Advertisement

ರಾಜಧಾನಿಯಲ್ಲಿ ಗೊಂಬೆಯಾಟ

09:45 PM Aug 31, 2019 | Sriram |

ಗೊಂಬೆಗಳೆಂದರೆ ಥಟ್ಟನೆ ನೆನಪಾಗುವುದು ನವಿರಾದ ಬಾಲ್ಯ. ಕವಿತಾ ಕಾರ್ನಾಡರು ತಮ್ಮ ಚಿಕ್ಕಪ್ಪನಾಗಿರುವ ಮೇರುಪ್ರತಿಭೆ ಗಿರೀಶ ಕಾರ್ನಾಡರ ಬಗ್ಗೆ ಹೇಳುತ್ತ ಅವರು ವಿದೇಶಕ್ಕೆ ಹೋದಾಗಲೆಲ್ಲ ಆಯಾ ದೇಶದ ಬೊಂಬೆಗಳನ್ನು ನನಗಾಗಿ ತರುತ್ತಿದ್ದರು ಎಂದು ತಮ್ಮ ಬರಹವೊಂದರಲ್ಲಿ ಆಪ್ತವಾಗಿ ನೆನಪಿಸಿಕೊಳ್ಳುತ್ತಾರೆ. ಗೊಂಬೆಗಳಿಲ್ಲದ ಬಾಲ್ಯವಾದರೂ ಎಂಥದ್ದು?

Advertisement

ಹಾಗೆಂದು ಗೊಂಬೆಗಳು ಬಾಲ್ಯಕ್ಕಷ್ಟೇ ಸೀಮಿತವಾಗಲಿಲ್ಲ. ಗೊಂಬೆಯನ್ನು ಹಿಂದಿಯಲ್ಲಿ ಗುಡಿಯಾ ಅನ್ನುತ್ತಾರೆ. ಮುದ್ದಾದ ಹೆಣ್ಣುಮಕ್ಕಳಿಗೂ ಕೂಡ ಸಾಮಾನ್ಯವಾಗಿ ಹೀಗೆ ಹೇಳುವುದುಂಟು.ಲೇ ಗಯೀ ದಿಲ್‌ ಗುಡಿಯಾ ಜಪಾನ್‌ ಕೀ, ಎಂದು ಬರೆದರು ಖ್ಯಾತ ಗೀತರಚನಾಕಾರ ಹಸ್ರತ್‌ ಜೈಪುರಿ. ಗುಡಿಯಾ, ಹಮೆ ರೂಠೀ ರಹೋಗಿ, ಕಬ್‌ ತಕ್‌ ನ ಹಸೋಗಿ?, ಎಂಬ ಮಜೂಹ್‌ ಸುಲ್ತಾನ್‌ ಪುರಿಯವರ ಮಧುರ ಗೀತೆಗೆ ದನಿಯಾದವರು ಲತಾ ಮಂಗೇಶ್ಕರ್‌. ಅವರಿವರ್ಯಾಕೆ? ನಮ್ಮ ನಾದಬ್ರಹ್ಮ ಹಂಸಲೇಖರವರು ಖುದ್ದು ಬೊಂಬೆ ಬೊಂಬೆ… ಎಂಬ ಗೀತಸಾಹಿತ್ಯವನ್ನು ಬರೆದು ಸೌಂದರ್ಯವನ್ನು ಗೊಂಬೆಗೆ ಆವಾಹಿಸಿದವರು. ಸೌಂದರ್ಯಕ್ಕೆ ಬಾರ್ಬಿ ಗೊಂಬೆಗಳು, ಅಪ್ಪುಗೆಗೆ ಟೆಡ್ಡಿಬೇರ್‌ ಗೊಂಬೆಗಳು, ಮಾಟಮಂತ್ರಕ್ಕೆ ವುಡೂ ಬೊಂಬೆಗಳು, ಹಾರರ್‌ ಸಿನೆಮಾಗಳಿಂದಾಗಿ ವಿಲನ್‌ ಆಗಿಬಿಟ್ಟ ವಿಲಕ್ಷಣ ಗೊಂಬೆಗಳು… ಹೀಗೆ ಹೇಳುತ್ತ ಹೋದರೆ ಗೊಂಬೆಕಥೆಗಳು ನಾಲ್ಕು ಜನ್ಮಗಳಿಗಾಗುವಷ್ಟಿವೆ !

ಶಂಕರನೆಂಬ ಕಲಾಲೋಕದ ಬ್ರಹ್ಮ
ಗೊಂಬೆಗಳ ಬಗ್ಗೆ ಈವರೆಗೆ ಸಾವಿರಗಟ್ಟಲೆ ಕಥೆಗಳು ಬಂದಿರಬಹುದು. ಆದರೆ, ಶಂಕರ್‌ ಕೇವಲ ಕಥೆಗಳನ್ನಷ್ಟೇ ಅಲ್ಲ. ಗೊಂಬೆಗಳ ವಿಶಿಷ್ಟ ಲೋಕವನ್ನೇ ಸೃಷ್ಟಿಸಿದವರು. ಈ ಶಂಕರ್‌ ಮತ್ಯಾರೂ ಅಲ್ಲ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ತಮ್ಮ ಮೊನಚಾದ ಗೆರೆಗಳಿಂದಲೇ ಖ್ಯಾತರಾದ ಪ್ರತಿಭಾವಂತ ಕಾಟೂನಿಸ್ಟ್‌ ಕೆ. ಶಂಕರ್‌ ಪಿಳ್ಳೆ . ಇಂದಿಗೂ ಈ ಹೆಸರು ಬಂದಾಗ ಥಟ್ಟನೆ ನೆನಪಾಗುವುದು ಚಿಲ್ಡ್ರನ್ಸ್‌ ಬುಕ್‌ ಟ್ರಸ್ಟ್‌ (ಸಿ.ಬಿ.ಟಿ). 1949ರಲ್ಲಿ ಹಂಗೇರಿಗೆ ಹೋಗಿ ದ್ದಾಗ ಹಂಗೇರಿ ದೇಶದ ರಾಯಭಾರಿಯೊಬ್ಬರು ಒಂದು ಗೊಂಬೆಯನ್ನು ಬಹುಮಾನ ರೂಪವಾಗಿ ನೀಡಲು ಪಿಳ್ಳೆ„ ಯವರಿಗೆ ನೀಡಿದ್ದರಂತೆ. ಪಿಳ್ಳೆ ಯವರಿಗೆ ಆ ಗೊಂಬೆಯು ಅದೆಷ್ಟು ಹಿಡಿಸಿತ್ತೆಂದರೆ ವಿದೇಶಪ್ರವಾಸ ಹೋದಾಗಲೆಲ್ಲ ಆಯಾ ದೇಶಗಳ ಗೊಂಬೆಗಳನ್ನು ತಂದು ಸಂಗ್ರಹಿಸಿಡುವ ಹೊಸ ಹವ್ಯಾಸವೊಂದು ಅವರಲ್ಲಿ ಹುಟ್ಟಿಕೊಂಡಿತ್ತು.

ಇಂದು ದಿಲ್ಲಿಯ ಬಹಾದೂರ್‌ ಶಾ ಜಫ‌ರ್‌ ಮಾರ್ಗದಲ್ಲಿ, ಐಟಿಒ ಮೆಟ್ರೋ ಸ್ಟೇಷನ್ನಿಗೆ ಹೊಂದಿಕೊಂಡೇ ಇರುವ ವಸ್ತುಸಂಗ್ರಹಾಲಯವೊಂದು ಪಿಳ್ಳೆ çಯವರು ಸಂಗ್ರಹಿಸಿದ್ದ ಅಷ್ಟೂ ಗೊಂಬೆಗಳನ್ನು ಆಸಕ್ತರ ವೀಕ್ಷಣೆಗಾಗಿ ಇಟ್ಟಿದೆ. ತಕ್ಕಮಟ್ಟಿಗೆ ವಿಶಾಲವೆಂದು ಹೇಳಬಹುದಾದ ಸುಸಜ್ಜಿತ ಕೋಣೆಯಲ್ಲಿ ಎತ್ತ ನೋಡಿದರೂ ಸುಂದರ ಗೊಂಬೆಗಳೇ. ಪೆರು, ನ್ಯೂಜಿಲ್ಯಾಂಡ್‌, ಸ್ಲೊವಾಕಿಯಾ, ಜರ್ಮನಿ, ಘಾನಾ, ಬಲ್ಗೇರಿಯಾ, ತೈವಾನ್‌… ಅದೆಷ್ಟು ದೇಶಗಳು, ಅದೆಷ್ಟು ಗೊಂಬೆಗಳು! ಇವುಗಳಲ್ಲಿ ಬಹಳಷ್ಟು ಗೊಂಬೆಗಳು ಪಿಳ್ಳೆ„ಯವರು ಸ್ವತಃ ಸಂಗ್ರಹಿಸಿದ್ದಾದರೆ, ಹಲವಾರು ಗೊಂಬೆಗಳು ವಿವಿಧ ದೇಶಗಳ ಹಿರಿಯ ರಾಜಕೀಯ ಮತ್ತು ಅಧಿಕಾರಿ ಧುರೀಣರಿಂದ ಕೊಡುಗೆಯಾಗಿ ನೀಡಲ್ಪಟ್ಟವುಗಳು. ಹೀಗೆ ಹಂಗೇರಿಯ ಒಂದು ಗೊಂಬೆಯಿಂದ ಶುರುವಾಗಿದ್ದ ಕನಸೊಂದು ಬೆಳೆಯುತ್ತ ಇಂದು ಇಲ್ಲಿ ಎರಡಿಂಚಿನಿಂದ ಮೂರಡಿ ಎತ್ತರವಿರುವ, ಎಂಭತ್ತೈದು ದೇಶಗಳಿಂದ ನೀಡಲ್ಪಟ್ಟ ಅಂದಾಜು ಏಳು ಸಾವಿರ ಗೊಂಬೆಗಳಿವೆ.

ಗೊಂಬೆಗಳ ಮ್ಯೂಸಿಯಂ
ಅಷ್ಟಕ್ಕೂ ಮುದ್ದುಗೊಂಬೆಗಳ ಲೋಕಕ್ಕೆ ಮರುಳಾಗದಿರುವವರ್ಯಾರು? ಮಕ್ಕಳಷ್ಟೇ ಅಲ್ಲ, ಜಗತ್ತಿನಾದ್ಯಂತ ಹಲವು ಮಹಾನಾಯಕರು ಶಂಕರ್‌ ಸೃಷ್ಟಿಸಿದ ಈ ಸ್ವರ್ಗದ ಮೋಡಿಗೆ ಮರುಳಾಗಿದ್ದಾರೆ. ಸಂಗ್ರಹದಲ್ಲಿದ್ದ ಗೊಂಬೆಗಳ ಸಂಖ್ಯೆಯು ಐನೂರರ ಆಸುಪಾಸಿನಲ್ಲಿದ್ದಾಗ ಮಕ್ಕಳ ಚಿತ್ರಗಳೊಂದಿಗೆ ಇವುಗಳನ್ನು ಮೊದಲಬಾರಿ ಪ್ರದರ್ಶಿಸಲಾಗಿತ್ತು. ಖುದ್ದು ನೆಹರೂ ಮತ್ತು ಇಂದಿರಾಗಾಂಧಿಯವರು ಈ ವಿಶಿಷ್ಟವಾದ ಸಂಗ್ರಹವನ್ನು ನೋಡಿ ಇದಕ್ಕಾಗಿಯೇ ಒಂದು ವಸ್ತುಸಂಗ್ರಹಾಲಯವನ್ನು ನಿರ್ಮಿಸುವ ಬಗ್ಗೆ ಮಹಾತ್ವಾಕಾಂಕ್ಷಿಯಾಗಿದ್ದ ಶಂಕರ್‌ ಮನದಲ್ಲಿ ಬೀಜ ಬಿತ್ತಿದ್ದರು. ಮುಂದೆ 1965 ರಲ್ಲಿ ಭಾರತದ ಅಂದಿನ ರಾಷ್ಟ್ರಪತಿಗಳಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್‌ರವರ ಉದ್ಘಾಟನೆಯೊಂದಿಗೆ ಈ ಗೊಂಬೆಗಳ ಮ್ಯೂಸಿಯಮ್‌ ಲೋಕಾರ್ಪಣೆಯಾಗಿತ್ತು. ಮುಂದಿನ ವರ್ಷಗಳಲ್ಲಿ ಮೊರಾರ್ಜಿ ದೇಸಾಯಿ, ಕಮಲಾದೇವಿ ಚಟ್ಟೋಪಾಧ್ಯಾಯರಂಥ ದಿಗ್ಗಜರನ್ನೂ ಸೇರಿದಂತೆ ಅದೆಷ್ಟೋ ದೇಶಗಳ ರಾಜಮನೆತನದ ಮುಖ್ಯಸ್ಥರುಗಳು, ರಾಷ್ಟ್ರಪತಿಗಳು, ರಾಯಭಾರಿಗಳು ಮತ್ತು ಖ್ಯಾತನಾಮರು ಖುದ್ದು ಈ ಸ್ಥಳಕ್ಕೆ ಭೇಟಿ ನೀಡಿದ್ದಲ್ಲದೆ ತಮ್ಮ ನಾಡಿನ ಸಾಂಸ್ಕೃತಿಕ ವೈಭವವನ್ನು ಸಾರುವ ಗೊಂಬೆಗಳನ್ನು ಕೈಯಾರೆ ಕೊಡುಗೆಯಾಗಿ ನೀಡಿದ್ದಾರೆ.

Advertisement

ಪಿಳ್ಳೆಯವರ ಕನಸಾಗಿದ್ದ ಈ ವಸ್ತುಸಂಗ್ರಹಾಲಯವು ಕಾಲಾನುಕ್ರಮದಲ್ಲಿ ವಿಶ್ವದ ಅಪರೂಪದ ಮ್ಯೂಸಿಯಮ್‌ ಗಳಲ್ಲಿ ಒಂದೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿತು. ಅಂತರಾಷ್ಟ್ರೀಯ ಮಟ್ಟದ ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನು ತನ್ನದಾಗಿಸಿಕೊಂಡಿತು. ಎಂಭತ್ತೈದು ರಾಷ್ಟ್ರಗಳ ಜನಜೀವನವ ನ್ನಲ್ಲದೆ ಭಾರತದ ಅಷ್ಟೂ ರಾಜ್ಯಗಳ ಸಂಸ್ಕೃತಿಯನ್ನೂ ಇಲ್ಲಿ ಗೊಂಬೆಗಳ ರೂಪದಲ್ಲಿ ಅತ್ಯದ್ಭುತವೆನ್ನಿಸುವಂಥ ಡೀಟೈಲಿಂಗ್‌ ಮೂಲಕವಾಗಿ ತೋರಿಸಲಾಗಿದೆ. ಪಿಳ್ಳೆ„ಯವರ ಈ ಗೊಂಬೆಸಂಗ್ರಹದ ಖ್ಯಾತಿಯು ಅದೆಷ್ಟರ ಮಟ್ಟಿಗಿತ್ತೆಂದರೆ ವಸ್ತುಸಂಗ್ರಹಾಲಯವು “ಮಿನಿ ವಿಶ್ವಸಂಸ್ಥೆ’ಯೆಂದೇ ಜಾಗತಿಕ ಮಟ್ಟಿನಲ್ಲಿ ಹೆಸರಾಗಿತ್ತು ಎನ್ನಲಾಗುತ್ತದೆ.
ಕನಸುಗಾರ-ಕಲಾಪ್ರೇಮಿ-ಕಾಟೂನಿಸ್ಟ್‌ 1932ರಿಂದ 1946 ರವರೆಗೆ ದ ಹಿಂದೂಸ್ತಾನ್‌ ಟೈಮ್ಸ್‌ ನಲ್ಲಿ ವ್ಯಂಗ್ಯಚಿತ್ರಕಾರರಾಗಿದ್ದ ಶಂಕರ್‌ ಪಿಳ್ಳೆ ç 1948ರಲ್ಲಿ ತಮ್ಮ ಕಾಟೂìನುಗಳಿಗೆಂದೇ ಮೀಸಲಿಡಲು ಶಂಕರ್ ವೀಕ್ಲಿ ಎಂಬ ಕಾಟೂìನ್‌ ಜರ್ನಲ್‌ ಒಂದನ್ನು ಆರಂಭಿಸಿದ್ದರು. ಇಂದು ಶಂಕರ್ ಇಂಟರ್‌ನ್ಯಾಷನಲ್‌ ಚಿಲ್ಡ್ರನ್ಸ್‌ ಕಾಂಪಿಟಿಷನ್‌ (ಎಸ್‌ಐಸಿಸಿ) ಎಂದು ಹೆಸರಾಗಿರುವ ಮಕ್ಕಳ ಚಿತ್ರಕಲಾ ಸ್ಪರ್ಧೆಯ ಹಿಂದಿರುವುದು ಇದೇ ಪಿಳ್ಳೆ . ಮುಂದೆ 1957ರಲ್ಲಿ ಚಿಲ್ಡ್ರನ್ಸ್‌ ಬುಕ್‌ ಟ್ರಸ್ಟ್‌ ಆರಂಭವಾದ ನಂತರ ಶಂಕರ್ ವೀಕ್ಲಿ ಪತ್ರಿಕೆಯು ನಿಂತುಹೋಯಿತು. ಭಾರತದಾದ್ಯಂತ ಬಾಲಸಾಹಿತ್ಯಕ್ಕೆ ಮತ್ತು ಮಕ್ಕಳ ಓದಿನ ಹಸಿವಿಗೆ ಸಿಬಿಟಿ ನೀಡಿರುವ ಕೊಡುಗೆಯು ಬಲುದೊಡ್ಡದು. ಇಂದು ಮಕ್ಕಳಿಗಾಗಿಯೇ ಹೊರತರಲಾಗುವ ಪುರವಣಿಗಳು, ಡಾ. ಬಿ. ಸಿ.ರಾಯ್‌ ಸ್ಮರಣಾರ್ಥ ಮಕ್ಕಳ ಗ್ರಂಥಾಲಯ, ಇಂದ್ರಪ್ರಸ್ಥ ಮುದ್ರಣಾಲಯಗಳಂಥ ಯೋಜನೆಗಳೊಂದಿಗೆ ಸಿಬಿಟಿ ಹೆಮ್ಮರವಾಗಿ ಬೆಳೆದು ನಿಂತಿದೆ.

ತಮ್ಮ ಎಂಬತ್ತೇಳು ವರ್ಷಗಳ ಜೀವಿತಾವಧಿಯಲ್ಲಿ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣಗಳಿಂದ ಸನ್ಮಾನಿತರಾಗಿದ್ದ ಪಿಳ್ಳೆ çಯವರು ಜಾಗತಿಕ ಮಟ್ಟದ ಹಲವು ಪ್ರತಿಷ್ಠಿತ ಪುರಸ್ಕಾರಗಳನ್ನೂ ಕೂಡ ತನ್ನದಾಗಿಸಿಕೊಂಡ ಮಹಾಸಾಧಕ. ಇಂದು ಈ ಅಪರೂಪದ ಸಂಗ್ರಹವನ್ನು ನೋಡಿದಾಗಲೆಲ್ಲ ಜಗತ್ತಿನ ಸಾಂಸ್ಕೃತಿಕ ವೈವಿಧ್ಯವನ್ನು ಇಷ್ಟು ಸೃಜನಶೀಲವಾಗಿ ತೋರಿಸಬಹುದೆಂಬ ಕಲ್ಪನೆಯು ಈ ಕಲಾಪ್ರೇಮಿಯಲ್ಲಿ ಅದ್ಹೇಗೆ ಹುಟ್ಟಿಕೊಂಡಿತೋ ಎಂದು ಅಚ್ಚರಿಯಾಗುತ್ತದೆ. ಹೇಳಿಕೊಳ್ಳಲು ಅವುಗಳು ಕೇವಲ ಗೊಂಬೆಯಾಗಿರಬಹುದು. ಆದರೆ, ಗೊಂಬೆಗಳ ರೂಪದಲ್ಲಿ ಪಿಳ್ಳೆ„ಯವರು ಕಟ್ಟಿಕೊಟ್ಟ ಕಲಾಪರಂಪರೆಯು ಮಕ್ಕಳಾಟವೇನಲ್ಲ.

-ಪ್ರಸಾದ್‌ ನಾೖಕ್‌

Advertisement

Udayavani is now on Telegram. Click here to join our channel and stay updated with the latest news.

Next