ಸಾಗರ: ಕಾಣೆಯಾದ ಮುದ್ದಾದ ನಾಯಿಮರಿಯೊಂದು ಸಿಸಿ ಕ್ಯಾಮರಾ, ಸಾಮಾಜಿಕ ಜಾಲತಾಣಗಳ ನೆರವಿನಿಂದ ಮರಳಿ ಮನೆಗೆ ಸೇರಿದ ಘಟನೆ ನಡೆದಿದೆ.
ಜೆಸಿ ರಸ್ತೆಯಲ್ಲಿನ ಐಸ್‌ಕ್ರೀಂ ಮಾರಾಟಗಾರ ಪ್ರಶಾಂತ್ ಬಾಬು ಸಾಕಿದ್ದ ನಾಲ್ಕು ತಿಂಗಳ ಪುಟ್ಟ ನಾಯಿ ಮರಿ ಶುಕ್ರವಾರ ಮಧ್ಯಾಹ್ನದ ವೇಳೆ ಕಾಣೆಯಾಗಿ ಮನೆಯವರನ್ನು ಕಂಗಾಲು ಮಾಡಿತ್ತು.
ಅಂಗಡಿಗಳಿಗೆ ಐಸ್‌ಕ್ರೀಂ ವಿತರಿಸಲು ಪ್ರಶಾಂತ್‌ಬಾಬು ಶುಕ್ರವಾರ ಮಧ್ಯಾಹ್ನ ಮನೆಯಿಂದ ಹೊರಟಾಗ, ನಾಲ್ಕು ತಿಂಗಳ ಪೊಮೋರಿಯನ್ ನಾಯಿ ’ಕ್ಯೂಟಿ’ ಸಹ ಮನೆಯಿಂದ ಹೊರಗೆ ಬಂದಿದೆ. ಜೆಸಿ ರಸ್ತೆಯಲ್ಲಿ ವ್ಯಕ್ತಿಯೋರ್ವನ ಕಾಲ ಬುಡದಲ್ಲಿ ಪುಟ್ಟ ಮರಿ ಕಾಣಿಸಿಕೊಂಡಿದೆ. ಅದನ್ನು ಅವರು ಎತ್ತಿಕೊಂಡು ತಮ್ಮ ದ್ವಿಚಕ್ರವಾಹನದಲ್ಲಿ ತೆರಳಿದ್ದಾರೆ.
ನಾಯಿಮರಿ ಕಾಣೆಯಾದ ಹಿನ್ನೆಲೆಯಲ್ಲಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಪುಟ್ಟ ಮರಿಯನ್ನು ದ್ವಿಚಕ್ರವಾಹನದಲ್ಲಿ ಕೂರಿಸಿಕೊಂಡ ವ್ಯಕ್ತಿ ವಿಠ್ಠಲ ದೇವಸ್ಥಾನ ರಸ್ತೆ, ಅಶೋಕ ರಸ್ತೆಗಳಲ್ಲಿ ಸಂಚರಿಸಿದ ದೃಶ್ಯ ಕಂಡುಬಂದಿದೆ. ಅವುಗಳ ವಿಡಿಯೋ ಮತ್ತು ಫೋಟೋಗಳನ್ನು ವಿವಿಧ ವಾಟ್ಸ್‌ಆಪ್ ಗುಂಪುಗಳಲ್ಲಿ ಶೇರ್ ಮಾಡಲಾಗಿತ್ತು.
ಶನಿವಾರ ಬೆಳಗ್ಗೆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ವ್ಯಕ್ತಿ ದೂರವಾಣಿ ಮೂಲಕ ಸಂಪರ್ಕಿಸಿ, ನಾಯಿಮರಿ ತನ್ನ ಮನೆಯಲ್ಲಿ ಇರುವುದಾಗಿ ತಿಳಿಸಿದ್ದಾನೆ. ತಕ್ಷಣ ಪ್ರಶಾಂತ್‌ಬಾಬು ವಾಹನದಲ್ಲಿ ಧಾವಿಸಿ, ನಾಯಿ ಮರಿಯನ್ನು ಮನೆಗೆ ಕರೆತಂದಿದ್ದಾರೆ. ಕಾಣೆಯಾಗಿದ್ದ ನಾಯಿ ಮರಿ ಪತ್ತೆಗೆ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ಸಿಸಿ ಕ್ಯಾಮರಾದ ದೃಶ್ಯ ಸಹಕಾರಿಯಾಗಿದೆ.
ಶುಕ್ರವಾರ ಮಧ್ಯಾಹ್ನ ನಾಯಿ ಮರಿ ಕಾಣೆಯಾಗಿತ್ತು. ಸಿಸಿ ಕ್ಯಾಮರಾದ ದೃಶ್ಯಗಳನ್ನು ಪರಿಶೀಲಿಸಿ ವಾಟ್ಸ್‌ಆಪ್ ಗ್ರೂಪ್‌ಗಳಲ್ಲಿ ಶೇರ್ ಮಾಡಿದ್ದರಿಂದ, ನಾಯಿಯನ್ನು ಕರೆದುಕೊಂಡು ಹೋಗಿದ್ದ ವ್ಯಕ್ತಿಯೇ ದೂರವಾಣಿ ಮೂಲಕ ಸಂಪರ್ಕಿಸಲು ಸಾಧ್ಯವಾಗಿದೆ.
ಶೇರ್ ಮಾಡಲಾಗಿದ್ದ ದೃಶ್ಯಾವಳಿಗಳನ್ನು ಡಿಲಿಟ್ ಮಾಡಬೇಕೆಂದು ಆ ವ್ಯಕ್ತಿ ಕೋರಿದ್ದಾರೆ.