿಯ ಯತಿಗಳಾದ ಶ್ರೀ ಈಶತೀರ್ಥ ಶ್ರೀಪಾದರು ಜೋಡುಕಟ್ಟೆಯಲ್ಲಿ ದೇವರಿಗೆ ಪೂಜೆಯನ್ನು ನೆರವೇರಿಸುವುದರೊಂದಿಗೆ ಅವರ ಪುರಪ್ರವೇಶ ಮೆರವಣಿಗೆ ಬುಧವಾರ ವೈಭವದಿಂದ ನೆರವೇರಿತು.
ಅಲಂಕೃತ ಚಿನ್ನದ ಪಲ್ಲಕ್ಕಿಯಲ್ಲಿ ಪಟ್ಟದ ದೇವರ ಪೆಟ್ಟಿಗೆಯನ್ನಿರಿಸಿ ಮುಂದೆ ಸಾಗಿತು. ಇದೇ ಮೊದಲ ಬಾರಿಗೆ ಶ್ರೀಪಾದರು ಕಾಲ್ನಡಿಗೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದರು. ಮೆರವಣಿಗೆ ಹಳೆಯ ಡಯಾನ ಸರ್ಕಲ್, ಕೊಳದ ಪೇಟೆ, ತೆಂಕುಪೇಟೆ ಮೂಲಕ ರಥಬೀದಿಗೆ ತಲುಪಿತು. 50ಕ್ಕೂ ಅಧಿಕ ಕಲಾ ತಂಡಗಳ ಕಲಾಪ್ರಕಾರಗಳು ಪ್ರದರ್ಶನಗೊಂಡವು. ರಸ್ತೆಯಂಚಿನಲ್ಲಿ ಜನರು ನಿಂತು ಮೆರವಣಿಗೆಯನ್ನು ಕಣ್ತುಂಬಿಕೊಂಡರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮುಂತಾದ ಗಣ್ಯರು ಮೆರವಣಿಗೆಯಲ್ಲಿದ್ದರು.
ಪೇಜಾವರ ಶ್ರೀ ಮುಸ್ಲಿಂ ಅಭಿಮಾನಿ ಬಳಗ ಸೇರಿದಂತೆ ಹಲವು ಸಂಘಟನೆಯವರಿಂದ 9 ಕಡೆ ಕುಡಿಯಲು ತಂಪು ಪಾನೀಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಮೆರವಣಿಗೆಯಲ್ಲಿ ಸ್ವತ್ಛತೆಗೆ ಆದ್ಯತೆ ನೀಡಲಾ ಗಿತ್ತು. ಸ್ವತ್ಛತೆಗೆ ವಿದ್ಯಾರ್ಥಿಗಳು, ಪೌರಕಾರ್ಮಿಕರು ಸಹಕರಿಸಿದರು.
ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಶ್ರೀಚಂದ್ರೇಶ್ವರ, ಅನಂತೇಶ್ವರ, ಕೃಷ್ಣ- ಮುಖ್ಯಪ್ರಾಣ ದೇವರ ದರ್ಶನ ಪಡೆದ ಬಳಿಕ ಸಂಜೆ 5.55ರ ಶುಭಮುಹೂರ್ತದಲ್ಲಿ ಅದಮಾರು ಮಠವನ್ನು ಪ್ರವೇಶಿಸಿದರು.